ಮಜ್ಜಾರಡ್ಕ: ಅರ್ಧದಲ್ಲೇ ನಿಂತಿದ್ದ ಮನೆಗೆ ಕಾಯಕಲ್ಪ ಕೊಟ್ಟ ಸಂಘಟನೆ-ವಿಕಲಚೇತನರ ಬಾಳಿಗೆ ಬೆಳಕಾದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ

0

ಪುತ್ತೂರು: ಮರದಿಂದ ಬಿದ್ದು ಸೊಂಟದಿಂದ ಕೆಳಗೆ ಸ್ವಾಧೀನ ಕಳೆದುಕೊಂಡ ವ್ಯಕ್ತಿಯೋರ್ವರಿಗೆ ತನ್ನ ಕನಸಿನ ಮನೆಯನ್ನು ಪೂರ್ಣಗೊಳಿಸುವಲ್ಲಿ ಮಜ್ಜಾರಡ್ಕದ ಶ್ರೀ ವಿಷ್ಣು ಯುವಶಕ್ತಿ ಬಳಗವು ಕೈಜೋಡಿಸುವ ಮೂಲಕ ಸಮಾಜದ ಶ್ಲಾಘನೆಗೆ ಪಾತ್ರವಾಗಿದೆ. ಶ್ರಮ, ಸೇವೆ, ಸಹಾಯ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇದರ ಮುಂದಾಳತ್ವದಲ್ಲಿ ಈ ಕೆಲಸ ನಡೆಯುತ್ತಿದೆ. ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ನಿವಾಸಿ ಮೋಹನ್ ಎಂಬವರು ಮರದಿಂದ ಬಿದ್ದು ಸೊಂಟದಿಂದ ಕೆಳಗೆ ಸ್ವಾಧೀನ ಕಳೆದುಕೊಂಡಿದ್ದು ಇವರು ಕಟ್ಟಲು ಆರಂಭಿಸಿದ ಕನಸಿನ ಮನೆ ಕಳೆದ 8 ವರ್ಷದಿಂದ ಅರ್ಧದಲ್ಲೇ ಬಾಕಿಯಾಗಿತ್ತು. ಈ ಬಗ್ಗೆ ಮೋಹನ್‌ರವರು ಮಜ್ಜಾರಡ್ಕದ ಸಂಘಟನೆಗೆ ತನ್ನ ಮನೆಯನ್ನು ಪೂರ್ತಿ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಅವರ ಮನವಿಗೆ ಮಾನವೀಯತೆ ನೆಲೆಯಲ್ಲಿ ಸ್ಪಂದನೆ ನೀಡಿ, ವಯಸ್ಸಾದ ತಾಯಿ ಜೊತೆ ವಾಸಿಸುವ ಅವರಿಗೆ ಮನೆಯನ್ನು ಪೂರ್ಣ ಮಾಡಿ ಕೊಡುವ ಭರವಸೆಯನ್ನು ಸಂಘಟನೆಯು ಕೊಟ್ಟಿದ್ದು ಕೊಟ್ಟ ಭರವಸೆಯಂತೆ ಈಗ ಮನೆಯ ಕೆಲಸವನ್ನು ಪ್ರಾರಂಭ ಮಾಡಿದೆ. ಸಂಘಟನೆ ಗೌರವ ಅಧ್ಯಕ್ಷರಾದ ಒಲೆಮುಂಡೋವು ಮೋಹನ್ ರೈಯವರು ಹತ್ತು ಸಾವಿರ ರೂಪಾಯಿಯನ್ನು ಸಂಘಟನೆಗೆ ದೇಣಿಗೆ ನೀಡಿದ್ದು ಇದಲ್ಲದೆ ಸಂಘಟನೆಯ ಸಾಮಾಜಿಕ ಕೆಲಸ ಕಾರ್ಯಗಳನ್ನು ಗುರುತಿಸಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್‌ರವರು ಐದು ಸಾವಿರ ರೂಪಾಯಿ ನೀಡಿದ್ದಾರೆ. ಈಗಾಗಲೇ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಪೈಪ್ ಅಳವಡಿಸುವ ಸಂಘಟನೆಯ ಸದಸ್ಯರಾದ ಸಂದೇಶ್ ಕುಂಬ್ರ, ಸುದರ್ಶನ್ ರೈ ಪನೇಕ್ಕಳ, ಮತ್ತು ಸಮಿತ್ ನೀರ್ಪಾಡಿ-ಅಡ್ಕ ಇವರು ಶ್ರಮದಾನದ ರೂಪದಲ್ಲಿ ಸೇವೆ ಮಾಡಿದ್ದಾರೆ.

ದಾನಿಗಳ ನಿರೀಕ್ಷೆಯಲ್ಲಿ ಸಂಘಟನೆ
ಮೋಹನ್ ದರ್ಬೆತ್ತಡ್ಕರವರ ಮನೆಯ ಸಾರಣೆ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದ್ದು ದಾನಿಗಳ ಸಹಕಾರದ ಅಗತ್ಯವಿದೆ. ಇದಲ್ಲದೆ ಮನೆಯ ಇನ್ನಿತರ ಕೆಲಸ ಕಾರ್ಯಗಳಿಗೆ ಆರ್ಥಿಕ ಸಹಕಾರದ ಅಗತ್ಯವಿದೆ. ಸಹಕಾರ ನೀಡುವವರು ಸಂಘಟನೆಯ ಸಂಚಾಲಕ ರಾಜೇಶ್ ಕೆ, ಮಯೂರ 9483285830 ಇವರನ್ನು ಸಂಪರ್ಕಿಸಬಹುದಾಗಿದೆ. ಇದಲ್ಲದೆ ಸ್ವಾಮಿ ನಗರದಲ್ಲಿ ಸಂಘಟನೆಯ ಜವಾಬ್ದಾರಿಯಿಂದ ನಿರ್ಮಿಸಿದ ಬಾಗೀರಥಿ ಸ್ವಾಮಿನಗರ ಇವರ ಮನೆಯ ಪೇಂಟಿಂಗ್ ಕೆಲಸ ನಡೆಯುತಿದ್ದು ಕೊನೆಯ ಹಂತದಲ್ಲಿದೆ ಮುಂದಿನ ತಿಂಗಳು ಗೃಹ ಪ್ರವೇಶ ನಡೆಯಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here