ಪುತ್ತೂರು: ಪಾಣಾಜೆ ಗ್ರಾಮದ ನೆಲ್ಲಿತ್ತಿಮಾರು ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಅಶ್ವತ್ಥ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ವಿದ್ಯುತ್ ಕಂಬ ಹಾನಿಯಾಗಿ ರಸ್ತೆ ಸಂಚಾರಕ್ಕೆ ತೊಡಕುಂಟಾದ ಘಟನೆ ನಡೆದಿದೆ.
ಸಂಟ್ಯಾರು ಪಾಣಾಜೆ ರಸ್ತೆಯ ನೆಲ್ಲಿತ್ತಿಮಾರ್ ಎಂಬಲ್ಲಿದ್ದ ಅಪಾಯಕಾರಿ ಅಶ್ವತ್ಥ ಮರ ಆ.9ರಂದು ನಸುಕಿನ ವೇಳೆ 3 ಗಂಟೆ ಸುಮಾರಿಗೆ ವಿದ್ಯುತ್ ತಂತಿಗಳಿಗೆ ಬಿದ್ದು 3 ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ರಸ್ತೆ ಸಂಚಾರ ಕೂಡ ಕೆಲಹೊತ್ತು ಬಂದ್ ಆಗಿತ್ತು. ಘಟನೆಯಿಂದ ಬೇರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾತ್ರಿ ಹೊತ್ತಿನಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಘಟನಾ ಸ್ಥಳಕ್ಕೆ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮುನತುಲ್ ಮೆಹ್ರಾ, ಪಂಚಾಯ್ ಅಭಿವೃದ್ಧಿ ಅಧಿಕಾರಿ ಆಶಾ ಹಾಗೂ ಸಿಬ್ಬಂದಿಗಳಾದ ವಿಶ್ವನಾಥ ನಾಯ್ಕ ಅರುಣ್ ಕುಮಾರ್ ಭೇಟಿ ನೀಡಿ ಮರವನ್ನು ಜೆಸಿಬಿ ಮೂಲಕ ಪಂಚಾಯತ್ ವತಿಯಿಂದ ತೆರವುಗೊಳಿಸಲಾಯಿತು.
ಗ್ರಾಮಸ್ಥರಾದ ಯೂಸೂಫ್ ನೆಲ್ಲಿತ್ತಿಮಾರು, ಬಾಬು ರೈ ಕೋಟೆ, ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ಸುಬ್ರಮಣ್ಯ, ಅಬ್ದುಲ್ ಅಜೀಜ್ ಬೊಳ್ಳಿಂಬಳ, ಮೂಸೆಕುಂಞ ಅಪಿನಿಮೂಲೆ, ಪಿ.ಪಿ ಗಣೇಶ್ ಭಟ್ ನೆಲ್ಲಿತ್ತಿಮಾರು, ದಾಮೋದರ ಮಣಿಯಾಣಿ, ಎ.ಕೆ ಮಹಮ್ಮದ್ ಕುಂಞ ಹಾಜಿ ಅಂಗಡಿಮಜಲು ಹಾಗೂ ಮೆಸ್ಕಾಂ ಇಲಾಖಾ ಸಿಬ್ಬಂದಿಯವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸುನಿಲ್‌ರವರು ಸಹಕರಿಸಿದರು.
ಅಪಾಯಕಾರಿ ಮರ ತೆರವಿಗೆ ಅರಣ್ಯ ಇಲಾಖೆಗೆ ನೀಡಿದ ಮನವಿಗೆ ಸಿಕ್ಕಿರಲಿಲ್ಲ ಸ್ಪಂದನೆ
ನೆಲ್ಲಿತ್ತಿಮಾರ್‌ನಲ್ಲಿದ್ದ ಅಪಾಯಕಾರಿ ಮರ ಸೇರಿದಂತೆ ಪಾಣಾಜೆ ಗ್ರಾ.ಪಂ.ವ್ಯಾಪ್ತಿಯ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿದ್ದ ಅಪಾಯಕಾರಿ ಮರಗಳ ತೆರವಿಗೆ ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ ಪುತ್ತೂರು ವಲಯ ಅರಣ್ಯಾಧಿಕಾರಿಗೆ ಮನವಿ ನೀಡಲಾಗಿತ್ತು. ಆದರೆ ಮನವಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರಲಿಲ್ಲ ಈ ಬಗ್ಗೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಆದರೆ ಈಗ ಅಪಾಯಕಾರಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ವಾಹನ ಸಂಚಾರದ ಸಮಯಲ್ಲಿ ಮರ ಬಿದ್ದಿದ್ದರೆ ಇನ್ನಷ್ಟು ಅನಾಹುತ ಸಂಭವಿಸುತ್ತಿತ್ತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.