ಸಾಂಪ್ರದಾಯಿಕ ಆಚರಣೆಯ ನಾಗರಪಂಚಮಿ

0

ಪರಶುರಾಮನ ಸೃಷ್ಟಿಯ ಈ ತುಳುನಾಡಿನಲ್ಲಿ ನಾಗರ ಪಂಚಮಿಗೆ ವಿಶೇಷವಾದ ಸ್ಥಾನಮಾನವಿದೆ. ಶ್ರಾವಣ ಮಾಸದಲ್ಲಿ ಅಂದರೆ ಮಾನ್ಸೂನ್ ಸಮಯದಲ್ಲಿ ಆಚರಿಸುವ ಈ ಹಬ್ಬದಲ್ಲಿ ಹಾವಿಗೆ ಹಾಲೆರೆದು ಪೂಜೆ ಅರ್ಚನೆಯನ್ನು ಭಕ್ತಿ ಭಾವದಿಂದ ಮಾಡುತ್ತಾರೆ. ಸಾಂಪ್ರದಾಯಿಕವಾದ ಈ ಹಬ್ಬವನ್ನು ದೇಶದ ಕೆಲವು ರಾಜ್ಯಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ನಾಗನ ಜೊತೆಗೆ ಶಿವನನ್ನು ಅರ್ಚಿಸುವ ಸಂಪ್ರದಾಯ ಬೆಳೆಯುತ್ತಾ ಬಂದಿದೆ. ನಾಗರಪಂಚಮಿ ಬಂತೆಂದರೆ ಎಲ್ಲಾ ಹಬ್ಬಗಳಿಗೆ ಮುನ್ನುಡಿಯ ಹಾಗೆ. ಭಾರತೀಯರಲ್ಲಿ ಅಣು ರೇಣು ತೃಣ ಕಾಷ್ಟ ಎಲ್ಲದರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ಈ ಹಿಂದಿನಿಂದಲೂ ಹಾಸು ಹೊಕ್ಕಾಗಿ ಬಂದಿದೆ.ನಾಗ ಅಂದರೆ ಸರ್ಪವನ್ನು ತೌಳವ ನಾದಿನ ಜನರು ದೇವರೆಂದು ಪೂಜಿಸುತ್ತಾರೆ. ಶ್ರಾವಣ ಮಾಸದ ಪಂಚಮಿಯಂದು ನಾಗದೇವತೆಗಳಿಗೆ ಹಾಲನ್ನು ಎರೆದು ಪೂಜಿಸುವ, ನಾಗಾರಾಧನೆಯನ್ನು ಮಾಡುವ ಆಚರಣೆ ಮಾಡುತ್ತಾರೆ. ಇದರ ಅಂಗವಾಗಿ ದೇವಸ್ಥಾನಗಳಲ್ಲಿ, ನಾಗನ ಗುಡಿಗಳಲ್ಲಿ, ನಾಗಬನ ಇರುವಲ್ಲಿ ಹುತ್ತಗಳಿರುವಲ್ಲಿ ನಾಗದೇವನಿಗೆ ಹಾಲನ್ನು ಎರೆದು ಎಲ್ಲಾ ಕೆಡುಕುಗಳಿಂದ ನಮ್ಮನ್ನು ರಕ್ಷಿಸಲಿ ಎಂದು ಜನರು ಪ್ರಾರ್ಥನೆ ಸಲ್ಲಿಸುತ್ತಾರೆ.


ವಿಶೇಷತೆನಾಗರ ಪಂಚಮಿಯ ವಿಶೇಷವೆಂದರೆ ಒಡಹುಟ್ಟಿದವರಿಗೆ ತನು ನೀಡಿ ಹಾಲೆರೆಯುವುದು, ಅಣ್ಣ ತಂಗಿಯರ ಸಂಬಂಧಗಳು ಸದಾ ಜೀವಂತವಾಗಿರಲಿ ಹಾಗೂ ಅನ್ಯೋನ್ಯವಾಗಿರಲಿ ಎಂದು ಈ ಹಬ್ಬವನ್ನು ಆಚರಿಸುತ್ತಾರೆ. ಶ್ರಾವಣ ಮಾಸವೆಂದರೆ ಚಂದ್ರನು ಪೂರ್ಣಿಮೆಯ ಡಿನ ಶ್ರಾವಣ ನಕ್ಷತ್ರದಲ್ಲಿ ಬರುವ ಮಾಸವಾಗಿದೆ. ಹುತ್ತವನ್ನು ಆರಾಧನೆ ಮಾಡಲು ಎರಡು ಕಾರಣಗಳಿವೆ. ಒಂದು ಕೃತಜ್ಞತೆಯ ಸಂಕೇತವಾದರೆ ಮತ್ತೊಂದು ಹುತ್ತಕ್ಕೆ ಹಾಲೆರೆದರೆ ಸಂತಾನೋತ್ಪತ್ತಿಗೆ ಸಹಕಾರ ಎಂಬುದು ಬಲ್ಲವರ ಮಾತಾಗಿದೆ.ಹೆಚ್ಚಾಗಿ ಜೇಷ್ಠ ಆಷಾಢದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಈ ಸಮಯದಲ್ಲಿ ರೈತರು ಬಿತ್ತನೆಗೆ ತೊಡಗುವ ಸಮಯ. ಬೀಜ ಬಿತ್ತನೆಯ ಸಂದರ್ಭದಲ್ಲಿ ಕೃಷಿಗೆ ತೊಂದರೆಯನ್ನು ಉಂಟುಮಾಡುವ ಇಲಿ, ಹೆಗ್ಗಣ ಗಳ ಕಾಟ ರೈತರನ್ನು ವಿಪರೀತವಾಗಿ ಕಾಡುತ್ತವೆ.ಇಲಿಗಳನ್ನು ಹಿಡಿಯುವುದು ರೈತನಿಗೆ ಸಾಧ್ಯವಾಗದಿದ್ದಾಗ ಇಲಿಗಳನ್ನು ಹಾವುಗಳು ನುಂಗಿ ರೈತನ ಬೆಳೆ ಉಳಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದ ಹಾವಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಹುತ್ತಕ್ಕೆ ಹಾಲನ್ನು ಎರೆಯುವುದು ಎಂಬುದು ಒಂದು ಕಾರಣವಾದರೆ ಇನ್ನೊಂದು ಹುತ್ತಕ್ಕೆ ಹಾಲೆರೆದರೆ ಸಂತಾನ ಭಾಗ್ಯವಿಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ ಎಂಬ ವಿಚಾರವು ಬಲ್ಲವರಿಂದ ತಿಳಿಯಬಹುದು.


ಹಾವಿನ ನೆಲೆ ಹುತ್ತಕ್ಕೂ ಪ್ರಾಮುಖ್ಯತೆ
ಎಲ್ಲರಿಗೂ ತಿಳಿದಂತೆ ಹಾವುಗಳು ಎಂದಿಗೂ ಹುತ್ತವನ್ನು ಕಟ್ಟಿಕೊಳ್ಳುವುದಿಲ್ಲ. ಗೆದ್ದಲು ಹುಳಗಳು ತಮ್ಮ ಬಾಯಿಯಿಂದ ಹೊರಬರುವ ರಸದ ನೆರವು ಪಡೆದು ಭೂಮಿಯ ಒಳಗಿನ ನಯವಾದ ಮಣ್ಣನ್ನು ತೆಗೆದು ಚಂದದ ಹುತ್ತವನ್ನು ನಿರ್ಮಿಸುತ್ತವೆ.ಇದು ಯಾವ ರೀತಿಯ ಮಳೆ ಗಾಳಿ ಬಂದರೂ ಜಗ್ಗುವುದಿಲ್ಲ. ಇಂತಹ ನವಿರಾದ ಹುಟ್ಟಗಳಲ್ಲಿ ಹಾವುಗಳಿಗೆ ಶ್ರಾವಣ ಮಾಸದ ಚಂದ್ರನ ಬೆಳಕು ಬೀಳುತ್ತಿದ್ದಂತೆ ಪ್ರಕೃತಿ ಸಹಜವಾದ ಲೈಂಗಿಕ ಆಸಕ್ತಿ ಹೆಚ್ಚುತ್ತದಂತೆ. ಹಾಗಾಗಿ ಹೆಚ್ಚಾಗಿ ಈ ಸಮಯದಲ್ಲಿ ಹಾವುಗಳು ಸಂತಾನಭಿವೃದ್ಧಿಗೆ ತೊಡಗುತ್ತವೆ. ಈ ಅವಧಿಯಲ್ಲಿ ಹೆಣ್ಣು ಹಾವಿಗೆ ಋತು ಸ್ರಾವವಾಗುತ್ತದೆ ಎಂಬ ನಂಬಿಕೆಯು ಇದೆ. ಈ ಸಂದರ್ಭದಲ್ಲಿ ಸ್ರವಿಸುವ ರಸವು ಹುತ್ತವನ್ನು ಹೀರಿಕೊಳ್ಳುತ್ತದೆ. ಇದೇ ರೀತಿ ಹಾವುಗಳು ಸೇರುವಾಗ ಗಂಡು ಹಾವಿನಿಂದ ಸ್ರವಿಸಲ್ಪಡುವ ರಸವೂ ಹುತ್ತವನ್ನು ಸೇರಿಕೊಳ್ಳುವುದರಿಂದ ಹುತ್ತಕ್ಕೆಹಾಲೆರೆದಾಗ ಅಥವಾ ನೀರು ಬಿದ್ದಾಗ ಹುತ್ತದಿಂದ ಹೊರಬರುವ ಗಾಳಿಯೊಂದಿಗೆ ರಿಪ್ರೊಡಕ್ಟಿವ್ ಆರ್ಗನ್ಸ್ ಗಳು ಹೆಣ್ಣಿನ ಮೇಲೆ ವಿಶೇಷವಾದ ಪರಿಣಾಮ ಬೀರಿ ಸಂತಾನೋತ್ಪತ್ತಿಗೆ ನೆರವಾಗುತ್ತದೆ ಎಂಬುದು ಪಂಡಿತರ ವಿದ್ವಾoಸರ ಅಭಿಪ್ರಾಯ. ಆದುದರಿಂದ ನಾಗನಿಗೆ ಹಾಲೆರೆದರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ನಂಬಿಕೆ ತುಳುನಾಡಿನ ಜನರಲ್ಲಿದೆ. ಅಷ್ಟೆ ಅಲ್ಲದೆ ಹುತ್ತದ ಮಣ್ಣನ್ನು ಚರ್ಮವ್ಯಾಧಿಗಾಗಿ ಲೇಪಿಸು ವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂದು ಹೇಳಲಾಗುತ್ತದೆ.


ಇಷ್ಟೇ ಅಲ್ಲದೆ ಹಾವಿಗೆ ಹಾಲೆರೆಯುವುದರಿಂದ ಹಾವಿನ ಭಯದಿಂದ ದೂರವಾಗುವುದು, ಪೂಜಿಸುವುದರಿಂದ ಬಯಸಿದ ಫಲಗಳು ದೊರೆಯುತ್ತದೆ. ಹಾಗೆ ಮನೆ ಮಂದಿಗೆಲ್ಲ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲಸುತ್ತದೆ ಎಂಬುದಾಗಿಯೂ ಶಾಸ್ತ್ರ ಪುರಾಣಗಳು ತಿಳಿಸುತ್ತದೆ.ಈ ರೀತಿಯ ಹಿನ್ನೆಲೆಯಿರುವ ಭಾರ್ಗವನ ಸೃಷ್ಟಿಯ ಈ ನೆಲದಲ್ಲಿ ಜನ್ಮವೆತ್ತ ನಮಗೆಲ್ಲ ನಾಗದೇವರು ಸರ್ವ ಸಂಪದವನ್ನು ನೀಡುವಂತಾಗಲಿ…….


ಬರಹ : ಸತೀಶ್ ಇರ್ದೆ
ಕನ್ನಡ ಉಪನ್ಯಾಸಕರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪುತ್ತೂರು.

LEAVE A REPLY

Please enter your comment!
Please enter your name here