ಪುತ್ತೂರು:ಮೊಟ್ಟೆತ್ತಡ್ಕದಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿ ಪಡಿಸಿದ ಎರಡು ಗೇರು ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದರು.
ನವದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನಲ್ಲಿ ಆ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು 109 ಹೊಸ ಕೃಷಿ ಮತ್ತು ತೋಟಗಾರಿಕೆ ತಳಿಗಳನ್ನು ಬಿಡುಗಡೆ ಮಾಡಿದರು.
ಇವುಗಳಲ್ಲಿ ಎರಡು ಗೇರಿನ ಹೈಬ್ರಿಡ್ ತಳಿಗಳಾದ ನೇತ್ರ ಜಂಬೋ-1 ಮತ್ತು ನೇತ್ರ ಗಂಗಾವನ್ನು ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿದೆ.ಪ್ರಧಾನಿಯವರಿಂದ ಈ ತಳಿಗಳ ಬಿಡುಗಡೆಯ ವೇಳೆ ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯದಲ್ಲಿ ವಿಜ್ಞಾನಿ-ರೈತ ಸಂವಾದ ನಡೆಯಿತು.
ಸಂಶೋಧನಾ ಕೇಂದ್ರದ ನಿರ್ದೇಶಕ ಜೆ.ದಿನಕರ ಅಡಿಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಇದು ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿ,ತಳಿ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳನ್ನು ಅಭಿನಂದಿಸಿದರು.ಹೊಸದಾಗಿ ಬಿಡುಗಡೆಯಾದ ತಳಿಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಯಿತು.ನೇತ್ರ ಜಂಬೋ-1 ತಳಿಯ ಕುರಿತು ಡಾ|ಜೆ.ದಿನಕರ ಅಡಿಗ ಮತ್ತು ನೇತ್ರ ಗಂಗಾ ತಳಿಯ ಕುರಿತು ಪ್ರಧಾನ ವಿಜ್ಞಾನಿ ಮೋಹನ ಜಿ.ಎಸ್. ಮಾಹಿತಿ ನೀಡಿದರು.
ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಡಾ|ಎನ್.ಯದುಕುಮಾರ್ ಅನುಭವ ಹಂಚಿಕೊಂಡರು.ಹೊಸದಾಗಿ ಬಿಡುಗಡೆಯಾದ ನೇತ್ರ ತಳಿಗಳ ಸಸಿ ಉತ್ಪಾದನೆ ಮತ್ತು ಮಾರಾಟ ಮತ್ತು ಬೇಡಿಕೆಯ ಬಗ್ಗೆ ಅವರು ಮಾಹಿತಿ ನೀಡಿದರು.ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಅವರು ತಮ್ಮ ಗೇರು ಕೃಷಿಯ ಅನುಭವ ಮತ್ತು ಬೆಳೆ ಬೆಳೆಯುವ ಅನುಭವ ಹಂಚಿಕೊಂಡರು.37 ವಿಜ್ಞಾನಿಗಳು ಹಾಗೂ 24 ರೈತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.