ಉಪ್ಪಿನಂಗಡಿ : ಪೌರಾಣಿಕ ಹಿನ್ನೆಲೆಯುಳ್ಳ ರಾಖಿ ಧಾರಣೆಯಲ್ಲಿ ಸಹೋದರತ್ವದ ಭಾಂಧವ್ಯ ಬೆಸೆಯುವ ಸಂದೇಶ ಅಡಕವಾಗಿದೆ. ದೇಶದ ಜನತೆ ಪರಸ್ಪರ ಸಹೋದರತ್ವದ ನೆಲೆಗಟ್ಟಿನಲ್ಲಿ ಸಂಘಟನೆಗೊಳ್ಳಲು ರಕ್ಷಬಂಧನವು ಸಹಕಾರಿಯಾಗಲಿ ಎಂದು ಸಾಮಾಜಿಕ ಚಿಂತಕ , ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಪಿ ಎನ್ ನೆಕ್ಕರಾಜೆ ಕರೆ ನೀಡಿದರು.
ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಮಾಧವ ಶಿಶು ಮಂದಿರದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರ ಆಡಳಿತ ಮಂಡಳಿಯ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ ಮಾತನಾಡಿ , ಪ್ರತಿಯೊಂದು ಭಾರತೀಯ ಹಬ್ಬಗಳಿಗೆ ಅದರದ್ದೆ ಆದ ವಿಶೇಷತೆಗಳಿದೆ. ಹಬ್ಬಗಳ ಮಹತ್ವವನ್ನು ಅರಿತು ಬಾಳಿದಾಗ ಸಮಾಜೋದ್ಧಾರವಾಗುವುದೆಂದರು.
ಅತಿಥಿಯಾಗಿ ಭಾಗವಹಿಸಿದ ಪೂರ್ಣಚಂದ್ರ ಅಂಬೆಲ ಮಾತನಾಡಿ ದೇಶ ಮತ್ತು ಜಗತ್ತು ಕುತಂತ್ರಗಳ ಪಾಶಕ್ಕೆ ಸಿಲುಕಿದೆ. ದೇಶದ ಉನ್ನತಿಯನ್ನು ಸಹಿಸದ ಶಕ್ತಿಗಳ ಯಾವುದೇ ತೆರನಾದ ಆಕ್ರಮಣವನ್ನು ಎದುರಿಸಲು ಎಲ್ಲರೂ ಸಂಘಟಿತರಾಗಿ ಸನ್ನದ್ದರಾಗಬೇಕಾಗಿದೆ ಎಂದರು.
ಶಿಶು ಮಂದಿರದ ಮಾತಾಜಿಗಳಾದ ಚೈತ್ರ, ಕಾಂತಿಮಣಿ, ಚಂದ್ರಾವತಿ ರವರು ವಿವಿಧ ಕಾರ್ಯಕ್ರಮವನ್ನು ನಿರ್ವಹಿಸಿದರು.