ಮೊಟ್ಟೆತ್ತಡ್ಕ-ಮುಕ್ರಂಪಾಡಿ ತಿರುವಿನಲ್ಲಿನ ನಾದುರಸ್ತಿಯಲ್ಲಿದ್ದ ರಸ್ತೆ ವಿಭಾಜಕ-ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸಿದ ಸೌಹಾರ್ದ ಪಿಕಪ್‌ನ ಆದಂ ಮೊಟ್ಟೆತ್ತಡ್ಕ

0

ಪುತ್ತೂರು: ಸರಕಾರ, ನಗರಸಭೆ ಮಾಡಬೇಕಾದ ಕೆಲಸವನ್ನು ಓರ್ವ ಪ್ರಜ್ಞಾವಂತ ನಾಗರಿಕ ಇದು ತನ್ನದೇ ಸೊತ್ತು ಎಂಬಂತೆ ತನ್ನ ಸ್ವಂತ ಖರ್ಚಿನಲ್ಲಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.


ಮೊಟ್ಟೆತ್ತಡ್ಕ-ಮುಕ್ರಂಪಾಡಿ ತಿರುವಿನಲ್ಲಿನ ನಾದುರಸ್ತಿಯಲ್ಲಿದ್ದ ಕಿರಿದಾದ ರಸ್ತೆ ವಿಭಾಜಕವನ್ನು ದುರಸ್ತಿಗೊಳಿಸಿ, ರಸ್ತೆ ವಿಭಾಜಕಕ್ಕೆ ಬಣ್ಣ ಬಳಿದು, ಸಸಿಗಳನ್ನು ನೆಟ್ಟು ಸುಂದರಗೊಳಿಸಿದವರೇ ಮೊಟ್ಟೆತ್ತಡ್ಕ ಪರಿಸರದ ಸೌಹಾರ್ದ ಪಿಕಪ್‌ನ ಮಾಲಕ ಆದಂರವರು. ನಿಜಕ್ಕೂ ಅವರು ಎಲ್ಲರಿಗೂ ಸೌಹಾರ್ದರೆನಿಸಿಕೊಂಡಿದ್ದಾರೆ. ಇಲ್ಲಿನ ರಸ್ತೆ ವಿಭಾಜಕಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಲಾರಿಯೊಂದು ಢಿಕ್ಕಿ ಹೊಡೆದು ಹಾನಿಗೊಳಪಟ್ಟಿತ್ತು. ಆದರೆ ನಗರಸಭೆಯಾಗಲಿ, ಸಂಘ-ಸಂಸ್ಥೆಯಾಗಲಿ ಯಾರೂ ಕೂಡ ಈ ರಸ್ತೆ ವಿಭಾಜಕವನ್ನು ದುರಸ್ತಿಗೊಳಿಸುವ ಕಾಯಕಕ್ಕೆ ಮುಂದುವರೆಯಲಿಲ್ಲ. ಕಳೆದ ಕೆಲವು ದಿನಗಳಿಂದ ಸೌಹಾರ್ದ ಆದಂರವರು ತನ್ನ ಕೆಲಸಗಾರರೊಂದಿಗೆ ಈ ರಸ್ತೆ ವಿಭಾಜಕವನ್ನು ದುರಸ್ತಿಗೊಳಿಸಿರುವುದು ಮಾತ್ರವಲ್ಲ ಅದರಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ತನ್ನ ಕಾಳಜಿಯನ್ನು ಮೆರೆದಿರುತ್ತಾರೆ. ಆ.5 ರಂದು ಇದೇ ರಸ್ತೆ ಬದಿಯಲ್ಲಿ ಬಳ್ಳಾರಿ ಮೂಲದ ಪಿಕಪ್ ವಾಹನವೊಂದು ಕೆಸರಿನಲ್ಲಿ ಹೂತು ಹೋದ ಸಂದರ್ಭ ಆದಂ ಮೊಟ್ಟೆತ್ತಡ್ಕರವರು ತನ್ನ ಗೆಳೆಯರೊಂದಿಗೆ ಪಿಕಪ್ ಅನ್ನು ಮೇಲಕ್ಕೆತ್ತುವ ಕಾರ್ಯವನ್ನು ಮಾಡಿದ ನಿದರ್ಶನ ಮಾತ್ರವಲ್ಲದೆ ಇಂತಹುದೇ ಹಲವಾರು ಘಟನೆಯಲ್ಲಿ ಆದಂರವರು ಮಾನವೀಯತೆಯನ್ನು ಮೆರೆದಿರುತ್ತಾರೆ.


ಬೀಟ್ ಪೊಲೀಸ್ ಹರೀಶ್‌ರವರನ್ನು ನೆನೆಸುತ್ತಾರೆ:
ಮೊಟ್ಟೆತ್ತಡ್ಕ-ಮುಕ್ರಂಪಾಡಿ-ಪಂಜಳ ಈ ಭಾಗದಲ್ಲಿ 2018 ರಂದು ಬೀಟ್ ಪೊಲೀಸ್ ಆಗಿ ಹರೀಶ್‌ರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಬೀಟ್ ಪೊಲೀಸ್ ಹರೀಶ್‌ರವರು ಕೇವಲ ಬೀಟ್ ಪೊಲೀಸ್ ಕರ್ತವ್ಯದೊಂದಿಗೆ ಸಮಾಜಮುಖಿ ಕಾರ್ಯಗಳೊಂದಿಗೆ ಸದಾ ಗುರುತಿಸುತ್ತಿದ್ದರು. ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್‌ರವರ ಮಾರ್ಗದರ್ಶನದಲ್ಲಿ ನಗರಸಭೆ, ಪೊಲೀಸ್ ಇಲಾಖೆ, ಸಂಘ-ಸಂಸ್ಥೆಗಳ, ದಾನಿಗಳ ನೆರವಿನಿಂದ ಹೈ-ಮಾಸ್ಟ್ ದೀಪ, ರಸ್ತೆ ವಿಭಾಜಕ, ಸಿಸಿ ಕ್ಯಾಮೆರಾ ಮತ್ತು ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿ ಸಿಸಿ ಕ್ಯಾಮೆರಾದ ಉದ್ಘಾಟನೆಯಾಗಿತ್ತು. ಸರಕಾರ ನೀಡಬೇಕಾದ ಅನುದಾನವನ್ನು ಸಾರ್ವಜನಿಕ ಬಂಧುಗಳು ನೀಡಿ ಸರಕಾರದ ಜೊತೆಗೆ ನಾವೂ ಕೂಡ ಇದ್ದೇವೆ ಎಂದು ತೋರಿಸಿಕೊಟ್ಟ ಸಹೃದಯಿ ನಾಗರಿಕ ಬಂಧುಗಳ ನಡೆಯು ಅಭಿನಂದನೀಯವಾಗಿದೆ ಎಂದು ಅಂದಿನ ಸಹಾಯಕ ಆಯುಕ್ತ ಕೃಷ್ಣಮೂರ್ತಿ ಎಚ್.ಕೆರವರು ಹೇಳಿದ್ದರು.


ಸಿಸಿ ಕ್ಯಾಮೆರಾ ವರ್ಕ್ ಆಗುತ್ತಿಲ್ಲ:
ಆದರೆ ಈಗ ಇಲ್ಲಿ ರಸ್ತೆ ವಿಭಾಜಕ ದುರಸ್ತಿ ಮಾಡುವುದು ಬಿಡಿ, ಕಳ್ಳಕಾಕರನ್ನು ಹಿಡಿಯುವ ಸಿಸಿ ಕ್ಯಾಮೆರಾ ಕೂಡ ಕೆಲಸ ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ದೂರಾಗಿದೆ. ಇದೀಗ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ವಿಭಾಜಕವನ್ನು ದುರಸ್ತಿಗೊಳಿಸಿದ ಸೌಹಾರ್ದ ಆದಂರವರು ‘ಸುದ್ದಿ’ಯೊಂದಿಗೆ ಮಾತನಾಡಿ ಹಿಂದಿನ ಬೀಟ್ ಪೊಲೀಸ್ ಹರೀಶ್‌ರವರ ಕಾರ್ಯವೈಖರಿಯನ್ನು ನೆನಪಿಗೆ ಬರುತ್ತಿದೆ. ಅವರು ಇದ್ದಂತಹ ಸಂದರ್ಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಹರೀಶ್‌ರವರು ಸಾರ್ವಜನಿಕರೊಂದಿಗೆ ಬೆರೆಯುತ್ತಿರುವ ಕ್ಷಣಗಳು ಅದು ಅದ್ಭುತ ಕ್ಷಣಗಳು ಎಂದು ನೆನಪಿಸಿಕೊಳ್ಳುತ್ತಿದ್ದಾರೆ.


ಸೌಹಾರ್ದ ಆದಂರವರು ತನ್ನ ಸಮಾಜಮುಖಿ ಕಾರ್ಯಗಳನ್ನು ತೋರ್ಪಡಿಸಿರುವುದು ಇದೇ ಮೊದಲಲ್ಲ. ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿನ ಬಸ್ಸು ತಂಗುದಾಣದ ಬಳಿಯ ರಸ್ತೆಯನ್ನು ಕೌ ಕ್ಯಾಚ್ ರಸ್ತೆಯನ್ನಾಗಿ ಮಾಡಿ ಗಮನ ಸೆಳೆದಿದ್ದರು ಮಾತ್ರವಲ್ಲ ಶಂಶುಲ್ ಉಲಮಾ ಶೋಶಿಯಲ್ ಟ್ರಸ್ಟ್ ಮುಖೇನ ಆಂಬುಲೆನ್ಸ್‌ನಲ್ಲಿಯೂ ಉಚಿತವಾಗಿ ನಿಸ್ವಾರ್ಥರಹಿತ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂಬುದು ವಿಶೇಷವಾಗಿದೆ.

LEAVE A REPLY

Please enter your comment!
Please enter your name here