ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್’ನ ದಿಟ್ಟ ಹೆಜ್ಜೆ ಭವಿಷ್ಯದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ: ಅಹ್ಮದ್ ಹಾಜಿ ಆಕರ್ಷಣ್
ಪುತ್ತೂರು: ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ಸಂಸ್ಥೆಯು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದಿಟ್ಟ ಹೆಜ್ಜೆಯೊಂದನ್ನಿಟ್ಟಿದ್ದು ಇದು ಕಾಲದ ಅನಿವಾರ್ಯತೆಯಾಗಿದೆ. ಮಾತ್ರವಲ್ಲದೆ ಇದು ಕ್ರಾಂತಿಕಾರಿ ಹೆಜ್ಜೆಯಾಗಿ ಭವಿಷ್ಯದಲ್ಲಿ ರೂಪುಗೊಳ್ಳಲಿದೆ ಎಂದು ಮೌಂಟನ್ ವ್ಯೂ ಎಜ್ಯುಕೇಶನಲ್ ಇನ್ಸ್ಟಿಟ್ಯೂಷನ್ಸ್ ಪುತ್ತೂರು ಇದರ ಮುಖ್ಯಸ್ಥ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಹೇಳಿದರು.
ಆ.17ರಂದು ಪುತ್ತೂರು ಮಹಾವೀರ ಮಾಲ್’ನ ಸಭಾಂಗಣದಲ್ಲಿ ನಡೆದ ಎಜ್ಯುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ಸಂಸ್ಥೆಯ ‘ ಸ್ಟೂಡೆಂಟ್ಸ್ ರಿಜಿಸ್ಟ್ರೇಷನ್ ಆ್ಯಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿಂದಿನ ಕಾಲದ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆ ಕಲಿಯಲು ಅವಕಾಶಗಳು ಕಡಿಮೆ ಇತ್ತು, ಆದರೆ ಇಂದು ತಂತ್ರಜ್ಞಾನ ಮುಂದುವರಿದ ಹಾಗೆ ಅವಕಾಶವೂ ವಿಫುಲವಾಗಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಎಜ್ಯುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ಹೊರತಂದ ವಿದ್ಯಾರ್ಥಿ ನೋಂದಣಿ ಆ್ಯಪ್, ಸರಳ ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ಹೊಂದಿರುವುದರಿಂದ ಇದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಲಿದೆ ಎಂದು ಅವರು ಹೇಳಿದರು.
ಉಮ್ಮತ್ ವನ್ ಕೊಡಗು ಇದರ ಅಧ್ಯಕ್ಷ ಬಶೀರ್ ಲೀಕೂರ್ಗ್ ಮಾತನಾಡಿ ಶೈಕ್ಷಣಿಕ ವಿಚಾರವಾಗಿ ನಾವು ಸಂಘಟಿತರಾಗಿ ಪ್ರಾಮಾಣಿಕವಾಗಿ ಕಾರ್ಯಾಚರಣೆ ನಡೆಸಿದರೆ ನಮಗೆ ಎಲ್ಲರ ಸಹಕಾರ ಸಿಗುತ್ತದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಇಂದು ನಾವು ಕೊಟ್ಟರೆ ಭವಿಷ್ಯದಲ್ಲಿ ನಮ್ಮ ಸಮುದಾಯ ಸಶಕ್ತವಾಗಿ ಅಭಿವೃದ್ಧಿ ಕಾಣುತ್ತದೆ ಎಂದು ಹೇಳಿದರು.
ಖ್ಯಾತ ಮೋಟಿವೇಷನಲ್ ಸ್ಪೀಕರ್ ರಫೀಕ್ ಮಾಸ್ಟರ್ ಮಾತನಾಡಿ, ನಾವು ಇಂದು ಶಿಕ್ಷಣಕ್ಕೆ ಕೊಡುವ ಮಹತ್ವ ನಾಳೆ ನಮ್ಮ ಸಮುದಾಯದ ಚಿತ್ರಣವನ್ನೇ ಬದಲಾಯಿಸಬಲ್ಲದು. ನಾವು ಕಿಟ್ ಕೊಡುವ ಬದಲು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಟ್ಟರೆ ಆ ಮಕ್ಕಳು ನಾಳೆ ಸಮಾಜದ ಆಸ್ತಿಯಾಗಿ ಹೊರಹೊಮ್ಮುತ್ತಾರೆ. ಕಿಟ್ ಕೊಡಬಾರದು ಎನ್ನುವುದು ನನ್ನ ವಾದವಲ್ಲ, ಕಿಟ್ ಕೊಡುವ ಸಂದರ್ಭಗಳಿದ್ದರೆ ಅದನ್ನು ಆಯಾ ಜಮಾಆತ್ ವ್ಯಾಪ್ತಿಯಲ್ಲೇ ವ್ಯವಸ್ಥೆ ಮಾಡಿಕೊಳ್ಳಬೇಕು. ಅದು ಸಮುದಾಯದ ಸಮಸ್ಯೆಯಾಗಿ ಬಿಂಬಿತವಾಗಬಾರದು ಎಂದು ಅವರು ಕರೆ ನೀಡಿದರು. ಮಕ್ಕಳಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಪೋಷಕರು ನಿರ್ಲಕ್ಷ್ಯ ವಹಿಸಬಾರದು, ಎಷ್ಟೇ ಕಷ್ಟ ಆದರೂ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು, ಅರ್ಹ ಮಕ್ಕಳಿಗೆ ನೆರವಾಗಲೆಂದೇ ಅಮ್ಜದ್ ಖಾನ್ ಪೋಳ್ಯ ನೇತೃತ್ವದ ತಂಡ ಎಜ್ಯುಕೇಶನಲ್ ಎಕ್ಸಲೆನ್ಸ್ ಫೌಂಡೇಷನ್ ಸಂಸ್ಥೆ ಮೂಲಕ ಕಾರ್ಯಚರಿಸಲಿದೆ ಎಂದು ಅವರು ಹೇಳಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಎಜ್ಯುಕೇಶನಲ್ ಎಕ್ಸಲೆನ್ಸ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಅಮ್ಜದ್ ಖಾನ್, ನಾವು ಲಾಂಚ್ ಮಾಡಿರುವ ವಿದ್ಯಾರ್ಥಿ ನೋಂದಣಿ ಆ್ಯಪ್ ವಿದ್ಯಾರ್ಥಿಗಳ ನೋಂದಣಿ ಮತ್ತು ಕೌನ್ಸೆಲಿಂಗ್ ವ್ಯವಸ್ಥೆಯದ್ದಾಗಿದ್ದು, ಅರ್ಹ ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಸಹಕಾರ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಸಂಪೂರ್ಣ ಪಾರದರ್ಶಕವಾಗಿರಲಿದೆ ಎಂದು ಹೇಳಿದರು.
ವಿದ್ಯಾರ್ಥಿ ಅರ್ಫಾಝ್ ವಿದ್ಯಾರ್ಥಿ ನೋಂದಣಿ ಆ್ಯಪ್ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಪ್ರಸ್ತುತಪಡಿಸಿ ಆ್ಯಪ್ ನ ವಿಶೇಷತೆ ಮತ್ತು ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಏನಿದು ಎಜ್ಯುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್..?
ಎಜ್ಯುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಲಾಂಚ್ ಮಾಡಿದ ಆ್ಯಪ್ ಹೊಸ ವಿದ್ಯಾರ್ಥಿ ನೋಂದಣಿ ಮತ್ತು ಕೌನ್ಸೆಲಿಂಗ್ ವ್ಯವಸ್ಥೆಯದ್ದಾಗಿದ್ದು, ಇದು ಸಾಫ್ಟ್‌ವೇರ್ ಆಧಾರಿತ ಪ್ಲಾಟ್‌ಫಾರ್ಮ್ ಆಗಿರಲಿದೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ನೋಂದಾಯಿಸಲು ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಆರ್ಥಿಕ ಸಹಕಾರವನ್ನು ಪಡೆಯಲು ಇದು ಅವಕಾಶ ನೀಡುತ್ತದೆ. ಮಾತ್ರವಲ್ಲದೆ ನೂರು ಶೇಕಡ ಪಾರದರ್ಶಕತೆ ಇದರ ಪ್ರಮುಖ ವಿಶೇಷತೆಯಾಗಿದೆ.
ಅಮ್ಜದ್ ಖಾನ್ ಪೋಳ್ಯ ಅವರು ಎಜ್ಯುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ ಅಧ್ಯಕ್ಷರಾಗಿದ್ದು, ಅಬ್ದುಲ್ಲ ಕುಂಬ್ರ, ಶಂಸುದ್ದೀನ್ ಬೈರಿಕಟ್ಟೆ ಹಾಗೂ ಸಮೀರ್ ಕಲ್ಲಾರೆ ಆಡಳಿತ ಸಮಿತಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಲ್ಮರ ದಾರುಲ್ ಹಸನಿಯ ಹಿಫ್ಲ್ ಕಾಲೇಜಿನ ವಿದ್ಯಾರ್ಥಿಗಳಾದ ಸೈಫುದ್ದೀನ್ ಪರ್ಪುಂಜ ಹಾಗೂ ಶಫಿಯುಲ್ಲಾ ಕಳಾರ ಖಿರಾಅತ್ ಪಠಿಸಿದರು. ನಿಹಾನ್ ಮುಹಮ್ಮದ್, ಮುಹಮ್ಮದ್ ಅನಸ್, ಅರ್ಫಾಝ್ ಹಾಗೂ ಫಹದ್ ಅತಿಥಿಗಳನ್ನು ಗೌರವಿಸಿದರು.
ಸಭೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು, ಪೋಷಕರು, ಮಸೀದಿ ಕಮಿಟಿ ಅಧ್ಯಕ್ಷರುಗಳು, ಸದಸ್ಯರು, ರಾಜಕೀಯ ಮುಖಂಡರು, ವೈದ್ಯರು, ಇಂಜಿನಿಯರ್ ಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಧಾರ್ಮಿಕ ವಿದ್ವಾಂಸರು, ಎನ್‌ಆರ್‌ಐ ಉದ್ಯಮಿಗಳು, ಸಿ ಎ, ವಕೀಲರು, ವಿದ್ಯಾರ್ಥಿಗಳು, ಮಹಿಳೆಯರು ಭಾಗವಹಿಸಿದ್ದರು. ಪತ್ರಕರ್ತ ಯೂಸುಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.