ರಾಮಕುಂಜ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಇದರ ವಾರ್ಷಿಕ ಮಹಾಸಭೆ ಮತ್ತು ಪುನಶ್ಚೇತನ ಶಿಬಿರ ಆ.6ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ಎಸ್‌ಆರ್‌ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಇದರ ಅಧ್ಯಕ್ಷ ಅಬ್ರಹಾಂ ವರ್ಗಿಸ್ ಅವರು ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ ಬೆಳವಣಿಗೆಯಲ್ಲಿ ಯುವ ಪೀಳಿಗೆ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ ಸಂಘಟನೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು, ಇಲಾಖಾ ಅಧಿಕಾರಿಗಳು ಇದರ ಬಗ್ಗೆ ಗಮನ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.
ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತರಾದ ಬಿ.ಎಂ ತುಂಬೆ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಇದರ ಕಾರ್ಯಾಧ್ಯಕ್ಷ ಎಸ್.ಹನುಮಂತಯ್ಯ, ನಿಕಟಪೂರ್ವ ಕಾರ್ಯದರ್ಶಿ ವಂದನಾ ಮಾತನಾಡಿದರು.
ಸನ್ಮಾನ:
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಇದರ ಅಧ್ಯಕ್ಷರಾಗಿ 20 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅಬ್ರಹಾಂ ವರ್ಗೀಸ್, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ವಂದನಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಜಿಲ್ಲಾ ಗೆಜೆಟ್ ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಪ್ರೇಮ ಅವರು ೨೦೨೩-೨೪ನೇ ಸಾಲಿನ ವರದಿ ಮಂಡಿಸಿದರು. ಕೋಶಾಧಿಕಾರಿ ಜನಾರ್ದನ ನೆಲ್ಯಾಡಿ ಅವರು 2023-24ನೇ ಸಾಲಿನ ಆಯವ್ಯಯ ಮಂಡಿಸಿದರು. ಎಎಲ್‌ಟಿ ವೆಂಕಟ್ರಮಣ ನೆಲ್ಯಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮ ವಂದಿಸಿದರು. ಸ್ಕೌಟ್ ಶಿಕ್ಷಕ ಕಿಶೋರ್ ಕುಮಾರ್ ಬಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಾಮೂಹಿಕ ಪ್ರಾರ್ಥನೆಗೈದರು. ಉಪ್ಪಿನಂಗಡಿ ಸ್ಠಳೀಯ ಸಂಸ್ಥೆಯ ವ್ಯಾಪ್ತಿಯ ಶಾಲಾ ಕಬ್, ಬುಲ್ ಬುಲ್, ಸ್ಕೌಟ್, ಗೈಡ್, ರೋವರ್, ರೇಂಜರ್ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರಾಗಿ ಕೆ.ಸೇಸಪ್ಪ ರೈ ನೇಮಕ
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರನ್ನು ಆಯ್ಕೆ ಮಾಡಲಾಯಿತು. ನೋಡೆಲ್ ಅಧಿಕಾರಿಯಾಗಿ ಪ್ರಭಾರ ಕ್ರೀಡಾ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಜೊತೆ ಕಾರ್ಯದರ್ಶಿಗಳಾಗಿ ಎಸ್‌ಆರ್‌ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಕಳಾಯಿಗುತ್ತು, ಕಲ್ಲುಗುಡ್ಡೆ ತೆಗರ್ ತುಳುಕೂಟದ ಸದಸ್ಯ ಉಮೇಶ್ ಶೆಟ್ಟಿ ಸಾಯಿರಾಂ, ಮುಗೇರಡ್ಕ ಕಡಮ್ಮಾಜೆ ಫಾರ್ಮ್‌ನ ಮಾಲಕ ದೇವಿಪ್ರಸಾದ್, ಶ್ರೀ ರಾಮಕುಂಜೇಶ್ವರ ವಿದ್ಯಾಲಯ ಸಿಬಿಎಸ್‌ಇ ಇದರ ಸಂಚಾಲಕ ಶಿವಪ್ರಸಾದ್ ಇಜ್ಜಾವು, ವೆಂಕಟರಮಣ ಭಟ್ ನೆಲ್ಯಾಡಿ, ಉಪ್ಪಿನಂಗಡಿ ಗ್ರಾ.ಪಂ.ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಭು ಅವರನ್ನು ನೇಮಿಸಿ ವೇದಿಕೆಗೆ ಆಹ್ವಾನಿಸಿ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಉಳಿದಂತೆ ಹಿಂದಿನ ಪದಾಧಿಕಾರಿಗಳನ್ನೇ ಮುಂದುವರಿಸಲಾಯಿತು.