ಪುತ್ತೂರು: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಪುತ್ತೂರು ವಲಯದ ಪಡಿಲು ಕಾರ್ಯಕ್ಷೇತ್ರದ ಮಾತೃಶ್ರೀ ಜ್ಞಾನ ವಿಕಾಸದ ವಾರ್ಷಿಕೋತ್ಸವ ಸಮಾರಂಭ ಪಡೀಲು ಎಂಡಿಎಸ್ ಹಾಲ್ನಲ್ಲಿ ಆಚರಿಸಲಾಯಿತು. ಮಾಜಿ ಕೌನ್ಸಿಲರ್ ವಾಣಿಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿ ಸಾಮೆತ್ತಡ್ಕ ಶಾಲೆಯ ಮುಖ್ಯಗುರು ಮರಿಯಆಶ್ರಫ್ ಮಾತನಾಡಿ ಹೆಣ್ಣೊಂದು ಕಲಿತರೆ ಮನೆಯೊಂದು ಬೆಳಗಿದಂತೆ ನಾವು ಮಾಡಿದ ಕೆಲಸದಲ್ಲಿ ಶ್ರದ್ಧೆಯನ್ನು ಇಟ್ಟು ಮಾಡಿದಾಗ ಯಶಸ್ಸು ಖಂಡಿತವಾಗಿರುತ್ತದೆ. ನಾವು ಅಚ್ಚುಕಟ್ಟಾಗಿ ಎಲ್ಲಾ ಕೆಲಸಗಳನ್ನು ಮಾಡಬೇಕು, ಮನೆ ಸಂಸಾರ ಅಥವಾ ಹೊರಗಿನ ಕೆಲಸಗಳು ಎಲ್ಲವನ್ನು ನಿಭಾಯಿಸುವಲ್ಲಿ ಮಹಿಳೆಯರು ಅಭಿವೃದ್ಧಿ ಹೊಂದಿದ್ದಾರೆ. ಹೆಣ್ಣು ಇಲ್ಲದಿದ್ದರೆ ಪ್ರಪಂಚವೇ ಇರುವುದಿಲ್ಲ ಮಗುವಾಗಿ, ಅಕ್ಕತಂಗಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಅತ್ತೆಯಾಗಿ. ಅಜ್ಜಿಯಾಗಿ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಿದ್ದಾಳೆ. ಇಂತಹ ಸಂಘ ಸಂಸ್ಥೆಗಳ ಮೂಲಕ ನಿಮ್ಮ ಬಲವನ್ನು ವೃದ್ಧಿಪಡಿಸಲು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಎಂದು ಶುಭಹಾರೈಸಿದರು.
ಪುತ್ತೂರು ತಾಲೂಕಿನ ಯೋಜನಾಧಿಕಾರಿ ಶಶಿಧರ್ ಎಂ. ಮಾತನಾಡಿ ಹೆಣ್ಣು ಸಮಾಜದ ಕಣ್ಣು ಇಂದಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ, ಕ್ರೀಡೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಮಾತೃಶ್ರೀ ಹೇಮಾವತಿ ಹೆಗಡೆ ಅಮ್ಮನವರ ಕನಸಿನ ಕೂಸಾದ “ಜ್ಞಾನವಿಕಾಸ” ಕೇಂದ್ರವು ಮಹಿಳೆಯರಿಂದ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಸುಜ್ಞಾನ ನಿಧಿ, ಮಧ್ಯವರ್ಜನ ಶಿಬಿರ, ಸ್ವಉದ್ಯೋಗ ತರಬೇತಿಗಳು, ತುರ್ತು ಪರಿಸ್ಥಿತಿಗಳಲ್ಲಿ ಧನಸಹಾಯವನ್ನು ನೀಡಿ ಎಲ್ಲರನ್ನು ಪ್ರೋತ್ಸಾಹಿಸುತ್ತಿದೆ. ಮುಂದೆಯೂ ಜ್ಞಾನ ವಿಕಾಸ ಕೇಂದ್ರದ ಮೂಲಕ ಒಳ್ಳೆಯ ಕಾರ್ಯಕ್ರಮಗಳಾಗಿ ಜನರಿಗೆ ಹೆಚ್ಚು ಉಪಯುಕ್ತವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಿ ಮಾತನಾಡಿ ನಾನು ಸಂಘದಿಂದ ಧೈರ್ಯವಾಗಿ ಮಾತನಾಡಲು ಕಲಿತೆ, ನಮ್ಮ ಜ್ಞಾನವಿಕಾಸ ಕೇಂದ್ರದಲ್ಲಿ ಶಿಕ್ಷಕರು, ವೈದ್ಯರು, ಲಾಯರ್, ಪೋಲಿಸ್, ಸಾಮಾಜಿಕ ಕಾರ್ಯಕರ್ತರು, ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ನೀಡುವ ಮಾರ್ಗದರ್ಶನದಿಂದಾಗಿ ಎಲ್ಲರೂ ಹಲವು ಉಪಯೋಗಗಳನ್ನು ಪಡೆದುಕೊಂಡಿದ್ದೇವೆ ಜ್ಞಾನವಿಕಾಸ ಕೇಂದ್ರದ ಸದಸ್ಯರಾಗಿ ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಪುತ್ತೂರು ವಲಯ ಮೇಲ್ವಿಚಾರಕಿ ಉಶಾಲತ ರೈ, ಜ್ಞಾನವಿಕಾಸದ ತಾಲೂಕು ಸಮನ್ವಯ ಅಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಶ್ರಾವಣ ಸ್ವಾಗತಿಸಿದರು, ಜ್ಞಾನವಿಕಾಸದ ಸದಸ್ಯೆ ಭವ್ಯ ವಂದಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಮನೆಯವರು ಮಕ್ಕಳು ಮತ್ತು ಸ್ಥಳೀಯರು ಭಾಗವಹಿಸಿದ್ದರು.