ಉಪ್ಪಿನಂಗಡಿ: ಇಲ್ಲಿನ ಎಸ್‌ಬಿಐ ಬ್ಯಾಂಕ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸ್ಕೂಟರನ್ನು ಚಲಾಯಿಸಿಕೊಂಡು ಬಂದ ಆರೋಪಿಯು ಡಾಮಾರು ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋದ ಮಹಿಳೆಗೆ ಡಿಕ್ಕಿ ಹೊಡೆಸಿ ಪರಾರಿಯಾದ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತುಳಸಿ ಎಂಬವರು ದೂರು ನೀಡಿದ್ದು, ಆ.16ರಂದು ನಾನು ಉಪ್ಪಿನಂಗಡಿಯ ಎಸ್‌ಬಿಐ ಬ್ಯಾಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ. 70E2724 ನೋಂದಣಿ ಸಂಖ್ಯೆಯ ಸ್ಕೂಟರನ್ನು ಅದರ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದಾಗಿ ನಾನು ರಸ್ತೆಗೆ ಬಿದ್ದು ಸಣ್ಣ ಪ್ರಮಾಣದ ಗಾಯಗಳಾಗಿವೆ. ಆದರೆ ಅಪಘಾತದ ಬಳಿಕ ಆರೋಪಿ ಸವಾರ ನನ್ನನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ, ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸವಾರನ ಮೇಲೆ ಹಲ್ಲೆ: ಪೊಲೀಸ್ ದೂರು
ಇದೇ ಪ್ರಕರಣಕ್ಕೆ ಸಂಬಂಧಿಸಿ ತಣ್ಣೀರುಪಂತ ನಿವಾಸಿ ಮಹಮ್ಮದ್ ಶಮ್ಮಾಝ್ (17) ಎಂಬಾತ ಪೊಲೀಸರಿಗೆ ದೂರು ನೀಡಿದ್ದು, ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ತಾನು ಭಯಪಟ್ಟು ವಾಹನವನ್ನು ನಿಲ್ಲಿಸದೆ ಹೋಗಿದ್ದು, ಈ ಬಗ್ಗೆ ಸಾಯಂಕಾಲ ನಾಲ್ಕು ಮಂದಿಯ ತಂಡ ತನ್ನನ್ನು ದಾರಿ ಮಧ್ಯೆ ತಡೆದು ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.