ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಿಸದಿದ್ದರೆ ಪ್ರತಿಭಟನೆ-ಗ್ರಾಮಸ್ಥರ ಎಚ್ಚರಿಕೆ

0

ರಾಮಕುಂಜ: ಕಳೆದ ನಾಲ್ಕೈದು ವರ್ಷಗಳಿಂದ ಖಾಲಿ ಇರುವ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ.


ಸಭೆ ಆ.5ರಂದು ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಜಯಪ್ರಕಾಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಎಸ್.ಕೆ.ಸಿದ್ದೀಕ್ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಗ್ರಾಮಸ್ಥರೂ ಆದ ಧರ್ಮಪಾಲ ರಾವ್ ಅವರು, ಆತೂರಿನಲ್ಲಿರುವ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯವಸ್ಥಿತವಾದ ಕಟ್ಟಡವಿದೆ. 7 ಗ್ರಾಮಗಳ ವ್ಯಾಪ್ತಿಯೂ ಇದೆ. ಆದರೆ ವೈದ್ಯರಿಲ್ಲದೇ ಗ್ರಾಮಸ್ಥರು ತೊಂದರೆ ಪಡುವಂತೆ ಆಗಿದೆ ಎಂದರು. ಇದಕ್ಕೆ ಲಕ್ಷ್ಮೀ ನಾರಾಯಣ ರಾವ್ ಆತೂರು, ಚಿತ್ತರಂಜನ್ ಬದೆಂಜ ಸಹಿತ ಹಲವು ಗ್ರಾಮಸ್ಥರು ಬೆಂಬಲ ಸೂಚಿಸಿ ಖಾಯಂ ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಯತೀಶ್ ಬಾನಡ್ಕ ಅವರು, ಖಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ಸಚಿವರಿಗೆ ಮೂರು ಸಲ ಮನವಿ ಮಾಡಲಾಗಿದೆ. ಡಿಹೆಚ್‌ಒ, ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಿ ವೈದ್ಯರ ನೇಮಕ ಮಾಡುವಂತೆ ಮನವಿ ಮಾಡಲಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವೈದ್ಯಾಧಿಕಾರಿ ನೇಮಕ ಆಗದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಪೈಪ್‌ಲೈನ್ ಸರಿಪಡಿಸಿ:
ಕುಡಿಯುವ ನೀರಿನ ಪೈಪ್‌ಲೈನ್ ಸರಿಪಡಿಸಿ ಎಂದು ಗ್ರಾಮಸ್ಥ ಸಿದ್ದೀಕ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುಚೇತಾ ಅವರು, ಜೆಜೆಎಂ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ವಿಪರೀತ ಮಳೆಯಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಮಳೆ ಕಡಿಮೆ ಆದ ತಕ್ಷಣ ದುರಸ್ತಿ ಮಾಡಲಾಗುವುದು ಎಂದರು. ವ್ಯವಸ್ಥಿತವಾಗಿರುವ ಪೈಪ್‌ಲೈನ್ ತೆಗೆದು ಮತ್ತೆ ಅಳವಡಿಸುವ ಅವಶ್ಯಕತೆ ಇದೆಯೇ ಎಂದು ಧರ್ಮಪಾಲ ರಾವ್ ಪ್ರಶ್ನಿಸಿದರು.

ಪಶುವೈದ್ಯಕೀಯ ಕಾಲೇಜು ಚರಂಡಿ ದುರಸ್ತಿ-ಚರ್ಚೆ:
15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ರಾಮಕುಂಜ ಗ್ರಾಮದ ಪಶುವೈದ್ಯಕೀಯ ಕಾಲೇಜು ಬಳಿ ಚರಂಡಿ ದುರಸ್ತಿಗೆ 14985 ರೂ.ಖರ್ಚು ಮಾಡಿರುವ ವಿಚಾರವನ್ನು ಧರ್ಮಪಾಲ ರಾವ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿಕಟಪೂರ್ವ ಅಧ್ಯಕ್ಷೆ ಮಾಲತಿ ಕದ್ರ ಅವರು, ಸದಸ್ಯರ ಮನವಿಯಂತೆ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿದ್ದ ಹೊಂಡ ಮುಚ್ಚಲು, ಚರಂಡಿ ದುರಸ್ತಿಗೆ ಅನುದಾನ ಬಳಕೆಯಾಗಿದೆ ಎಂದರು. ರಾಜ್ಯ ಹೆದ್ದಾರಿಯ ದುರಸ್ತಿಗೆ ಪಿಡಬ್ಲ್ಯುಡಿ ಇಲಾಖೆಗೆ ಪಂಚಾಯತ್‌ನಿಂದ ಮನವಿ ಮಾಡಬೇಕಿತ್ತು ಎಂದರು. ಈ ವೇಳೆ ಮಾತನಾಡಿದ ಸದಸ್ಯ ಪ್ರಶಾಂತ್ ಆರ್.ಕೆ.ಅವರು, ಪಿಡಬ್ಲ್ಯುಡಿಗೆ ಮನವಿ ಮಾಡಿದರೂ ದುರಸ್ತಿಗೊಳಿಸಿಲ್ಲ. ಸಮಸ್ಯೆ ಆದಲ್ಲಿ ಪಂಚಾಯತ್‌ಗೆ ದೂರು ಬರುತ್ತದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಅನುದಾನ ಬಳಕೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಅದೇ ವಾರ್ಡ್‌ನ ಸದಸ್ಯ ಅಬ್ದುಲ್ ರಹಿಮಾನ್ ಹೇಳಿದರು.

ಕುಮ್ಕಿ ಭೂಮಿ ಲೀಸ್‌ಗೆ ಆಕ್ಷೇಪ:
ಕುಮ್ಕಿ ಭೂಮಿ ಲೀಸ್‌ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಇದು ಜಾರಿಗೊಂಡಲ್ಲಿ ಕುಮ್ಕಿ ಭೂಮಿಯನ್ನು ರೈತರಿಂದ ಕಸಿದುಕೊಂಡಂತೆ ಎಂದು ಚಿತ್ತರಂಜನ್ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಸತೀಶ್ ಅವರು, ಇದು ಸರಕಾರದ ಹಂತದಲ್ಲಿ ಆಗುವಂತದ್ದು. ಆದರೆ ಈ ಬಗ್ಗೆ ಯಾವುದೇ ಸುತ್ತೋಲೆ ಬಂದಿಲ್ಲ ಎಂದರು.

ರಸ್ತೆ ಎಫ್‌ಎಂಬಿಯಲ್ಲಿ ದಾಖಲಿಸಿ:
ಗ್ರಾಮ ಪಂಚಾಯತ್ ರಸ್ತೆಗಳು ಸ್ವಲ್ಪ ಸ್ವಲ್ಪವೇ ಅತಿಕ್ರಮಣ ಆಗುತ್ತಿದೆ. ಈಗಾಗಲೇ ಕೆಲವು ರಸ್ತೆಗಳಲ್ಲಿ ಎರಡು ವಾಹನಗಳು ಎದುರಾದಲ್ಲಿ ಸೈಡ್ ಕೊಡಲು ಜಾಗ ಇಲ್ಲದ್ದಂತೆ ಆಗಿದೆ. ಆದ್ದರಿಂದ ಪಂಚಾಯತ್ ರಸ್ತೆಗಳನ್ನು ಎಫ್‌ಎಂಬಿಯಲ್ಲಿ ದಾಖಲು ಮಾಡುವಂತೆ ಪ್ರತಿ ಗ್ರಾಮಸಭೆಯಲ್ಲೂ ಪ್ರಸ್ತಾಪಿಸುತ್ತಿದ್ದೇನೆ ಎಂದು ಧರ್ಮಪಾಲ ರಾವ್ ಹೇಳಿದರು. ಅಕ್ರಮ-ಸಕ್ರಮ ಜಾಗ ಮಂಜೂರುಗೊಳಿಸುವ ವೇಳೆ ಕಾಲುದಾರಿ, ನೀರಿನ ಮೂಲ ಊರ್ಜಿತದಲ್ಲಿಡಬೇಕೆಂದು ಚಿತ್ತರಂಜನ್ ರಾವ್ ಬದೆಂಜ ಒತ್ತಾಯಿಸಿದರು.

ಪರಿಹಾರ ಮೊತ್ತ ಹೆಚ್ಚಿಸಿ:
ಪ್ರಾಕೃತಿಕ ವಿಕೋಪದಿಂದ ಕೃಷಿ ಹಾಗೂ ಮನೆ ಹಾನಿಗೆ ನೀಡುತ್ತಿರುವ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಪ್ರವೀಣ್ ದೇರೆಜಾಲು ಒತ್ತಾಯಿಸಿದರು. ಸಿಡಿಲು ಬಡಿತದಿಂದ ಅಡಿಕೆ ತೋಟ, ತೆಂಗಿನ ತೋಟ ನಾಶಗೊಳ್ಳುತ್ತಿದೆ. ಇದನ್ನು ತಡೆಯಲು ಸರಕಾರದ ವತಿಯಿಂದ ಮಿಂಚು ಬಂಧಕ ಅಳವಡಿಕೆಗೂ ಕ್ರಮ ಕೈಗೊಳ್ಳಬೇಕೆಂದು ಪ್ರವೀಣ್ ದೇರೆಜಾಲು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿಗೆ ನಿರ್ಣಯಿಸಲಾಯಿತು.

ಅಪಾಯಕಾರಿ ಮರ ತೆರವುಗೊಳಿಸಿ:
ಗೋಳಿತ್ತಡಿ ಜಂಕ್ಷನ್‌ನಲ್ಲಿ ಅಪಾಯಕಾರಿ ಮರವೊಂದು ಇದ್ದು ಪ್ರಾಣ ಹಾನಿ ಸಂಭವಿಸುವ ಮೊದಲು ಮರ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿ ಹೇಳಿದರು.

ಬ್ಯಾಗ್ ರಹಿತ ದಿನ ಅನುಷ್ಠಾನವಾಗುತ್ತಿಲ್ಲ:
ಖಾಸಗಿ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಗ್ರಾಮಸ್ಥ ಪ್ರವೀಣ್ ದೇರೆಜಾಲು ಹೇಳಿದರು. ಬ್ಯಾಗ್‌ನ ತೂಕದ ಬಗ್ಗೆ ಆಯುಕ್ತರ ಕಚೇರಿಯಿಂದಲೇ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೋಗಿದೆ. ಇದು ಅನುಷ್ಠಾನ ಆಗದೇ ಇದ್ದಲ್ಲಿ ಶಾಲೆಯ ಹೆಸರು ಬರೆದು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಪತ್ರ ಬರೆಯಬಹುದು ಎಂದು ಸಿಆರ್‌ಪಿ ಮಹೇಶ್ ಉತ್ತರಿಸಿದರು.

ಗೋ ಶಾಲೆಗೆ ವಾಹನ ಕಲ್ಪಿಸಿ:
ರಾಮಕುಂಜ ಗೋ ಶಾಲೆಗೆ 1 ಕಿ.ಮೀ.ನಿಂದಲೂ ಹೆಚ್ಚು ದೂರದಿಂದ ಹುಲ್ಲು ತರಬೇಕಾಗಿದೆ. ಅಲ್ಲಿನ ಸಿಬ್ಬಂದಿಗಳು ತಲೆಯಲ್ಲಿ ಹೊತ್ತುಕೊಂಡೇ ತರುತ್ತಿದ್ದಾರೆ. ಆದ್ದರಿಂದ ಇಲ್ಲಿಗೆ ಪಶು ಸಂಗೋಪನಾ ಇಲಾಖೆಯಿಂದ ವಾಹನದ ವ್ಯವಸ್ಥೆ ಮಾಡಬೇಕೆಂದು ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ.ಅವರು ಪಶುಸಂಗೋಪನಾ ಇಲಾಖೆಯವರನ್ನು ಒತ್ತಾಯಿಸಿದರು.

ಸರ್ವರ್ ಸಮಸ್ಯೆ:
ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಗೆ ತೊಂದರೆಯಾಗುತ್ತಿದೆ. ಗ್ರಾಹಕರು ನಾಲ್ಕೈದು ದಿನ ಸೊಸೈಟಿಗೆ ಬಂದು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಇಲಾಖೆಗೆ ಮನವಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಒತ್ತಾಯಿಸಿದರು.

ಬಾಕಿ ಬಿಲ್ಲಿಗೆ ದಂಡ ಬೇಡ:
ಮೆಸ್ಕಾಂಗೆ ವಿದ್ಯುತ್ ಬಿಲ್ಲು ಬಾಕಿ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕುಡಿಯುವ ನೀರಿಗೆ ವಿದ್ಯುತ್ ಬಳಕೆಯಾಗುತ್ತಿರುವುದರಿಂದ ವಿದ್ಯುತ್ ಬಿಲ್ಲು ಉಚಿತ ಮಾಡಬೇಕು. ಇಲ್ಲದೇ ಇದ್ದಲ್ಲಿ ಗ್ರಾಮ ಪಂಚಾಯತ್ ಬಾಕಿ ಇರಿಸಿಕೊಂಡಿರುವ ವಿದ್ಯುತ್ ಬಿಲ್ಲಿಗೆ ದಂಡ ವಿಧಿಸದಂತೆ ಧರ್ಮಪಾಲ ರಾವ್ ಒತ್ತಾಯಿಸಿದರು. ಈ ಬಗ್ಗೆ ಮೆಸ್ಕಾಂಗೆ ಮನವಿಗೆ ನಿರ್ಣಯ ಕೈಗೊಳ್ಳಲಾಯಿತು.

ರಸ್ತೆ ಮರು ಡಾಮರೀಕರಣಗೊಳಿಸಿ:
ಗೋಕುಲನಗರ-ಪೆರ್ಜಿ ಪರಿಶಿಷ್ಠ ಜಾತಿ ಕಾಲೋನಿ ರಸ್ತೆಯಲ್ಲಿ ಅಂದಾಜು 75 ಮೀ.ನಷ್ಟು ಹೆದ್ದಾರಿಯಲ್ಲಿ ಡಾಮರು ಎದ್ದು ಹೋಗಿದ್ದು ಇಲ್ಲಿ ಮರು ಡಾಮರೀಕರಣಗೊಳಿಸಬೇಕೆಂದು ಒತ್ತಾಯಿಸಲಾಯಿತು. ಹಳೆನೇರೆಂಕಿ-ಹೊಸಮಾರಡ್ಡ ರಸ್ತೆಯಲ್ಲಿ ಚರಂಡಿ ಬ್ಲಾಕ್ ಆಗಿದ್ದು ಇದನ್ನು ದುರಸ್ತಿಗೊಳಿಸಬೇಕೆಂದು ದೇವಕಿ ಹಿರಿಂಜ ಒತ್ತಾಯಿಸಿದರು. ಪಾದೆ ರಸ್ತೆ ಡಾಮರು ಎದ್ದುಹೋಗಿದ್ದು ಹೊಂಡ ನಿರ್ಮಾಣಗೊಂಡಿದೆ. ಸದ್ರಿ ರಸ್ತೆ ಡಾಮರೀಕರಣಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ನೇಲಡ್ಕ ಸೇತುವೆ ದುರಸ್ತಿಗೊಳಿಸುವಂತೆ ಗ್ರಾಮಸ್ಥ ಮುತ್ತಪ್ಪ ಗೌಡ ಒತ್ತಾಯಿಸಿದರು.

ಹೆದ್ದಾರಿ ಬದಿ ಮಣ್ಣು ತುಂಬಿಸಿ:
ರಾಮಕುಂಜ-ಹಳೆನೇರೆಂಕಿ ಡಾಮರು ರಸ್ತೆಯುದ್ದಕ್ಕೂ ಡಾಮರು ಬದಿ ಏರಿಳಿತವಿದೆ. ಕೆಲವು ಕಡೆ ಡಾಮರು ರಸ್ತೆಯಿಂದ ವಾಹನ ಕೆಳಗೆ ಇಳಿಸದಂತ ಪರಿಸ್ಥಿತಿ ಇದೆ. ಶಾಲಾ ಮಕ್ಕಳು, ಶಾಲಾ ವಾಹನಗಳು ಸೇರಿದಂತೆ ದಿನಕ್ಕೆ ನೂರಾರು ವಾಹನ ಈ ರಸ್ತೆಯಲ್ಲಿ ಓಡಾಟ ನಡೆಸುತ್ತಿವೆ. ಆದ್ದರಿಂದ ಇಲ್ಲಿ ಡಾಮರು ರಸ್ತೆಯ ಎರಡೂ ಬದಿ ಮಣ್ಣು ತುಂಬಿಸಬೇಕೆಂದು ಶರತ್ ಕೆದಿಲ ಒತ್ತಾಯಿಸಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಶಿಥಿಲಗೊಂಡಿರುವ ಶಾಲಾ ಕಟ್ಟಡ:
ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ಕಟ್ಟಡ ಶಿಥಿಲಗೊಂಡಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಲಕ್ಷ್ಮೀನಾರಾಯಣ ರಾವ್, ಧರ್ಮಪಾಲ ರಾವ್, ಸಿದ್ದೀಕ್ ಎಸ್.ಕೆ.ಅವರು ವಿಷಯ ಪ್ರಸ್ತಾಪಿಸಿ ಹೊಸ ಕಟ್ಟಡ ರಚನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ದೇವಕಿ ಹಿರಿಂಜ ಅವರು, ಶಾಲಾ ಕಟ್ಟಡ, ಶಿಕ್ಷಕರ ಸಮಸ್ಯೆಯಿಂದಾಗಿಯೇ ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಹಿಂಜರಿಯುತ್ತಾರೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇದೂ ಕಾರಣವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ರಾಮಕುಂಜ ಶಾಲೆಗೆ ಶೌಚಾಲಯ, ಆವರಣಗೋಡೆ ಮಾಡಿಕೊಡಲಾಗಿದೆ. ಶಾಲಾ ಕಟ್ಟಡಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿರುವುದರಿಂದ ಪಂಚಾಯತ್‌ನಿಂದ ಸಾಧ್ಯವಿಲ್ಲ ಎಂದರು. ಈ ಬಗ್ಗೆ ಚರ್ಚೆ ನಡೆದು ಶಾಲಾ ಕಟ್ಟಡ ರಚನೆಗೆ ಅನುದಾನ ಕೋರಿ ಶಾಸಕರಿಗೆ ಮನವಿ ಮಾಡಲು ನಿರ್ಧರಿಸಲಾಯಿತು.

ನಿವೇಶನ ಕೊಡಿ:
12 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು ನಿವೇಶನ ಕೊಡಿ ಎಂದು ಮಹಿಳೆಯರಿಬ್ಬರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಲಲಿತಾ ಅವರು, ನಿವೇಶನ ರಹಿತರು ಎಲ್ಲಿಯೂ ಜಾಗ ಇಲ್ಲ ಎಂದು ಪಂಚಾಯತ್‌ಗೆ ದೃಢೀಕರಣ ಕೊಡಬೇಕಾಗಿದೆ. ನೀವು ಸೂಕ್ತ ದಾಖಲೆಯೊಂದಿಗೆ ಪಂಚಾಯತ್‌ಗೆ ಅರ್ಜಿ ಸಲ್ಲಿಸಿ ಎಂದು ಹೇಳಿದರು.

ಗ್ರಾಮ ಆಡಳಿತಾಧಿಕಾರಿ ಸತೀಶ್, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಅಭಿಯಂತರ ನಿತಿನ್‌ಕುಮಾರ್, ಆಲಂಕಾರು ಶಾಖಾ ಕಿರಿಯ ಅಭಿಯಂತರ ಪ್ರೇಮ್‌ಕುಮಾರ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಮೇನೇಜರ್ ಆನಂದ ಗೌಡ, ಅರಣ್ಯ ಇಲಾಖೆಯ ಸುಧೀರ್ ಹೆಗ್ಡೆ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಮಾವತಿ, ಸಿಆರ್‌ಪಿ ಮಹೇಶ್, ಕೃಷಿ ಇಲಾಖೆಯ ಸೀಮಾ, ಪಶುಸಂಗೋಪನಾ ಇಲಾಖೆಯ ರವಿತೇಜ, ಆರೋಗ್ಯ ಇಲಾಖೆಯವರು ಇಲಾಖಾವಾರು ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಮಾಲತಿ ಎನ್.ಕೆ., ಸುಜಾತ ಕೆ., ಭಾರತಿ ಎಂ., ಭವಾನಿ, ಜಯಶ್ರೀ, ರೋಹಿಣಿ ಬಿ., ಕುಶಾಲಪ್ಪ ಎಂ., ವಸಂತ ಪಿ., ಪ್ರದೀಪ ಬಿ., ಅಬ್ದುಲ್ ರಹಿಮಾನ್, ಯತೀಶ್‌ಕುಮಾರ್, ಪ್ರಶಾಂತ ಆರ್.ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ದುರ್ಗಾಪ್ರಸಾದ್ ವರದಿ ವಾಚಿಸಿದರು. ಪಿಡಿಒ ಮೋಹನ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಲಲಿತಾ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here