ಪುತ್ತೂರು: ಕೋಲ್ಕತ್ತಾದ ಆರ್ ಜಿ ಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಹಾಗೂ ಈ ಘಟನೆಯ ಬಗೆಗಿನ ಸಾಕ್ಷಿ ನಾಶದ ದುರುದ್ದೇಶ ಇಟ್ಟುಕೊಂಡು ಆಸ್ಪತ್ರೆಯ ಮೇಲೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ಖಂಡಿಸಿ ಆ.17 ಬೆಳಗ್ಗೆ 6:00 ಗಂಟೆಯಿಂದ 18ರ ಬೆಳಗ್ಗೆ 6:00ರ ವರೆಗೆ ರಾಷ್ಟ್ರವ್ಯಾಪ್ತಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ರಾಷ್ಟ್ರೀಯ ಸಂಘ ಘೋಷಿಸಿದೆ.
ಈ ಹಿನ್ನಲೆಯಲ್ಲಿ ಪುತ್ತೂರಿನಲ್ಲಿಯೂ ವೈದ್ಯಕೀಯ ಸೇವೆಗಳು ಭಾಗಶಃ ಬಂದ್ ಆಗಲಿದೆ ಎಂದು ಐ ಎಂ ಎ ಪುತ್ತೂರು ಘಟಕದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪುತ್ತೂರು ತಾಲೂಕಿನ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳಲ್ಲಿ ತುರ್ತು ಸೇವೆ ಹೊರತು ಪಡಿಸಿ, ಗಂಭೀರವಲ್ಲದ ಸಾಮಾನ್ಯ ವೈದ್ಯಕೀಯ ಸೇವೆಗಳು ಲಭ್ಯವಿರುವುದಿಲ್ಲ. ಸಾರ್ವಜನಿಕರು ವೈದ್ಯರ ಹೋರಾಟಕ್ಕೆ ಬೆಂಬಲ ನೀಡಬೇಕು. ಅತ್ಯಾಚಾರಗೊಂಡು ಅಮಾನುಷವಾಗಿ ಹತ್ಯೆಯಾದ ಕರ್ತವ್ಯ ನಿರತ ಮಹಿಳಾ ವೈದ್ಯೆಯ ಆತ್ಮಕ್ಕೆ ನ್ಯಾಯ ದೊರಕಿಸಿ ಕೊಡಲು ಸಹಕರಿಸಬೇಕು ಎಂದು ಐ ಎಂ ಎ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮಾ ಕಾನಾವು, ಗೌರವ ಕಾರ್ಯದರ್ಶಿ ಡಾ.ಗಣೇಶಪ್ರಸಾದ್ ಮುದ್ರಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.