ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶಾಲಾ ಸಂಸತ್ತಿನ ಅಧಿವೇಶನ

0

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಮೊದಲ ಅಧಿವೇಶನವು ಆಗಸ್ಟ್ 13ರಂದು ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು. ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವುದರೊಂದಿಗೆ ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವವಾದ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದ್ದರು.

ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದ ಅಧಿವೇಶನದಲ್ಲಿ 10ನೇ ತರಗತಿಯ ಜಿಯಾನ್ ಮರಿಯಾ ಸೀಕ್ವೇರಾ ಸಭಾಧ್ಯಕ್ಷರಾಗಿ ಹಾಗೂ 9ನೇ ತರಗತಿಯ ಸಂಜನ್ ರಾವ್ ಉಪಸಭಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಾಂಸ್ಕೃತಿಕ ಮಂತ್ರಿಯಾಗಿರುವ 9ನೇ ತರಗತಿಯ ಸಾನ್ವಿ ನಾಯಕ್ ತಮ್ಮ ಪ್ರಣಾಳಿಕೆಯನ್ನು ಮಂಡಿಸುತ್ತಾ ಪ್ರತಿದಿನವೂ ಸಮವಸ್ತ್ರದೊಂದಿಗೆ ಬರುವ ವಿದ್ಯಾರ್ಥಿಗಳು ತಿಂಗಳಲ್ಲಿ ಕೊನೆಯ ಶನಿವಾರದಂದು ಬಣ್ಣದ ಬಟ್ಟೆಯನ್ನು ಧರಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು. ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಸಭಾಧ್ಯಕ್ಷರಿಂದ ತಿರಸ್ಕೃತಗೊಂಡಿತು. ವಿರೋಧ ಪಕ್ಷದ ನಾಯಕ 10ನೇ ತರಗತಿಯ ನಿಕ್ಷೇಪ್‌ರಾಜ್ ಜೈನ್ ಆಡಳಿತ ಪಕ್ಷದ ಕುಂದು ಕೊರತೆಗಳನ್ನು ಪ್ರಶ್ನಿಸಿದರು. ಸಂಸತ್ತಿನ ಪ್ರಧಾನಮಂತ್ರಿ 10ನೇ ತರಗತಿಯ ನಿಹಾಲ್ ಹೆಚ್ ಶೆಟ್ಟಿ ಸಮಂಜಸವಾದ ಉತ್ತರಗಳನ್ನು ನೀಡುವುದರೊಂದಿಗೆ ಎಲ್ಲರ ಗಮನ ಸೆಳೆದರು. ನಂತರ ಮಾತನಾಡಿದ ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಸಂಸತ್ತಿನ ಆರೋಗ್ಯಕರವಾದ ಚರ್ಚೆಯನ್ನು ಶ್ಲಾಘಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.


ಸಂಸ್ಥೆಯ ಸಮಾಜ ವಿಜ್ಞಾನ ಶಿಕ್ಷಕಿ ಶ್ವೇತಾ ಬಂಗೇರ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಪರಿಚಯಿಸಿದರು. ಸಹ ಶಿಕ್ಷಕಿ ಶಶಿಕಲಾ ಇವರ ಮಾರ್ಗದರ್ಶನದೊಂದಿಗೆ ಅಧಿವೇಶನವು ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here