ಪುತ್ತೂರು: ದೆಹಲಿಯ ಕೆಂಪುಕೋಟೆಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ದ.ಕ.ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾರನ್ನು ಆಹ್ವಾನಿಸಲಾಗಿದ್ದು ವಿಶೇಷ ಅತಿಥಿಯಾಗಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಕರ್ನಾಟಕದ 6 ಪಂಚಾಯತ್ ಮಹಿಳಾ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನಫೀಸಾ ಅವರು ಹಿಂದಿನ ಅವಧಿಯಲ್ಲಿ ಎರಡೂವರೆ ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿ ವಾಹನವನ್ನು ಸ್ವತಃ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿ ಗಮನ ಸೆಳೆದಿದ್ದ ಅವರು ಅನೇಕ ಗೌರವಗಳನ್ನು ಸ್ವೀಕರಿಸಿದರು. ಈ ಸೇವೆಯನ್ನು ಗುರುತಿಸಿ ವರ್ಲ್ಡ್ ಯೂತ್ ಸ್ಕಿಲ್ ಡೇ ಅಂಗವಾಗಿ ಬೆಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೌರವಿಸಿದ್ದರು.
ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಗ್ರಾಮದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ನಫೀಸಾ ಅವರಿಗೆ ಇದೀಗ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಸಿಕ್ಕಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಆ.13ರಂದು ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಮಾಡಲಿರುವ ಅವರು ಆ.16ರಂದು ಊರಿಗೆ ವಾಪಸಾಗಲಿದ್ದಾರೆ. ನಫೀಸಾ ಅವರ ಪತಿ ಮಹಮ್ಮದ್ ಹನೀಫ್ ಮತ್ತು ಪುತ್ರಿ ಐಝಾ ಕೂಡಾ ದೆಹಲಿಗೆ ತೆರಳಲಿದ್ದಾರೆ.