ಪುತ್ತೂರು: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬೂಡಿಯಾರು ಎಂಬಲ್ಲಿ ಬೆಳ್ಳಾರೆ ಕುಟುಂಬದ ದೈವಸ್ಥಾನದ ಆವರಣದಲ್ಲಿ ಗುಡ್ಡ ಜರಿತದಿಂದ ಹಾನಿ ಉಂಟಾಗಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಕುಶಾಲ ಬೆಳ್ಳಾರೆಯವರು ಪುತ್ತೂರು ಶಾಸಕರಿಗೆ ಮನವಿ ನೀಡಿದ್ದಾರೆ.
ಕುರಿಯ ಗ್ರಾಮದ ಬೂಡಿಯಾರು ಎಂಬಲ್ಲಿ ಪರಿಶಿಷ್ಟ ಜಾತಿಯವರಾದ ಬೆಳ್ಳಾರೆ ಕುಟುಂಬ ತರವಾಡಿನ ಶ್ರೀವೆಂಕಟ್ರಮಣ ದೇವರು, ಶ್ರಿಆದಿಶಕ್ತಿ ಮಹಮ್ಮಾಯಿ ದೇವಿಯ ದೇವಸ್ಥಾನ, ಧರ್ಮದೈವ, ಪರಿವಾರ ದೈವ ಹಾಗೂ ಗುಳಿಗ ದೈವಗಳ ದೈವಸ್ಥಾನದ ಹಿಂಬದಿಯ ಗುಡ್ಡವು ಜು.30 ಮತ್ತು 31ರಂದು ಸುರಿದ ಭಾರೀ ಮಳೆಗೆ ಕುಸಿತಗೊಂಡು ದೈವಸ್ಥಾನದ ಆವರಣದಲ್ಲಿರುವ ವಿಶ್ರಾಂತಿ ಕೊಠಡಿ, ಶೌಚಾಲಯದ ಕೋಣೆಗೆ ಮಣ್ಣು ಬಿದ್ದು ಮುಚ್ಚಿ ಹೋಗಿದೆ. ಗುಡ್ಡದ ಮೇಲಿರುವ ನೀರಿನ ಕಾಂಕ್ರೀಟ್ ಟ್ಯಾಂಕ್‌ಗೂ ಹಾನಿಯಾಗಿ ಕುಸಿದು ಬೀಳುವ ಹಂತದಲ್ಲಿದೆ. ದೈವಸ್ಥಾನದ ಎದುರು ಬದಿಯ ಅಂಗಳದಲ್ಲಿ ಮಳೆನೀರಿನಿಂದ ದೊಡ್ಡ ಹೊಂಡ ನಿರ್ಮಾಣವಾಗಿ ಒಂದು ಬದಿಯ ಇಂಟರ್‌ಲಾಕ್ ಜರಿದು ನೀರು ತಡೆಗೋಡೆ ಮೇಲೆ ಬಿದ್ದು ತಡೆಗೋಡೆ ಕೂಡ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ದಿನಗೂಲಿಗಳೇ ಹೆಚ್ಚು ಇರುವ ಬೆಳ್ಳಾರೆ ಕುಟುಂಬದ ಸದಸ್ಯರಲ್ಲಿ ಆಥೀಕ ವ್ಯವಸ್ಥೆಗೆ ತೊಂದರೆ ಇರುತ್ತದೆ. ಆದುದರಿಂದ ಮಣ್ಣು ತೆಗೆಸುವ ಹಾಗೂ ದುರಸ್ಥಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.