ಬಡವರಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆಯೇ ಇಲ್ಲ-ಕುಂಬ್ರ:ಅಕ್ರಮ ಸಕ್ರಮ, ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿರುವ ಬಡವರು ಸರಕಾರದ 94 ಸಿ ಮತ್ತು 94ಸಿಸಿ ಕಾನೂನು ಬಂದಾಗ ಅರ್ಜಿ ಹಾಕಿದ್ದಾರೆ.ಆದರೆ, ಎಂಟು ವರ್ಷದ ಹಿಂದೆ ಅರ್ಜಿ ಹಾಕಿದವರಿಗೆ ಇನ್ನೂ ಹಕ್ಕು ಪತ್ರ ಕೊಟ್ಟಿಲ್ಲ, ಏನ್ರೀ ಅವರೇನು ನಿಮ್ಮ ಜಾಗವನ್ನು ಕೇಳಿದ್ದಾ? ಅಲ್ಲ ಮನೆ ಮಾಡಿಕೊಂಡಿರುವ ಸರಕಾರಿ ಜಾಗದ ಅಡಿಸ್ಥಳದ ಹಕ್ಕು ಪತ್ರ ಕೇಳಿದ್ದಾ? ಏನು ನಿಮಗೆ ಅಷ್ಟು ಗೊತ್ತಾಗುವುದಿಲ್ವ? ಪಿಳ್ಳೆ ನೆವ ಹೇಳಿ ಯಾಕೆ ಅರ್ಜಿಯನ್ನು ಪೆಂಡಿಂಗ್ ಇಟ್ಟಿದ್ದೀರಿ?ನಿಮಗೆ ಕೆಲಸ ಮಾಡ್ಲಿಕ್ಕೆ ಅಥವಾ ಬಡವರಿಗೆ ನ್ಯಾಯ ಕೊಡಿಸಲು ಆಸಕ್ತಿ ಇಲ್ಲಾಂದ್ರೆ ಈಗ್ಲೇ ಹೇಳಿ ಬಿಡಿ, ಬಡವರಿಗೆ ನೋವಾದರೆ, ಅನ್ಯಾಯವಾದರೆ ನಾನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಅಽಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಕುಂಬ್ರದಲ್ಲಿ ನಡೆದಿದೆ.


ಕುಂಬ್ರದ ರೈತ ಸಭಾ ಭವನದಲ್ಲಿ 15 ಗ್ರಾಮಗಳ ಅಕ್ರಮ ಸಕ್ರಮ ಕಡತ ಮತ್ತು 94 ಸಿ ಹಾಗೂ 94 ಸಿಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ,ಕಡಿಮೆ ಕಡತ ವಿಲೇವಾರಿಯಾಗಿದ್ದನ್ನು ಗಮನಿಸಿದ ಶಾಸಕರು ಆಕ್ರೋಶ ಭರಿತರಾಗಿ ಅಽಕಾರಿಗಳನ್ನು ತರಾಟೆಗೆ ಎತ್ತಿಕೊಂಡರು.


ಅಡಿಸ್ಥಳ ಮಾತ್ರ ಕೇಳಿದ್ದು ಎಕ್ರೆಗಟ್ಟಲೆ ಜಾಗ ಕೇಳಿಲ್ಲ:
ಬಡವರು ಕಾನೂನಾತ್ಮಕವಾಗಿ ತಾವು ಕಟ್ಟಿಕೊಂಡಿರುವ ಮನೆಯ ಅಡಿಸ್ಥಳಕ್ಕೆ ಹಕ್ಕು ಪತ್ರ ಕೇಳಿದ್ದಾರೆ ವಿನ:ಎಕ್ರೆ ಗಟ್ಟಲೆ ಜಾಗ ಕೊಡಿ ಎಂದು ಅರ್ಜಿ ಹಾಕಿಲ್ಲ. ಅದನ್ನು ಕೊಡ್ಲಿಕ್ಕೆ ಏನು ಕಷ್ಟ? ಪಾಪ ಅವರು ದಿನ ಕಳೆಯುವುದೇ ಬಹಳ ಕಷ್ಟದಲ್ಲಿ, ಮನೆಯ ಅಡಿಸ್ಥಳವಾದರೂ ತಮ್ಮ ಹೆಸರಿಗೆ ಆಗಬೇಕು ಎಂದು ಆಸೆಯಿಂದ ಕಚೇರಿಯಿಂದ ಕಚೇರಿಗೆ ಕಳೆದ ಏಳೆಂಟು ವರ್ಷದಿಂದ ಅಲೆದಾಡುತ್ತಿದ್ದಾರೆ.ಯಾಕೆ ಅವರಿಗೆ ಹಿಂಸೆ ಕೊಡುತ್ತೀರಿ? ಯಾವುದೇ 94ಸಿ ಅಥವಾ 94ಸಿಸಿ ಕಡತಗಳು ಬಾಕಿಯಾಗಬಾರದು.ಅರ್ಜಿ ಸಲ್ಲಿಸಿದ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಬೇಕು. ವಿಲೇವಾರಿ ಮಾಡಲು ಸಾಧ್ಯವಾಗದೇ ಕಾನೂನು ತೊಡಕಿರುವ ಯಾವುದೇ ಕಡತಗಳು ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು, ನೀವಾಗಿ ನಿಮ್ಮ ಸ್ವಂತ ಇಷ್ಟದಿಂದ ಯಾವ ಫೈಲನ್ನೂ ರಿಜೆಕ್ಟ್ ಮಾಡುವುದು ಬೇಡ ಎಂದು ಅಧಿಕಾರಿಗಳಿಗೆ ತಿಳಿಸಿದರು.


ಯಾರೇ ದುಡ್ಡು ಕೇಳಿದರೂ ನನಗೆ ತಿಳಿಸಿ:
ಅಕ್ರಮ ಸಕ್ರಮ, 94 ಸಿ ಅಥವಾ 94ಸಿಸಿ ಫೈಲುಗಳನ್ನು ವಿಲೇವಾರಿ ಮಾಡಲು ಯಾರೇ ದುಡ್ಡಿನ ಬೇಡಿಕೆ ಇಟ್ಟರೆ ತಕ್ಷಣ ನನ್ನ ಗಮನಕ್ಕೆ ತನ್ನಿ.ಯಾರಿಗೂ ಒಂದು ರುಪಾಯಿ ಕೂಡಾ ಕೊಡಬೇಡಿ.ಭ್ರಷ್ಟಾಚಾರ ಮುಕ್ತವಾಗಿ ಎಲ್ಲರಿಗೂ ನ್ಯಾಯಯುತವಾಗಿ ಕಡತವನ್ನು ವಿಲೇವಾರಿ ಮಾಡಿಸುವೆ.ಚುನಾವಣೆಗೆ ಮುನ್ನ ನಾನು ಕ್ಷೇತ್ರದ ಜನತೆಗೆ ಏನು ಭರವಸೆ ಕೊಟ್ಟಿದ್ದೇನೆ ಅದನ್ನು ಪಾಲನೆ ಮಾಡಿಯೇ ಸಿದ್ದ ಎಂದು ಶಾಸಕರು ಹೇಳಿದರು.


ಕುಮ್ಕಿ ಕುಮ್ಕಿ ಎಂದು ಹೋದ್ರೆ ಯಾವ ಫೈಲು ಮೂವ್ ಆಗ್ಲಿಕ್ಕಿಲ್ಲ:
ಕೆಲವು ಕಡೆಗಳಲ್ಲಿ ಅಕ್ರಮ ಸಕ್ರಮ ಕಡತವನ್ನು ಕುಮ್ಕಿ ಜಾಗ ಎಂದು ಮಂಜೂರು ಮಾಡಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ.ಕುಮ್ಕಿ ಕುಮ್ಕಿ ಎಂದು ಹೋದ್ರೆ ಇಂದು ಈ ಬೈಠಕ್ ನಡೆಸಲು ಸಾಧ್ಯವೇ ಅಗುತ್ತಿರಲಿಲ್ಲ, ಏನ್ರಿ ಕುಮ್ಕಿ? ನಿಮಗೆ ಕುಮ್ಕಿ ಎಂದು ಹೇಳಿದವರು ಯಾರು? ಆರ್‌ಟಿಸಿಯಲ್ಲಿ ಕುಮ್ಕಿ ಎಂದು ನಮೂದಾಗಿದೆಯಾ? ಸುಮ್ಮನೆ ಇಲ್ಲದ ಕಥೆಗಳನ್ನು ಸೃಷ್ಟಿಸಿ ಫೈಲುಗಳನ್ನು ಪೆಂಡಿಂಗ್ ಇಡಬಾರದು.ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತರಬೇಕು ನೀವಾಗಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಾಸಕರು ಸೂಚಿಸಿದರು.


30 ಅಕ್ರಮ ಸಕ್ರಮ 130 ಹಕ್ಕು ಪತ್ರ ವಿತರಣೆ:
ಬೈಠಕ್‌ನಲ್ಲಿ ಒಟ್ಟು 30 ಅಕ್ರಮ ಸಕ್ರಮ ಕಡತ ಹಗೂ 94ಸಿಸಿ 130 ಮತ್ತು 94 ಸಿ ಹಕ್ಕು ಪತ್ರಗಳನ್ನು ಶಾಸಕರು ವಿತರಣೆ ಮಾಡಿದರು.ಒಳಮೊಗ್ರು, ಕೆಯ್ಯೂರು, ಕೆದಂಬಾಡಿ, ನಿಡ್ಪಳ್ಳಿ, ಪಾಣಾಜೆ, ಬೆಟ್ಟಂಪಾಡಿ, ಇರ್ದೆ, ಆರ‍್ಯಾಪು, ಕುರಿಯ, ಮಾಡ್ನೂರು, ನರಿಮೊಗರು, ಶಾಂತಿಗೋಡು, ಮುಂಡೂರು, ಬಲ್ನಾಡು ಮತ್ತು ಸರ್ವೆ ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಯಿತು.


ಸ್ಥಳದಲ್ಲೇ ಹಕ್ಕು ಪತ್ರ ಕೊಡಿಸಿದ ಶಾಸಕರು:
ನಿಡ್ಪಳ್ಳಿ ಗ್ರಾಮದ 8 ಮತ್ತು ಒಳಮೊಗ್ರು ಗ್ರಾಮದ ಇಬ್ಬರಿಗೆ ಸ್ಥಳದಲ್ಲೇ ಶಾಸಕರು ಹಕ್ಕು ಪತ್ರ ಕೊಡಿಸಿದರು.ಇವರ ಕಡತ ಈಗಾಗಲೇ ತಾಲೂಕು ಕಚೇರಿಯಲ್ಲಿದ್ದು ಸರಕಾರಕ್ಕೆ ಕಟ್ಟಬೇಕಾಗಿದ್ದ ಹಣವನ್ನು ಪಾವತಿ ಮಾಡಿದ್ದರೂ ಹಕ್ಕು ಪತ್ರ ರೆಡಿಯಾಗಿರಲಿಲ್ಲ.ಈ ಬಗ್ಗೆ ಫಲಾನುಭವಿಗಳು ಶಾಸಕರ ಗಮನಕ್ಕೆ ತಂದಾಗ 10 ಮಂದಿಗೂ ಈಗಲೇ ಹಕ್ಕು ಪತ್ರ ಕೊಡಿ.ಇನ್ನು ಅವರನ್ನು ಅಲೆದಾಡುವಂತೆ ಮಾಡಬೇಡಿ ಎಂದು ತಹಸಿಲ್ದಾರ್‌ಗೆ ಸೂಚಿಸಿ, ಸ್ಥಳದಲ್ಲೇ ಹಕ್ಕು ಪತ್ರವನ್ನು ಕೊಡಿಸಿದರು.


ತಹಶಿಲ್ದಾರ್ ಬಗ್ಗೆ ಕಂದಾಯ ಸಚಿವರ ಮೆಚ್ಚುಗೆ:
ನಮ್ಮ ತಹಶಿಲ್ದಾರ್ ಪುರಂದರ್ ಹೆಗ್ಡೆಯವರು ಬಂಟ್ವಾಳದಲ್ಲಿದ್ದಾಗ 20 ಸಾವಿರ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿದ್ರು. ನಮ್ಮ 28 ಸಾವಿರ ಫೈಲುಗಳು ಪೆಂಡಿಂಗ್ ಇದೆ ಎಂದು ಅವರನ್ನು ಅಲ್ಲಿಂದ ಇಲ್ಲಿಗೆ ನಾನೇ ಕರೆಸಿದ್ದು.ರಾಜ್ಯದಲ್ಲಿ ಎಲ್ಲಿಯೂ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗಿಲ್ಲ.ರಾಜ್ಯದಲ್ಲೇ ನಾವು ಆಪ್ ಮೂಲಕ ಕಡತ ವಿಲೇವಾರಿ ಮಾಡಿದ ಹೆಗ್ಗಳಿಕೆ ಪುತ್ತೂರಿಗೆ ಇದೆ.ಈ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತಂದಾಗ ತಹಶಿಲ್ದಾರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.ತಹಶಿಲ್ದಾರ್, ಅಕ್ರಮ ಸಕ್ರಮ ಸಮಿತಿ ಹಾಗೂ ಅಽಕಾರಿಗಳು, ತಾಂತ್ರಿಕ ಸಿಬ್ಬಂದಿಗಳು ಎಲ್ಲರೂ ಸೇರಿ ಈ ಕೆಲಸ ಮಾಡಿದ್ದರಿಂದ ನಾವು ರಾಜ್ಯಕ್ಕೆ ಪ್ರಥಮ ಬಂದಿದ್ದೇವೆ ಎಂದು ಶಾಸಕರು ಹೇಳಿದರು.


ಎಲ್ಲರೂ ಒಟ್ಟಾಗಿ ಬಡವರ ಪರ ಕೆಲಸ ಮಾಡೋಣ:
ನಾವು ನೀವು ಸೇರಿದಂತೆ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಡವರ ಪರವಾಗಿ ಕೆಲಸ ಮಾಡಬೇಕು.ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡುವಂತೆ ಮಾಡಬೇಡಿ, ಅವರು ಕೂಲಿ ಕೆಲಸಕ್ಕೆ ಹೋಗಿ ಬದುಕು ಸಾಗಿಸುವವರು. ಒಂದು ದಿನ ರಜೆ ಮಾಡಿದರೆ ಅವರ ಕುಟುಂಬ ನಿರ್ವಹಣೆಗೆ ಕಷ್ಟವಾಗಬಹುದು.ಬಡವರ ಯಾವುದೇ ಕಡತ ಇದ್ರೂ ತಡ ಮಾಡದೆ ಅಽಕಾರಿಗಳು ಸ್ವಯಂ ಹಿತಾಸಕ್ತಿಯಿಂದ ಅವರ ಕೆಲಸ ಮಾಡಬೇಕು.ದೇವರು ನಿಮಗೆ ಸರಕಾರಿ ಕೆಲಸ ಕೊಟ್ಟಿದ್ದಾನೆ.ಅದನ್ನು ಬಡವರ ಸೇವೆಗೆ ಬಳಕೆ ಮಾಡಿ.ಅವರ ಬೆವರಿನ ದುಡ್ಡನ್ನು ನೀವು ತಿನ್ನಬೇಡಿ ಎಂದು ಶಾಸಕರು ಮನವಿ ಮಾಡಿದರು.ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ, ತಹಶಿಲ್ದಾರ್ ಪುರಂದರ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಂದಾಯ ನಿರೀಕ್ಷಕರಾದ ಗೋಪಾಲ ಸ್ವಾಗತಿಸಿ ವಂದಿಸಿದರು.

ಯಾರಿಗಾದರೂ ದುಡ್ಡು ಕೊಟ್ಟಿದ್ದರೆ ಹೇಳಿ ತೆಗೆಸಿಕೊಡ್ತೇನೆ
ಹಕ್ಕು ಪತ್ರ ವಿತರಣೆ ಮಾಡುವಾಗ ಶಾಸಕರು ಫಲಾನುಭವಿಗಳ ಬಳಿ, ನೀವು ಯಾರಿಗಾದರೂ ದುಡ್ಡು ಕೊಟ್ಟಿದ್ದೀರಾ?ಕೊಟ್ಟಿದ್ರೆ ಹೇಳಿ ವಾಪಸ್ ತೆಗೆಸಿಕೊಡ್ತೇನೆ ಎಂದು ಕೇಳಿಕೊಂಡರು.ನಾವು ಯಾರಿಗೂ ದುಡ್ಡು ಕೊಟ್ಟಿಲ್ಲ ಎಂದು ಬಹುತೇಕರು ಹೇಳಿದರು.ಈ ಪೈಕಿ ಹೆಚ್ಚಿನವರು 4 ವರ್ಷದ ಹಿಂದೆ ಹಕ್ಕು ಪತ್ರಕ್ಕಾಗಿ ಅರ್ಜಿ ಕೊಟ್ಟವರೇ ಆಗಿರುವುದನ್ನು ತಿಳಿದ ಶಾಸಕರು,ಯಾಕೆ ನಿಮಗೆ ಇಷ್ಟು ವರ್ಷದಲ್ಲಿ ಹಕ್ಕು ಪತ್ರ ಸಿಕ್ಕಿಲ್ಲ? ನೀವು ಕೇಳಿಲ್ವ? ಎಂದು ಪ್ರಶ್ನಿಸಿದಾಗ ನಾವು ಕೇಳಿದ್ದೇವೆ, ಹೋಗಿದ್ದೇವೆ ಎಲ್ಲವನ್ನೂ ಮಾಡಿದ್ದೇವೆ.ನಮಗೆ ಕಚೇರಿ ಅಲೆದಾಡಿ ಸಾಕಾಗಿ ಹೋಗಿದೆ, ಕಳೆದ ಬಾರಿಯ ಶಾಸಕರ ಕಚೇರಿಗೂ ಹೋಗಿದ್ದೆವು.ಆದರೆ ಈ ಬಾರಿ ನಮಗೆ ನ್ಯಾಯ ಸಿಕ್ಕಿದೆ ಎಂದು ಶಾಸಕರಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here