ಸರಿಸುಮಾರು 200 ವರುಷಗಳ ಸುಧೀರ್ಘ ಬ್ರಿಟಿಷ್ ದಬ್ಬಾಳಿಕೆಯ ಆಳ್ವಿಕೆಯಿಂದ ಭಾರತಾಂಬೆ ವಿಮುಕ್ತಳಾಗಿ ಇಂದಿಗೆ 77 ವರುಷ. ಆ ಒಂದು ಸ್ವತಂತ್ರ ಕ್ಕಾಗಿ ಅದೆಷ್ಟೋ ಜೀವಗಳು ತಮ್ಮ ಜೀವ, ಜೀವನವನ್ನೇ ಮುಡಿಪಾಗಿಟ್ಟಿದ್ದರು.ಅವರೆಲ್ಲರ ತ್ಯಾಗ, ಬಲಿದಾನದ ಫಲಶ್ರುತಿಯೇ ಆಗಸ್ಟ್ 15 ರಂದು ನಾವೆಲ್ಲ ಸಂಭ್ರಮ, ಹೆಮ್ಮೆಯಿಂದ ಆಚರಿಸುತ್ತಿರುವ ಸ್ವಾತಂತ್ರ್ಯ ದಿನ.
1947 ಆಗಸ್ಟ್ 15 ರ ಮಧ್ಯರಾತ್ರಿ ಆಂಗ್ಲೀಯರ ಧಾಸ್ಯ ಸಂಕೋಲೆಯಿಂದ ಬಂಧ ಮುಕ್ತ ಗೊಂಡ ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಲೇ ಬಂದಿದೆ. ಅದೇರೀತಿ ವಿಜ್ಞಾನ, ತಂತ್ರಜ್ಞಾನ,ಕ್ರೀಡೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತೀಯರು ನಾವೇನು ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತಲೇ ಇದ್ದಾರೆ.. ಆದಾಗ್ಯೂ ಭಾವೈಕ್ಯತೆಯನ್ನು ಸಾರುವ ಸುಸಂಸ್ಕೃತ ನಾಡಿನಲ್ಲಿ ಪ್ರತಿದಿನ ಬೆಳಕಾದಂತೆ ಧರ್ಮ ಧರ್ಮಗಳ ನಡುವಿನ ಹೊಡೆದಾಟ-ಬಡಿದಾಟ,ಕೊಲೆ, ಅತ್ಯಾಚಾರ ಪ್ರಕರಣಗಳದ್ದೇ ಸದ್ದು.ಅದೇಕೋ ಬುದ್ಧಿವಂತಿಕೆ, ಚಾಕಚಕ್ಯತೆ ಯನ್ನು ಹೊಂದಿರುವ ನಾವುಗಳು ಅಂದು ಪರಕೀಯರು ಧರ್ಮ ಧರ್ಮಗಳ ನಡುವೆ ಹೊತ್ತಿಸಿದ ಬೆಂಕಿಯ ಕಿಡಿಯನ್ನು ಆರದಂತೆ ನೋಡಿಕೊಳ್ಳುತ್ತಿದ್ದೇವೋ ಏನೋ ಎನಿಸುತ್ತದೆ. ಅಂದು ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಮಾಂಗಲ್ಯ ವನ್ನೇ ಪಣಕ್ಕಿಟ್ಟು ತಾಯ ಬಿಡುಗಡೆಗಾಗಿ ತ್ಯಾಗಮಯಿಗಳಾಗಿ ಕಣ್ಮರೆಯಾದರು.ಆದರೇ ಇಂದು ಅದೇ ಮಾತೃ ಸ್ವರೂಪಿ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ!
ಹಾಗಾದರೆ ಎತ್ತ ಸಾಗುತ್ತಿದೆ ನಮ್ಮ ಈ ಸಮಾಜ? ಕ್ರೌರ್ಯದಿಂದ ಜಗತ್ತಿಗೆ ಮಾದರಿಯಾಗ ಹೊರಟಿದೆಯೇನೋ ಎಂದೆನಿಸುತ್ತದೆ. ಹಾಗಿದ್ದಲ್ಲಿ ಅಂದಿನ ಆ ಮಹಾನ್ ಚೇತನಗಳ ತ್ಯಾಗಕ್ಕೆ ಬೆಲೆಯೇನು? ಆದ್ದರಿಂದ ಇನ್ನಾದರೂ ಪ್ರಜ್ಞಾವಂತ ನಾಗರಿಕರಾದ ನಾವುಗಳು ಎಚ್ಚೆತ್ತುಕೊಂಡು ಇಂದಿನ ಮಕ್ಕಳೇ ಮುಂದಿನ ಸುಸಂಸ್ಕೃತ ಪ್ರಜೆಗಳು ಎಂಬ ಮಾತನ್ನು ನಿರೂಪಿಸ ಬೇಕು.ಯೋಚನಾ ಶಕ್ತಿ ಹೊಂದಿರುವ ನಾವುಗಳು ‘ಓಟಿಗಾಗಿ ನೋಟು ‘ ಎಂಬ ಮಾತನ್ನು ತಲ್ಲಿಹಾಕಿ ,ಪ್ರಜೆಗಳ ಮತ್ತು ದೇಶದ ಒಳಿತನ್ನು ಬಯಸುವ ಉತ್ತಮ ಸ್ಪರ್ಧಿಯನ್ನು ಆಯ್ಕೆ ಮಾಡುವ ದೃಢ ನಿರ್ಧಾರದಿಂದ ಮತಚಲಾಯಿಸಬೇಕು. ನಾವು ಆಯ್ಕೆ ಮಾಡಿದ ವ್ಯಕ್ತಿ ಜನ ಸೇವಕನಾಗಿರಬೇಕೆ ಹೊರತು ಜನ ನಾಯಕನಲ್ಲ. ಒಬ್ಬ ಪ್ರಬುದ್ಧ ಹಾಗೂ ಸುಶಿಕ್ಷಿತ ಅಭ್ಯರ್ಥಿಯ ಗೆಲುವಿಗೆ ಕಾರಣೀಕರ್ತರಾಗುವುದು ಕೂಡ ಒಂದು ರೀತಿಯಲ್ಲಿ ದೇಶ ಸೇವೆಯೇ ಹೌದು.ಆದ್ದರಿಂದ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಿಸುವಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಇಂದಿನ ನಮ್ಮ ಸಂತೋಷ, ನೆಮ್ಮದಿಗೆ ಕಾರಣರಾದ ಅಂದಿನ ದೇಶಪ್ರೇಮಿ ನಾಯಕರ ಪ್ರಾಣ ತ್ಯಾಗಗಳಿಗೆ ಸಾರ್ಥಕತೆ ದೊರಕಿಸಿಕೊಡೋಣ.ಎಲ್ಲರಿಗೂ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.