ಪೆರಾಬೆ ಗ್ರಾಮಸಭೆ – ಇಲಾಖಾಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರ ಅಸಮಾಧಾನ

0

ಪೆರಾಬೆ: ಸಭೆ ಆರಂಭದಲ್ಲಿ ತೋಟಗಾರಿಕೆ ಸಹಿತ ಕೆಲ ಇಲಾಖೆ ಅಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರು ಆಕ್ಷೇಪ ಸೂಚಿಸಿ ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಿಯಾದಲ್ಲಿ ಗ್ರಾಮಸಭೆ ನಡೆಸುವ ಅವಶ್ಯಕತೆ ಇದೆಯಾ ಎಂದು ಪೆರಾಬೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆ ಆ.3ರಂದು ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ವಾಣಿಶ್ರೀ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯ ಆರಂಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥ ಜನಾರ್ದನ ಬಿ.ಎಲ್.ಅವರು, ತೋಟಗಾರಿಕೆ ಅತೀ ಅಗತ್ಯವಾದ ಇಲಾಖೆಯಾಗಿದೆ. ಅವರೇ ಗೈರು ಹಾಜರಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ರಮೇಶ್ ರೈ, ಹರೀಶ್ ಬಾಣಬೆಟ್ಟು ಹಾಗೂ ಇತರೇ ಗ್ರಾಮಸ್ಥರೂ ಬೆಂಬಲಿಸಿ ಅಧಿಕಾರಿಗಳು ಬಾರದೇ ಇದ್ದಲ್ಲಿ ಗ್ರಾಮಸಭೆ ನಡೆಸುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಕೆ.ಬಿ. ಅವರು, ಎಲ್ಲಾ ಇಲಾಖೆಯವರಿಗೆ ಗ್ರಾಮಸಭೆಯ ನೋಟಿಸ್ ಕಳಿಸಿಕೊಡಲಾಗಿದೆ. ಗೈರು ಹಾಜರಿಯಾಗಿರುವ ಇಲಾಖೆಯ ಬಗ್ಗೆ ಆ ಇಲಾಖೆಯ ಮೇಲಾಧಿಕಾರಿಗಳಿಗೆ ಹಾಗೂ ತಾ.ಪಂ.ಇಒ ಅವರಿಗೆ ಪತ್ರ ಬರೆಯುತ್ತೇವೆ. ಮುಂದಿನ ಗ್ರಾಮಸಭೆಗೆ ಕಡ್ಡಾಯವಾಗಿ ಬರುವಂತೆ ಸೂಚಿಸುವುದಾಗಿ ಹೇಳಿದರು. ಬಳಿಕ ತೋಟಗಾರಿಕೆ ಇಲಾಖೆಯ ಅಧಿಕಾರಿಯವರು ಸಭೆಗೆ ಆಗಮಿಸಿದರು.

ಕಾರ್ಮಿಕ ಇಲಾಖೆ ಮಾಹಿತಿ ಬೇಕು:
ಅಲ್ಪಸಂಖ್ಯಾತ ಇಲಾಖೆ, ಕಾರ್ಮಿಕ ಇಲಾಖೆಯವರೂ ಬಂದಿಲ್ಲ. ಈ ಎರಡೂ ಇಲಾಖೆಯಿಂದಲೂ ಗ್ರಾಮಸ್ಥರಿಗೆ ಸಾಕಷ್ಟು ಸವಲತ್ತು ಸಿಗುತ್ತಿದೆ. ಅಲ್ಪಸಂಖ್ಯಾತ ಇಲಾಖೆಯವರು ಈ ತನಕ ಗ್ರಾಮಸಭೆಗೆ ಬಂದಿಲ್ಲ. ಕಾರ್ಮಿಕ ಇಲಾಖೆಯಿಂದ ಲ್ಯಾಪ್‌ಟಾಪ್ ಸಹ ವಿತರಣೆ ಆಗುತ್ತಿದೆ. ಇದರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಕೆ.ಬಿ.ಅವರು, ಕಾರ್ಮಿಕ ಇಲಾಖೆಯವರಿಗೆ ನೋಟಿಸ್ ನೀಡಲಾಗಿದೆ. ಗ್ರಾಮಸ್ಥರ ಬೇಡಿಕೆ ಇದ್ದಲ್ಲಿ ಇಲಾಖೆಗೆ ತಲುಪಿಸಲಾಗುವುದು. ಕಾರ್ಮಿಕ ಇಲಾಖೆಯಿಂದ ಗ್ರಾ.ಪಂ.ನಲ್ಲಿ ಮಾಹಿತಿ ಕಾರ್ಯಾಗಾರ ಆಯೋಜಿಸುವುದಾಗಿಯೂ ಹೇಳಿದರು. ಅಲ್ಪಸಂಖ್ಯಾತ ಇಲಾಖೆ ಕಚೇರಿ ಪುತ್ತೂರು ಮತ್ತು ಕಡಬದಲ್ಲಿ ಇಲ್ಲ. ಆ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳಿದ್ದಲ್ಲಿ ನಿರ್ಣಯ ಕೈಗೊಂಡು ಮಂಗಳೂರಿನಲ್ಲಿರುವ ಇಲಾಖೆಯ ಕಚೇರಿಗೆ ಕಳಿಸಿಕೊಡಲಾಗುವುದು ಎಂದರು.

ಚಾಮೆತ್ತಡ್ಕ ರಸ್ತೆ ದುರಸ್ತಿಗೊಳಿಸಿ:
ಚಾಮೆತ್ತಡ್ಕ ರಸ್ತೆ ಕೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಎಂಡೋಪೀಡಿತರು, ಶಾಲಾಮಕ್ಕಳು, ಕೂಲಿಕಾರ್ಮಿಕರೂ ದಿನಾಲೂ ಓಡಾಡುತ್ತಾರೆ. ಮನವಿ ಮಾಡಿದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅವರು, ತುರ್ತು ದುರಸ್ತಿಗೆ ಅನುದಾನ ಇಡಲಾಗಿದೆ. ಮಳೆ ಬಿಟ್ಟ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ರಸ್ತೆ ವಿಸ್ತರಣೆ, ಚರಂಡಿ ದುರಸ್ತಿ ವೇಳೆ ಗ್ರಾಮಸ್ಥರೂ ಪಂಚಾಯತ್‌ಗೆ ಸಹಕಾರ ನೀಡಬೇಕೆಂದು ಸದಸ್ಯ ಸದಾನಂದ ಕುಂಟ್ಯಾನ ಹೇಳಿದರು. ದಾರಿದೀಪದ ವಿಚಾರವೂ ಪ್ರಸ್ತಾಪಗೊಂಡು ಚರ್ಚೆ ನಡೆಯಿತು. ಹೆದ್ದಾರಿ ಬದಿ ದಾರಿದೀಪ ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಶಾಲೆ ಪಕ್ಕ ತುರ್ತು ದುರಸ್ತಿ ಮಾಡಿ:
ಕುಂತೂರು ಶಾಲೆ ಪಕ್ಕ ರಸ್ತೆ ಕೆಟ್ಟುಹೋಗಿದ್ದು ತುರ್ತು ದುರಸ್ತಿ ಮಾಡಬೇಕೆಂದು ಹರೀಶ್ ಬಾಣಬೆಟ್ಟು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಚಂದ್ರಶೇಖರ ರೈ ಅಗತ್ತಾಡಿ, ಮಮತಾ ಅಂಬರಾಜೆ ಅವರು, ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ದುರಸ್ತಿಗೆ ಆಗಿಲ್ಲ. ಮಳೆ ಕಡಿಮೆ ಆದ ಕೂಡಲೇ ದುರಸ್ತಿಗೊಳಿಸುತ್ತೇವೆ ಎಂದರು.

ಹೆದ್ದಾರಿ ಬದಿಯೇ ವಿದ್ಯುತ್ ಕಂಬ:
ಸುರುಳಿ-ಕೆಮ್ಮಿಂಜೆ ರಸ್ತೆಯ ಬದಿಯಲ್ಲಿಯೇ ವಿದ್ಯುತ್ ಕಂಬವಿದೆ. ಇದರಿಂದ ರಸ್ತೆ ವಿಸ್ತರಣೆ, ಚರಂಡಿಗೆ ಸ್ಥಳವಿಲ್ಲ. ಪಕ್ಕದ ಜಾಗದಲ್ಲಿ ಕಂಬ ಹಾಕಬೇಕೆಂದು ಗ್ರಾಮಸ್ಥ ರಮೇಶ್ ರೈ ಸುರುಳಿ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಆಲಂಕಾರು ಶಾಖಾ ಕಿರಿಯ ಅಭಿಯಂತರ ಪ್ರೇಮ್‌ಕುಮಾರ್ ಭರವಸೆ ನೀಡಿದರು. ಪಾಲೆಚ್ಚಾರು ಎಂಬಲ್ಲಿಯೂ ಮಾರ್ಗದ ಮಧ್ಯೆ ವಿದ್ಯುತ್ ಕಂಬವಿದೆ ಎಂದು ಗ್ರಾಮಸ್ಥರು ಜೆಇ ಅವರ ಗಮನಕ್ಕೆ ತಂದರು. ಹಳೆಯ ವಿದ್ಯುತ್ ತಂತಿಗಳ ಬದಲಾವಣೆ ಮಾಡುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ಅಪಾಯಕಾರಿ ಮರಗಳ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದರು. ಇಡಾಳದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆಯೂ ಗ್ರಾಮಸ್ಥರು ಸಭೆಯ ಗಮನ ಸೆಳೆದರು.
ಮೆಸ್ಕಾಂ ಜೆಇ ಪ್ರೇಮ್‌ಕುಮಾರ್, ಆರೋಗ್ಯ ಇಲಾಖೆಯ ರಮ್ಯ, ಲೀಲಾವತಿ, ಮೋಹನಾಂಗಿ, ಕಂದಾಯ ಇಲಾಖೆಯ ಸಂತೋಷ್, ಕೃಷಿ ಇಲಾಖೆಯ ಸೀಮಾ ಕೆ.ಹೆಚ್., ಅರಣ್ಯ ಇಲಾಖೆಯ ಜಯಕುಮಾರ್, ಪೊಲೀಸ್ ಇಲಾಖೆಯ ಹರೀಶ್, ಸಿರಾಜುದ್ದೀನ್, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಪಶುಸಂಗೋಪನೆ ಇಲಾಖೆಯ ರವಿತೇಜ, ಹನುಮಂತ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಎಸ್.ಎಸ್.ಹುಕ್ಕೇರಿ, ಪೆರಾಬೆ ಶಾಲಾ ಶಿಕ್ಷಕಿ ಹೇಮಲತಾ, ತೋಟಗಾರಿಕೆ ಇಲಾಖೆಯ ಶಿವಕುಮಾರ್, ನರೇಗಾ ಯೋಜನೆಯ ಜಗತ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಾಧಾಕೃಷ್ಣ, ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಅವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಮೋಹನದಾಸ್ ರೈ, ಸುಶೀಲ, ಸಿ.ಎಂ.ಫಯಾಜ್, ಕಾವೇರಿ, ಮೇನ್ಸಿ ಸಾಜನ್, ಸದಾನಂದ,ಲೀಲಾವತಿ, ಚಂದ್ರಶೇಖರ ರೈ, ಕುಮಾರ ಬಿ.ಕೆ., ಮಮತಾ, ರಾಜ ಪಿ.ಜೆ., ಕೃಷ್ಣ ವೈ, ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಶಾಲಿನಿ ಕೆ.ಬಿ.ಅವರು ಸ್ವಾಗತಿಸಿ ವರದಿ ವಾಚಿಸಿದರು. ಸಿಬ್ಬಂದಿಗಳಾದ ಪದ್ಮಕುಮಾರಿ, ಉಮೇಶ್ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮಗಾರಿಗಳ ವಿವರ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here