ತಾ|ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮಾಲಕರ ಸಂಘದ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

0

ಉದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆಯಿದ್ದರೆ ಉದ್ಯಮ ಯಶಸ್ವಿ-ಅಶೋಕ್ ರೈ

ಪುತ್ತೂರು: ಪ್ರಸಕ್ತ ವಿದ್ಯಾಮಾನದಲ್ಲಿ ಪ್ರತಿಯೊಂದು ಉದ್ಯಮದಲ್ಲಿ ಸ್ಪರ್ಧೆಯಿದೆ. ಉದ್ಯಮ ಬೆಳೆಯಬೇಕಾದರೆ ಅಲ್ಲಿ ಸಮಾನ ಮನಸ್ಕತೆ ಬೇಕು. ತಾನೂ ಬೆಳೆಯಬೇಕು, ಉದ್ಯಮವೂ ಬೆಳೆಯಬೇಕು, ಸಂಘಟನೆಯೂ ಬೆಳೆಯಬೇಕು ಎಂದಾದರೆ ಅಲ್ಲಿ ಆರೋಗ್ಯಕರ ಸ್ಪರ್ಧೆಯಿದ್ದರೆ ಮಾತ್ರ ಸಾಧ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.


ಪುತ್ತೂರು ತಾಲೂಕು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮಾಲಕರ ಸಂಘದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಆ.12 ರಂದು ಬಪ್ಪಳಿಗೆ-ಪುತ್ತೂರು ಜೈನ ಭವನದಲ್ಲಿ ಜರಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಯಾವುದೇ ಉದ್ಯಮವಾಗಲಿ ಅಲ್ಲಿ ಅಧಿಕಾರಿಗಳ, ರಾಜಕಾರಣಿಗಳ, ಸಮಾಜದ ತೊಂದರೆ ಇದ್ದೇ ಇದೆ. ಈ ಸಂದರ್ಭದಲ್ಲಿ ಉದ್ಯಮಗಳಿಗೆ ಸಂಘಟನೆ ಬಹಳ ಉಪಯುಕ್ತವೆನಿಸುತ್ತದೆ. ಕೆಲವೊಂದು ಘಟನೆಗಳಲ್ಲಿ ಟೆಂಡರ್ ಆಗಿ ಕಾಮಗಾರಿ ಆಗದೆ ಕಪ್ಪು ಪಟ್ಟಿಯಲ್ಲಿ ಸಿಲುಕಿದವರೂ ಇದ್ದಾರೆ. ಓರ್ವ ಯಾವುದೇ ಉದ್ಯಮದಲ್ಲಿ ಯಶಸ್ವಿಯಾದರೆ ಎಲ್ಲರೂ ಆತನನ್ನು ಅನುಸರಿಸುವುದು ಎಷ್ಟು ಸೂಕ್ತ ಎಂದ ಅವರು ಸ್ಪರ್ಧೆ ಬೇಕು, ಆದರೆ ನಷ್ಟ ಉಂಟು ಮಾಡುವ, ಕುಟುಂಬವನ್ನು ಅಧಃಪತನದತ್ತ ಕೊಂಡೊಯ್ಯುವ ಉದ್ಯಮ ಬೇಡ. ಧ್ವನಿ, ಬೆಳಕು, ಶಾಮಿಯಾನ, ಡೆಕೊರೇಶನ್ ಸಂಘಟನೆಯವರದ್ದು ಕಠಿಣ ಕೆಲಸ, ಶ್ರಮಜೀವಿಗಳೂ ಕೂಡ. ನಿಮ್ಮ ಬೆನ್ನ ಹಿಂದೆ ತಾನೂ ಯಾವಾಗಲೂ ಇದ್ದೇನೆ ಎಂದು ಅವರು ಹೇಳಿದರು.


ಸಂಘಟನೆಯು ಬಲವರ್ಧಿತಗೊಂಡಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದು ಸಾಧ್ಯ-ರಾಜಶೇಖರ್ ಶೆಟ್ಟಿ:
ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ದ.ಕ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ರಾಜಶೇಖರ್ ಶೆಟ್ಟಿರವರು ಮಾತನಾಡಿ, ಕಳೆದ ಏಳು ವರ್ಷಗಳಿಂದ ಪುತ್ತೂರು ಸಂಘಟನೆಯು ಸಂಘದ ಅಭಿವೃದ್ದಿಯತ್ತ ಬಹಳ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಮಾತ್ರವಲ್ಲ ಇದು ಮುಂದಿನ ದಿನಗಳಲ್ಲಿ ಮುಂದುವರೆಯಲಿ. ಪ್ರತಿಯೊಂದು ವ್ಯವಹಾರದಲ್ಲೂ ಸ್ಪರ್ಧೆ ಇದೆ ಆದರೆ ಅದನ್ನು ಪರಸ್ಪರ ಅರ್ಥ ಮಾಡಿಕೊಂಡು ಸಂಘಟನಾತ್ಮಕವಾಗಿ ಹೋದಾಗ ವ್ಯವಹಾರವೂ ಅಭಿವೃದ್ಧಿಗೊಳ್ಳುತ್ತದೆ ಮಾತ್ರವಲ್ಲ ಸಂಘಟನೆಯು ಬಲಗೊಳ್ಳುತ್ತದೆ. ಸಂಘಟನೆಯು ಬಲವರ್ಧಿತಗೊಂಡಲ್ಲಿ ಯಾವುದೇ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದು ಸಾಧ್ಯ ಎಂದರು.


ಅಸಂಘಟಿತ ವಲಯದಿಂದ ಸಂಘಟಿತ ವಲಯದತ್ತ ಶಕ್ತಿ ತುಂಬುತ್ತಿದೆ-ಶ್ರೀಗಿರಿಶ್ ಮಳಿ:
ಮುಖ್ಯ ಅತಿಥಿ, ನ್ಯಾಯವಾದಿ ಶ್ರೀಗಿರೀಶ್ ಮಳಿ ಮಾತನಾಡಿ, ಯಾವುದೇ ಕಾರ್ಯಕ್ರಮವಿರಲಿ, ಅಲ್ಲಿ ಸೇರುವ ಸಾವಿರಾರು ಮಂದಿಗೆ ಆಶ್ರಯ ಕೊಡುವವರು ಈ ಸಂಘಟನೆಯವರು. ಶಾಮಿಯಾನ ಸಂಘದ ಮಾಲಕರಡಿಯಲ್ಲಿ ಅನೇಕ ಮಂದಿ ದುಡಿಯುವ ಮೂಲಕ ಅವರು ಉದ್ಯೋಗದಾತರೆನಿಸಿಕೊಂಡಿದ್ದಾರೆ. ಯಾವುದೇ ಮನೆಯ ಸಮಾರಂಭವಿರಲಿ, ಆ ಮನೆಯವರಿಗೆ ಯಾವುದೇ ಜವಾಬ್ದಾರಿ ನೀಡದೆ ತಾನೇ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವವರು ಈ ಸಂಘಟನೆಯವರು. ಸಂಘಟನೆ ಮಾಡಿಕೊಂಡು ಅಸಂಘಟಿತ ವಲಯದಿಂದ ಸಂಘಟಿತ ವಲಯದತ್ತ ತಿರುಗಿ ಸಂಘಟನೆಗೆ ಶಕ್ತಿ ತುಂಬುತ್ತಿರುವುದು ಉತ್ತಮ ಬೆಳವಣಿಗೆ. ಸಂಘಟನೆ ಬೆಳೆಸುವುದರ ಜೊತೆಗೆ ಕಾನೂನಾತ್ಮಕ ಅರಿವನ್ನು ಸದಸ್ಯರು ಪಡೆಯುವುದು ಸೂಕ್ತ ಎಂದರು.


ಅಜೀವ ಸದಸ್ಯತನದೊಂದಿಗೆ ಜಿಲ್ಲಾ ಸಂಘದಲ್ಲಿ ಗುರುತಿಸಿಕೊಳ್ಳಿ-ಬಾಬು ಕೆ.ವಿಟ್ಲ;
ಅಧ್ಯಕ್ಷತೆ ವಹಿಸಿದ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮಂಗಳೂರು ಇದರ ಅಧ್ಯಕ್ಷ ಬಾಬು ಕೆ.ವಿಟ್ಲ ಮಾತನಾಡಿ, ನಮ್ಮ ಸಂಘ ಎನ್ನುವುದು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳಿದ್ದಾಗೆ. ಸಂಘ ಬೆಳೆಯಬೇಕಾದರೆ ಅಲ್ಲಿ ಪ್ರೀತಿ ಮುಖ್ಯವೇ ಹೊರತು ಹಣ ಮುಖ್ಯವಲ್ಲ. ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಹಣವನ್ನು ಸಂಪಾದಿಸಬಹುದು. ನಮ್ಮ ಕೆಲಸದ ಗುಣಮಟ್ಟದಲ್ಲಿ ಎಂದಿಗೂ ರಾಜಿ ಬೇಡ. ಎಲ್ಲರೊಂದಿಗೆ ಒಗ್ಗಟ್ಟಿನೊಂದಿಗೆ ಮುಂದುವರಿಯೋಣ ಜೊತೆಗೆ ತಾಲೂಕು ಸದಸ್ಯರು ಜಿಲ್ಲಾ ಸಂಘದಲ್ಲಿ ಅಜೀವ ಸದಸ್ಯತನದೊಂದಿಗೆ ಗುರುತಿಸಿಕೊಳ್ಳುವಂತಾಗಬೇಕು ಎಂದರು.


ಮಂಗಳೂರು ಸ್ವಿಚ್-ಇನ್-ಟಚ್ ಮಾಲಕ ಸುಫೈಲ್, ಕಡಬ ಶಾಮಿಯಾನ ಮತ್ತು ಧ್ವನಿ ಬೆಳಕು ಸಂಘದ ಅಧ್ಯಕ್ಷ ಪ್ರಮೋದ್ ರೈ, ಸುಳ್ಯ ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಅಧ್ಯಕ್ಷ ಶಿವಪ್ರಕಾಶ್, ಮಂಗಳೂರು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಅಧ್ಯಕ್ಷ ಬೆನೆಟ್ ಡಿಸಿಲ್ವ, ಬಂಟ್ವಾಳ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಪಿಯೂಸ್ ಮ್ಯಾಕ್ಸಿಂ ಸಿಕ್ವೇರಾ, ಮೂಡಬಿದ್ರೆ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಬೆಳ್ತಂಗಡಿ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಹರೀಶ್ ಸಹಿತ ಹಲವರು ಭಾಗವಹಿಸಿದರು.


ಗುರುತಿಸುವಿಕೆ:
ಪದ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ರೋಯಲ್ ಇವೆಂಟ್ಸ್‌ನ ಅನಿಲ್ ಡಿ’ಸೋಜ, ಶ್ರೀದುರ್ಗಾ ಸೌಂಡ್ಸ್ ಆಂಡ್ ಲೈಟಿಂಗ್ಸ್‌ನ ಪ್ರದೀಪ್, ನಿಕಟಪೂರ್ವ ಅಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್, ಎಸ್.ಎನ್ ಇವೆಂಟ್ಸ್‌ನ ನಾಗೇಶ್ ಬಲ್ನಾಡು, ಪಿಕ್ಸೆಲ್ ಎಲ್‌ಇಡಿಯ ಪ್ರಜ್ವಲ್, ಆಶೀರ್ವಾದ್ ಶಾಮಿಯಾನದ ರಾಮಕೃಷ್ಣ, ಒಟ್ಟು ಕಾರ್ಯಕ್ರಮದ ನಿರ್ವಹಣೆ ಮಾಡಿದ ಆಶೀರ್ವಾದ್ ಇಲೆಕ್ಟ್ರಿಕಲ್ಸ್‌ನ ಪ್ರಕಾಶ್ ಡಿ’ಸೋಜ, ಕಾರ್ಯಕ್ರಮದಲ್ಲಿ ಸಂಗೀತ ರಸಮಂಜರಿ ನೀಡಿದ ವಿನೋದ್ ಆಚಾರ್ಯ, ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಬಾಲಕೃಷ್ಣ ಪೊರ್ದಾಲ್‌ರವರುಗಳಿಗೆ ಹೂ ನೀಡಿ ಗುರುತಿಸಲಾಯಿತು.


ವಿನೋದ್ ಆಚಾರ್ಯ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಶ್ಯಾಮ್ ಮಂಜುನಾಥ್ ಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಸೂಡಿಮುಳ್ಳು, ದೀಪಕ್ ಕುಮಾರ್, ಮನೋಹರ್ ಶೆಟ್ಟಿ, ರಾಮಕೃಷ್ಣ, ಅನಿಲ್ ಡಿ’ಸೋಜ, ಅನಿಲ್ ಶೆಟ್ಟಿ, ದಾವೂದ್, ಅನೀಶ್ ಶೆಟ್ಟಿ, ಪ್ರಕಾಶ್ ಡಿ’ಸೋಜ, ಯೋಗೀಶ್‌ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ನೂತನ ಅಧ್ಯಕ್ಷ ರಾಮಕೃಷ್ಣರವರು ಎಲ್ಲರ ಸಹಕಾರ ಕೋರುತ್ತಾ ವಂದಿಸಿದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಪದ ಪ್ರದಾನ..
2024-25ನೇ ಸಾಲಿನ ಅಧ್ಯಕ್ಷರಾಗಿ ಕೆಮ್ಮಾಯಿ ಆಶೀರ್ವಾದ್ ಶಾಮಿಯಾನದ ರಾಮಕೃಷ್ಣ, ಕಾರ್ಯದರ್ಶಿಯಾಗಿ ತಿಂಗಳಾಡಿ ಸುಬ್ರಹ್ಮಣ್ಯ ಶಾಮಿಯಾನದ ಅನೀಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಬುಳೇರಿಕಟ್ಟೆ ಸ್ಕಂದ ಪವರ್ ಜನರೇಟರ್ ಸರ್ವಿಸಸ್‌ನ ಶ್ರೀಹರ್ಷ ರೈ, ಗೌರವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಮಂಜಲ್ಪಡ್ಪು ವಿಜಯಾ ಸರ್ವಿಸಸ್‌ನ ಶ್ಯಾಮ್ ಮಂಜುನಾಥ್ ಪ್ರಸಾದ್, ಉಪಾಧ್ಯಕ್ಷರಾಗಿ ಬಲ್ನಾಡು ಎಸ್.ಎನ್ ಇವೆಂಟ್ಸ್‌ನ ನಾಗೇಶ್ ಬಲ್ನಾಡು, ಸಹ ಕಾರ್ಯದರ್ಶಿಯಾಗಿ ಪರ್ಪುಂಜ ಶುಭಂ ಶಾಮಿಯಾನದ ಗಣೇಶ್, ಸಂಘಟನಾ ಕಾರ್ಯದರ್ಶಿಯಾಗಿ ಕಾವು ಚಿಂತನಾ ಸೌಂಡ್ಸ್ ಆಂಡ್ ಲೈಟಿಂಗ್ಸ್‌ನ ಯೋಗೀಶ್ ಕಾವು, ಗೌರವ ಸಲಹೆಗಾರರಾಗಿ ಪಡೀಲು ಎಂಡಿಎಸ್ ಬ್ರದರ್ಸ್‌ನ ಹೆನ್ರಿ ಡಿ’ಸೋಜ, ಉರ್ಲಾಂಡಿ ಎಸ್‌ಎಂಎಸ್‌ಎಲ್ ಲೈಟಿಂಗ್ಸ್ ಆಂಡ್ ಸೌಂಡ್ಸ್‌ನ ಮನೋಹರ್ ಶೆಟ್ಟಿ, ಎಪಿಎಂಸಿ ರಸ್ತೆ ಸುಪ್ರೀಮ್ ಸರ್ವಿಸಸ್‌ನ ಸಿಪ್ರಿಯನ್ ಮೊರಾಸ್‌ರವರಿಗೆ ಪ್ರಮಾಣವಚನ ಬೋಧಿಸುವ ಮೂಲಕ ದ.ಕ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ರಾಜಶೇಖರ್ ಶೆಟ್ಟಿರವರು ಪದಪ್ರದಾನವನ್ನು ನಡೆಸಿಕೊಟ್ಟರು.

ಸನ್ಮಾನ..
ಮೂಲತಃ ಕೃಷಿಕರಾಗಿದ್ದು, 1978ರಿಂದ ಓಂಕಾರ್ ಲೈಟಿಂಗ್ಸ್ ಅನ್ನು ಮುನ್ನೆಡೆಸಿಕೊಂಡು ಬಂದಿರುವ ಹಿರಿಯ ಸದಸ್ಯರಾದ ಚಂದ್ರಶೇಖರ್ ಪೂಜಾರಿ ಶಾಂತಿಗೋಡು, ಸುಮಾರು 17 ವರ್ಷ ಭಾರತೀಯ ಭೂಸೇನೆಯನ್ನು ಪ್ರತಿನಿದಿಸಿ ನಿವೃತ್ತರಾದ ಬಾಲಚಂದ್ರ ಗೌಡ ಬಲ್ನಾಡು, ಸುದೀರ್ಘ 22 ವರ್ಷ ಕೇಂದ್ರೀಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜತ್ತಪ್ಪ ನಾಯ್ಕ್‌ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.


LEAVE A REPLY

Please enter your comment!
Please enter your name here