ಪುತ್ತೂರು:ಕರಾವಳಿಯ ಜನಪದ ಕ್ರೀಡೆ ಕಂಬಳದ 2024-25ನೇ ಸಾಲಿನ ವೇಳಾಪಟ್ಟಿ ಪ್ರಕಟಗೊಂಡಿದ್ದು ಪುತ್ತೂರಿನ ಐತಿಹಾಸಿಕ ಕೋಟಿಚೆನ್ನಯ ಜೋಡುಕರೆ ಕಂಬಳವು 2025ರ ಫೆಬ್ರವರಿ 1ರಂದು ಮತ್ತು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳವು 2025ರ ಮಾ.22ರಂದು ನಡೆಯಲಿದೆ.ಈ ಬಾರಿ ತುಳುನಾಡಿನಲ್ಲಿ ಕಂಬಳ ನಡೆಯುವುದರ ಜೊತೆಗೆ ಮಲೆನಾಡು ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಮತ್ತು ರಾಜ್ಯ ರಾಜಧಾನಿಯಲ್ಲಿ ಎರಡನೇ ಬಾರಿಗೆ ಕಂಬಳ ನಡೆಯಲಿದೆ.
ಮೂಡಬಿದಿರೆ ಸ್ವರ್ಣಮಂದಿರದಲ್ಲಿ ಆ.10ರಂದು ನಡೆದ ಜಿಲ್ಲಾ ಕಂಬಳ ಸಮಿತಿಯ ವಿಶೇಷ ಮಹಾಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಮಾತನಾಡಿ ಕಂಬಳ ವೇಳಾಪಟ್ಟಿಯನ್ನು ತಿಳಿಸಿದರು.
26 ಕಂಬಳಗಳು:
ಜಿಲ್ಲಾ ಸಮಿತಿ ನೇತೃತ್ವದಲ್ಲಿ ಈ ವರ್ಷದಲ್ಲಿ 26 ಕಂಬಳಗಳು ನಡೆಯಲಿದೆ.ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಮೊದಲ ಕಂಬಳ ನಡೆಯಲಿದ್ದು 2025ರ ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ.ಈಗಾಗಲೇ ದ.ಕ.ಜಿಲ್ಲೆಯಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.ಇದನ್ನು ಮತ್ತಷ್ಟು ಆಕರ್ಷಣೀಯವಾಗಿ ನಡೆಸಲು ಕೆಲವೊಂದು ನಿಯಮಗಳನ್ನು ಆಯಾ ಕಂಬಳ ಸಮಿತಿಗಳು ಪಾಲಿಸಬೇಕಾಗಿದೆ.ಇದಕ್ಕಾಗಿ ಉಪನಿಬಂಧನೆಗಳನ್ನು ರಚಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಮಲೆನಾಡಿನಲ್ಲೂ ಕಂಬಳ:
ಈ ಬಾರಿ ಕಂಬಳ ರಾಜ್ಯ ರಾಜಧಾನಿಯಿಂದ ಮಲೆನಾಡಿಗೂ ವಿಸ್ತರಿಸಿದೆ.ಶಿವಮೊಗ್ಗದಲ್ಲಿಯೂ ಪ್ರಥಮ ಬಾರಿಗೆ ಕಂಬಳ ನಡೆಯಲಿದ್ದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಹಾಗೂ ರೋಟರಿ ಸೇರಿದಂತೆ ಇತರ ಸಂಸ್ಥೆಗಳು ಸಹಕರಿಸಲಿದೆ.‘ಕಾಂತಾರ’ ಸಿನಿಮಾದಿಂದ ಶಿವಮೊಗ್ಗ ಜಿಲ್ಲೆಯಲ್ಲಿಯೂ ಕಂಬಳ ಮಾಡುವ ಉತ್ಸಾಹ ಬಂದಿದೆ ಎಂದು ಶಿವಮೊಗ್ಗ ಕಂಬಳ ಸಮಿತಿಯ ಎಲ್ಯಾಸ್ ಲೂಯಿಸ್ ಸಭೆಯಲ್ಲಿ ಮಾಹಿತಿ ನೀಡಿದರು.
ಹೀಗಿದೆ ಕಂಬಳ ವೇಳಾಪಟ್ಟಿ..
2024-25ನೇ ಸಾಲಿನ ವಿವಿಧ ಕಂಬಳಗಳ ವೇಳಾಪಟ್ಟಿ ಬಿಡುಗಡೆಗೊಳಿಸಿದ್ದು ಅ.26ರಂದು ಬೆಂಗಳೂರಿನಲ್ಲಿ ಕಂಬಳ ನಡೆಯುವುದರ ಮೂಲಕ ಈ ವರ್ಷದ ಮೊದಲ ಕಂಬಳಕ್ಕೆ ಚಾಲನೆ ದೊರೆಯಲಿದೆ.ನ.9ರಂದು ಪಿಲಿಕುಳ, ನ.16ರಂದು ಕಕ್ಯೆಪದವು, ನ.23ರಂದು ಕೊಡಂಗೆ, ನ.30ರಂದು ಬಳ್ಕುಂಜೆ, ಡಿ.7ರಂದು ಹೊಕ್ಕಾಡಿಗೋಳಿ, ಡಿ.14ರಂದು ಬಾರಾಡಿಬೀಡು, ಡಿ.21ರಂದು ಮೂಲ್ಕಿ, ಡಿ.28ರಂದು ಮಂಗಳೂರು, 2025ರ ಜ.4ರಂದು ಅಡ್ವೆ, ಜ.11ರಂದು ನರಿಂಗಾಣ, ಜ.18ರಂದು ಮೂಡಬಿದ್ರೆ, ಜ.25ರಂದು ಐಕಳ, ಫೆ.1ರಂದು ಪುತ್ತೂರು, ಜ.8ರಂದು ಜೆಪ್ಪು, ಜ.15ರಂದು ವಾಮಂಜೂರು, ಜ.22ರಂದು ಕಟಪಾಡಿ, ಮಾ.1ರಂದು ಬಂಗಾಡಿ, ಮಾ.8ರಂದು ಬಂಟ್ವಾಳ, ಮಾ.15ರಂದು ಮಿಯ್ಯಾರು, ಮಾ.22ರಂದು ಉಪ್ಪಿನಂಗಡಿ, ಮಾ.29ರಂದು ವೇಣೂರು, ಎ.5ರಂದು ಪಣಪಿಲ, ಎ.12ರಂದು ಗುರುಪುರ ಹಾಗೂ ಎ.19ರಂದು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆದು ಕಂಬಳಕ್ಕೆ ಅಂತಿಮ ತೆರೆ ಬೀಳಲಿದೆ.
24 ಕಂಬಳಗಳಿಗೂ ತಲಾ ರೂ.5 ಲಕ್ಷ ಬಿಡುಗಡೆಗೆ ಒತ್ತಾಯ:
ನಿಂತು ಹೋಗಿದ್ದ ಪಿಲಿಕುಳ ಕಂಬಳವನ್ನು ಈ ವರ್ಷದಿಂದ ಪುನರಾರಂಭಗೊಳಿಸಲಾಗುವುದು.ಇಲ್ಲಿ ಕಂಬಳ ಭವನ ನಿರ್ಮಿಸಲಾಗುವುದು.ದಕ.ಜಿಲ್ಲೆಯಲ್ಲಿ ನಡೆಯುವ 24 ಕಂಬಳಗಳಿಗೂ ಸರಕಾರ ತಲಾ ರೂ.5 ಲಕ್ಷ ಬಿಡುಗಡೆಗೊಳಿಸಬೇಕು.ಈ ಕುರಿತು ಕಂಬಳ ನಿಯೋಗ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು ತಿಳಿಸಿದರು.