ಪುತ್ತೂರು: ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ- ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ “ಮಾನವ ಸರಪಳಿ”

0

ಪುತ್ತೂರು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನ ಜಾಗೃತಿಗೋಸ್ಕರ ಮಾನವ ಸರಪಳಿ ನಿರ್ಮಿಸಿ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪರಿವಾರ ಸಂಘಟನೆಗಳ ಸಹಯೋಗದೊಂದಿಗೆ ಆ.12ರಂದು ಪುತ್ತೂರು ದರ್ಬೆ ವೃತ್ತದಲ್ಲಿ ಪ್ರತಿಭಟನೆಯ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಿತು. ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತ ಹಿಂದುಗಳ ರಕ್ಷಣೆಗಾಗಿ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಲಾಯಿತು.


ದೌರ್ಜನ್ಯಕ್ಕೊಳಗಾದ ಹಿಂದುಗಳಿಗೆ ಭಾರತದಲ್ಲಿ ನೆಲೆ:
ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂ ಬಾಂಧವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ವಿರೋಽಸಿ ವಿಶ್ವದ ಎಲ್ಲೆಡೆ ಬಾಂಗ್ಲಾದೇಶದ ಹಿಂದುಗಳಿಗಾಗಿ ಒಗ್ಗಟ್ಟಿನ ಪ್ರತಿಭಟನೆ ನಡೆಯುತ್ತಿದೆ. ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಪರವಾಗಿ ಮಾತನಾಡುವ ಸೋಗಲಾಡಿ ಸೆಕ್ಯುಲರ್‌ಗಳು ಈಗ ಮೌನ ವಹಿಸಿದ್ದಾರೆ. ಅವರು ಯಾರೂ ಕೂಡಾ ಬಾಂಗ್ಲಾದೇಶದ ಹಿಂದುಗಳ ಪರ ಧ್ವನಿ ಎತ್ತುತ್ತಿಲ್ಲ. ಆದರೆ ನಾವು ಬಾಂಗ್ಲಾದೇಶದ ಹಿಂದುಗಳ ಪರವಾಗಿ ನಿಲ್ಲುವ ಅನಿವಾರ್ಯತೆ ಇದೆ. ಅಲ್ಲಿ ದೌರ್ಜನ್ಯಕ್ಕೊಳಗಾದ ಹಿಂದುಗಳಿಗೆ ಭಾರತದಲ್ಲಿ ಸಿಎಎ ಕಾನೂನಿನ ಮೂಲಕ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.


ಕಾಂಗ್ರೆಸ್ ಹಿಂದೂಗಳ ರಕ್ಷಣೆ ಕುರಿತು ಮಾತನಾಡುತ್ತಿಲ್ಲ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಶಾಂತಿ ಸಹ ಬಾಳ್ವೆಗೆ ಸಂದೇಶ ಕೊಟ್ಟಂತಹ ಹಿಂದೂ ಸಮಾಜವನ್ನು ನಿರ್ಣಾಮ ಮಾಡುವ ಕೆಲಸ ಬಾಂಗ್ಲಾದೇಶದಲ್ಲಿ ಮತಾಂದ ಶಕ್ತಿಗಳು ಮಾಡುತ್ತಿವೆ. ಅಲ್ಲಿರುವ ಹಿಂದುಗಳ, ದೇವಾಲಯಗಳ ರಕ್ಷಣೆಯನ್ನು ಭಾರತ ಸರಕಾರ ಮಾಡಬೇಕಾಗಿದೆ. ಸೆಕ್ಯೂರಿಸಮ್ ಇರುವಂತಹ ಕಾಂಗ್ರೆಸ್ ಪಾರ್ಟಿ ಇವತ್ತು ಬಾಯಿ ಮುಚ್ಚಿ ಕೂತಿದೆ. ಕಾಂಗ್ರೆಸ್‌ಗೆ ಎಲ್ಲಿಯಾದರೂ ಸೆಕ್ಯುಲರಿಸಮ್ ಇದ್ದರೆ ಇವತ್ತು ಹಿಂದುಗಳ ರಕ್ಷಣೆ ಬಗ್ಗೆ ಮಾತನಾಡಬೇಕಾಗಿತ್ತು. ಆದರೆ ಕಾಂಗ್ರೆಸ್ ರಾಜಕೀಯ ಉದ್ದೇಶವಿಟ್ಟುಕೊಂಡು ಹಿಂದುಗಳ ರಕ್ಷಣೆಗೆ ಹೋಗುತ್ತಿಲ್ಲ ಎಂದು ಆರೋಪಿಸಿದ ಅವರು ಹಿಂದುಗಳ ರಕ್ಷಣೆಯನ್ನು ಬಾಂಗ್ಲಾದೇಶದ ಸರಕಾರ ಮಾಡದೆ ಇದ್ದರೆ ನಾವು ಇನ್ನೂ ಉಗ್ರ ಹೋರಾಟ ಮಾಡಲಿದ್ದೇವೆ ಎಂದರು.


ಹಿಂದುಗಳ ರಕ್ಷಣೆಗೆ ಜಗತ್ತಿನ ದೇಶಗಳು ನಿರ್ಣಯಕ್ಕೆ ಬರಬೇಕು:
ಹಿಂದೂ ಜಾಗರಣ ವೇದಿಕೆಯ ಪ್ರಮುಖ್ ಮೋಹನ್‌ದಾಸ್ ಅವರು ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ದೇಶ ವಿಭಜನೆಯ ವೇಳೆ ಲಕ್ಷಾಂತರ ಹಿಂದುಗಳ ಮಾರಣ ಹೋಮ ನಡೆದಿತ್ತು. ಅದಾದ ಬಳಿಕ ದೊಡ್ಡ ಮಟ್ಟದ ದುರ್ಘಟನೆ ಇವತ್ತಿನ ಬಾಂಗ್ಲಾದೇಶದ ರಾಜಕೀಯ ಅರಾಜಕತೆಯಿಂದ ನಡೆಯುತ್ತಿದೆ. ಜಗತ್ತಿನ 198 ದೇಶಗಳಲ್ಲಿರುವ ಹಿಂದುಗಳು ಜಾಗೃತರಾಗಿ ರಕ್ಷಣೆಯ ದೃಷ್ಟಿಯಿಂದ ಒಂದು ನಿರ್ಣಯಕ್ಕೆ ಬರಬೇಕು. ಈ ಕುರಿತು ಈಗಾಗಲೇ ದೇಶದ ಎಲ್ಲಾ ಪ್ರಾಂತಗಳಲ್ಲಿ ಮಾನವ ಸರಪಳಿ ಮಾಡುವ ಮೂಲಕ ಜಗತ್ತಿಗೆ ಎಚ್ಚರಿಕೆ ಕೊಡುವ ಕೆಲಸ ಆಗಿದೆ ಎಂದರು.


ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಡಾ. ಸುರೇಶ್ ಪುತ್ತೂರಾಯ, ವಿಶ್ವಹಿಂದು ಪರಿಷತ್ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ದಿನೇಶ್ ಪಂಜಿಗ, ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಕೋಡಿಬೈಲು, ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂತೋಷ್ ಕೈಕಾರ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ವಿಶ್ವನಾಥ ಗೌಡ ಬನ್ನೂರು, ಜಗದೀಶ್ ಶೆಣೈ, ಎಸ್.ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ ರಾವ್ ಬಪ್ಪಳಿಗೆ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಹರೀಶ್ ದೋಳ್ಪಾಡಿ, ಶ್ರೀಧರ್ ತೆಂಕಿಲ, ವಿಶ್ವನಾಥ ಗೌಡ ಬನ್ನೂರು, ಹರೀಶ್ ಬಿಜತ್ರೆ, ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಅನಿಲ್ ತೆಂಕಿಲ, ಸುಂದರ ಪೂಜಾರಿ ಬಡಾವು, ಪದ್ಮನಾಭ ನಾಯ್ಕ್, ಅಜಿತ್ ರೈ ಹೊಸಮನೆ, ಪ್ರವೀಣ್ ತಿಂಗಳಾಡಿ, ಸಂತೋಷ್ ಬೊಳುವಾರು, ನೀಲಂತ್ ಬೊಳುವಾರು, ಜನಾರ್ದನ ಬೆಟ್ಟ ಸಹಿತ ಹಲವಾರು ಮಂದಿ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here