ವಿಟ್ಲ : ಕಳೆದ 25 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿರುವ ತನ್ನೂರಿನ ಶಾಪಗ್ರಸ್ಥ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಯಕ್ಷಗಾನ ಹಿಮ್ಮೇಳ ಕಲಾವಿದರೊಬ್ಬರು ಮಾನವಹಕ್ಕು ಆಯೋಗದ ಮೊರೆ ಹೋದ ಘಟನೆ ತಾಲೂಕಿನ ಗಡಿಗ್ರಾಮವಾದ ಕರೋಪಾಡಿಯಲ್ಲಿ ನಡೆದಿದೆ.
ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರೀಯವಾಗಿರುವ ಚೈತನ್ಯ ಕೃಷ್ಣ ಪದ್ಯಾಣ ದೂರು ನೀಡಿದ್ದು, ಹಲವು ವರ್ಷಗಳಿಂದ ಶಾಸಕರ ಸಹಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬೇಸತ್ತಿರುವ ಇವರು, ಇದು ತನ್ನ ಕೊನೇ ಪ್ರಯತ್ನ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಸುಮಾರು 1.5 ಕಿಮೀ ದೂರದಲ್ಲಿರುವ ಮುಗುಳಿ – ಪದ್ಯಾಣ (ರೆಂಜೆಡಿ) ರಸ್ತೆಯು ಈ ಹಿಂದೆ 1999ರಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡಿದೆ. ಆದರೆ ಬಳಿಕದ ವರ್ಷಗಳಲ್ಲಿ ಹಂತ ಹಂತವಾಗಿ ಇದ್ದ ಡಾಮರು ಕಿತ್ತುಹೋಯಿತೇ, ವಿನಃ ಅದನ್ನು ಸರಿಪಡಿಸುವ ಕೆಲಸ ನಡೆಯಲೇ ಇಲ್ಲ ಹೀಗಾಗಿ ಪ್ರಸ್ತುತ ಈ ರಸ್ತೆಯ ಸ್ಥಿತಿ ತೀವ್ರ ಶೋಚನೀಯವಾಗಿದೆ.
ರಸ್ತೆಯ ವಾಸ್ತವ ಸ್ಥಿತಿಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಒಮ್ಮೆ ನಿರ್ಮಾಣಗೊಂಡ ಬಳಿಕ ಯಾವುದೇ ನಿರ್ವಹಣೆಯನ್ನೂ ಕಾಣದ ಹಿನ್ನೆಲೆಯಲ್ಲಿ ಈ ರಸ್ತೆಯ ಪ್ರಯಾಣ ಅಪಾಯಕಾರಿಯಾಗಿದೆ. 25 ವರ್ಷಗಳ ಹಿಂದೆ ರಸ್ತೆ ನಿರ್ಮಿಸಿದ್ದರಿಂದ ಚರಂಡಿಗಳನ್ನು ನಿರ್ಮಿಸಲಾಗಿಲ್ಲ. ಇದರಿಂದ ರಸ್ತೆ ದಿನದಿಂದ ದಿನಕ್ಕೆ ಹದಗೆಟ್ಟಿದೆ. ಇದರಿಂದ ಈ ರಸ್ತೆಯ ಮುಖಾಂತರ ಸಂಪರ್ಕ ಕಲ್ಪಿಸುವ ಸುಮಾರು 25ಕ್ಕೂ ಅಧಿಕ ಮನೆಗಳ ನಿವಾಸಿಗಳು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾಮಕ್ಕಳು ಸಂಚರಿಸುತ್ತಿದ್ದು, ದ್ವಿಚಕ್ರವಾಹನಗಳು ಇಲ್ಲಿ ಅವಘಡಕ್ಕೆ ಒಳಗಾದ ಘಟನೆಯೂ ನಡೆದಿದೆ. ಈ ರಸ್ತೆಯಿಂದಾಗಿ ದುರದೃಷ್ಟವಶಾತ್ ಸುಮಾರು 10-15 ಮನೆಗಳ ಜನರು ತಮ್ಮ ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೇ ತಮ್ಮ ಜೀವವನ್ನು ಪಣಕ್ಕಿಟ್ಟು ಎಲ್ಲಾ ಕೆಲಸಗಳಿಗೆ ಈ ರಸ್ತೆಯ ಮೂಲಕ ಪ್ರತಿದಿನ ಸಂಚರಿಸಬೇಕಾಗಿದೆ. ಈಗಾಗಲೇ. ಹಲವು ದ್ವಿಚಕ್ರ ವಾಹನಗಳು ಮುಗ್ಗರಿಸಿ ಕೆಳಗೆ ಬಿದ್ದಿದ್ದು, ಸವಾರರು ಮತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಲ್ಲಿನ ಮನೆಗಳಿಗೆ ಮೂಲಭೂತ ಅಗತ್ಯಗಳನ್ನು ತಂದುಕೊಡುವುದಕ್ಕೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು.
ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ:
ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುತ್ತಿರುವುದು ಸಾಮಾನ್ಯ ವ್ಯಕ್ತಿಗಳ ಕೊನೆಯ ಪ್ರಯತ್ನವಾಗಿದ್ದು, ಅದರಂತೆ ಪತ್ರ ಬರೆದಿದ್ದೇನೆ, ರಸ್ತೆಯ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿಪಡೆದುಕೊಂಡು ರಸ್ತೆ ಸುರಕ್ಷತೆಯ ಹಕ್ಕು ನಮ್ಮ ಗ್ರಾಮದ ನಿವಾಸಿಗಳಿಗೆ ದೊರಕುವಂತೆ ಮಾಡುವಿರಿ ಎಂಬ ನಂಬಿಕೆಯಲ್ಲಿ ನಾವಿದ್ದೇವೆ ಎಂದವರು ಪತ್ರದಲ್ಲಿ ಭಾವನಾತ್ಮಕವಾಗಿ ಉಲ್ಲೇಖಿಸಿದ್ದಾರೆ.
ಆಯೋಗದಿಂದ ಸ್ಪಂದನೆ :
ಚೈತನ್ಯ ಕೃಷ್ಣ ಪದ್ಯಾಣರವರು, ಜೂ.11ರಂದು ಪತ್ರ ಬರೆದಿದ್ದು, ಇದಕ್ಕೆ ಆಯೋಗದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಶೋಚನೀಯ ಸ್ಥಿತಿಯಲ್ಲಿರುವ ಮುಗುಳಿ-ಪದ್ಯಾಣ ರಸ್ತೆಯ ಬಗ್ಗೆ ಜೂ.21 ಆಯೋಗದ ಸಭೆಯಲ್ಲಿ ಮಂಡಿಸಲಾಗಿದೆ, ದೂರು ಅರ್ಜಿಯ ಕುರಿತು ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಂಡು ಸೆ.10 ರ ಒಳಗೆ ವರದಿ ಒಪ್ಪಿಸಲು ಆದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪತ್ರದಲ್ಲಿ ಹೇಳಲಾಗಿದೆ.