ಸಂಘಟನೆಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ: ಮಾಲತಿ ನುಳಿಯಾಲು
ನಿಡ್ಪಳ್ಳಿ; ಸಂಘಟನೆಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ, ಈ ರೀತಿಯ ಕಾರ್ಯಕ್ರಮ ಆಯೋಜನೆಗಳು ಸಮುದಾಯದ ಪ್ರತಿಯೊಬ್ಬರನ್ನು ಒಗ್ಗೂಡಿಸಲು ಪೂರಕ ಎಂದು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕಿ ಮಾಲತಿ ನುಳಿಯಾಲು ಹೇಳಿದರು.
ಇವರು ಅ.4 ರಂದು ನಡೆದ ಕರಾಡ ಬ್ರಾಹ್ಮಣ ಸೇವಾ ಸಮಿತಿ ನಿಡಳ್ಳಿ , ಕರಾಡ ಸೇವಾ ಸಮಿತಿ ಸುಳ್ಯಪದವು ಮತ್ತು ಕರಾಡ ಯುವ ವೇದಿಕೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕಜೆಮೂಲೆ ವೆಂಕಟೇಶ್ ಭಟ್, ದರ್ಭೆ ಫಾಟೆ ವೆಂಕಟ್ರಮಣ ಭಟ್, ಮುಂಡೂರು ಮುರಳೀಕೃಷ್ಣ ಇವರ ಸ್ಮರಣಾರ್ಥ ಕರಾಡ ಬ್ರಾಹ್ಮಣರ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮವನ್ನು ಬುಳೆನಡ್ಕ ವಿಷ್ಣು ಭಟ್ ರವರ ಗದ್ದೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಅಧ್ಯಕ್ಷ ರಮಾನಂದ ಎಡಮಲೆ ಮಾತನಾಡಿ ಪ್ರಸ್ತುತ ನಮ್ಮ ಸಮುದಾಯದಲ್ಲಿ ಕ್ರಿಕೆಟ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳ ಕ್ರೀಡಾಕೂಟಗಳು ನಡೆದಿವೆ. ಆದರೆ ಈ ‘ಕೆಸರಿನಲ್ಲಿ ಒಂದು ದಿನ’ ಕಾರ್ಯಕ್ರಮವು ನಮ್ಮ ಸಮಾಜಕ್ಕೆ ಹೆಮ್ಮೆಯ ಕಿರೀಟ ಇದ್ದಂತೆ ಎಂದು ಹೇಳಿದರು. ಮಂಗಳೂರಿನ ಮೆಡಿಗ್ಲೋಬ್ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ಭಟ್ ಬೀರಮೂಲೆ ಮಾತನಾಡಿ ನಮ್ಮ ಬಾಲ್ಯದಲ್ಲಿ ಗದ್ದೆಗಳಲ್ಲಿ ಬೇಸಾಯ ಸರ್ವೇಸಾಮಾನ್ಯವಾಗಿತ್ತು. ಇಂದಿನ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳು ಹೊಸ ಅನುಭವವನ್ನು ಕೊಡಲಿದೆ ಎಂದು ಶುಭ ಹಾರೈಸಿದರು.
ಬಾಯಾರಿನ ಹೋಮಿಯೋಪಥಿ ವೈದ್ಯರಾದ ಡಾ. ಮನು ಕೆದುಕೋಡಿ ಇವರು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಗದ್ದೆಯ ಕೆಲಸಗಳು ಆರೋಗ್ಯಕ್ಕೆ ಪೂರಕವಾಗಿದೆ. ಮಳೆಗಾಲವಾದ ಕಾರಣ ಈ ಕಾರ್ಯಕ್ರಮದಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿಯೂ ಚಿಂತಿಸಬೇಕಾಗಿಲ್ಲ ಎಂದರು.
ಶಂಕರ ಸದನ ಕ್ರೀಡಾ ಸಮಿತಿ ಪೆರ್ಲ ಇದರ ಅಧ್ಯಕ್ಷ ವಿಘ್ನೇಶ್ ಶಿರಂತಡ್ಕ ಇವರು ಮಾತನಾಡಿ, ಯುವಕರಿಂದ ಪ್ರಪ್ರಥಮ ಬಾರಿಗೆ ಈ ರೀತಿಯ ಆಯೋಜನೆ ಪ್ರಶಂಸನೀಯವಾಗಿದ್ದು, ಆಯೋಜಕದ ಪರಿಶ್ರಮವು ಫಲಪ್ರದವಾಗಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಕರಾಡ ಬ್ರಾಹ್ಮಣ ಸೇವಾ ಸಮಿತಿ ನಿಡ್ಪಳ್ಳಿ, ಪುತ್ತೂರು ಇದರ ಅಧ್ಯಕ್ಷ ಕೃಷ್ಣ ಭಟ್ ಬೀರಮೂಲೆ, ಪ್ರೆಸ್ಟೀಜ್ ಗ್ರೂಪ್ ಬೆಂಗಳೂರು ಇದರ ಸಹಾಯಕ ಮ್ಯಾನೇಜರ್ ರವೀಶ್ ಸಿ. ಎಚ್, ಬಿಎಸ್ಎನ್ಎಲ್ ಮಂಗಳೂರು ಇದರ ನಿವೃತ್ತ ಅಧಿಕಾರಿ ಶಿವಶಂಕರ ಭಟ್ ಕನ್ನಡ್ಕ, ಬಿಎಸ್ಎನ್ಎಲ್ ಕಾಸರಗೋಡು ಇದರ ನಿವೃತ್ತ ಅಧಿಕಾರಿ ಮಧುಸೂದನ್ ಪಿ, ಕೆ ಪಿ ಟಿ ಸಿ ಎಲ್ ಲಿಂಗನಮಕ್ಕಿ ಇದರ ಸಹಾಯಕ ಕಾರ್ಯವಾಹಕ ಇಂಜಿನಿಯರ್ ದುರ್ಗಾಪ್ರಸಾದ್ ಡಿ, ಕರಾಡ ಯುವ ವೇದಿಕೆ ಇದರ ಕಾರ್ಯದರ್ಶಿಗಳಾದ ಪ್ರಜ್ವಲ್ ಘಾಟೆ, ಶಾಲಿನಿ ಕಜಮೂಲೆ, ಲಲಿತಾ ಭಟ್ ಘಾಟೆ, ಶ್ರೀ ಕೃಷ್ಣ ಕುಮಾರ್ ಮುಂಡೂರು ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗದ್ದೆಗೆ ಬಾಗಿನ ಸಮರ್ಪಿಸುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸುಧಾಕರ ಭಟ್ ಬಂಟಾಜೆ, ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಕಾರ್ಯದರ್ಶಿ ಗಣೇಶ್ ಚೇರ್ಕೂಡ್ಲು ತಮ್ಮ ಅನುಭವವನ್ನು ಹಂಚಿ ಕೊಂಡರು.
ವೇದಿಕೆಯಲ್ಲಿ ಹಿರಿಯರಾದ ಸುಬ್ರಹ್ಮಣ್ಯ ಭಟ್ ಇಂದಾಜೆ, ಹೋಟೆಲ್ ಸಂತೃಪ್ತಿ ಪುತ್ತೂರು ಇದರ ಮಾಲೀಕ ಗಿರೀಶ್ ಚೋಕೆಮೂಲೆ, ಕರಾಡ ಬ್ರಾಹ್ಮಣ ಸೇವಾ ಸಮಿತಿ ನಿಡ್ಪಳ್ಳಿ ಇದರ ಕಾರ್ಯದರ್ಶಿ ರಾಮಕೃಷ್ಣ ಭಟ್ ಚಂದುಕೂಡ್ಲು, ಶ್ರೀ ಶಂಕರ ಭಾರತಿ ಸೌಹಾರ್ದ ಸಹಕಾರಿ ಪುತ್ತೂರು ಇದರ ಅಧ್ಯಕ್ಷ ನಾಗರಾಜ ಭಟ್ ಆರ್ತಿಕೂಡ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕರಾದ ಕುಮಾರ ನರಸಿಂಹ ಬುಳೇನಡ್ಕ, ಕೌಶಿಕ್ ಘಾಟೆ ಹಾಗೂ ಪ್ರಜ್ವಲ್ ಘಾಟೆ ಇವರುಗಳ ಸಂಘಟನಾ ಚಾತುರ್ಯಕ್ಕೆ ಸರ್ವರೂ ಮೆಚ್ಚುಗೆ ವ್ಯಕ್ತಪಡಿಸಿದರು. ಶೃತಿ ಬುಳೇನಡ್ಕ ಹಾಗೂ ವಿಜಯಶ್ರೀ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.