ವಿಶ್ವಾಸಾರ್ಹತೆ ಉಳಿಸಿಕೊಂಡ ಪತ್ರಿಕೆ ಸುದ್ದಿ ಮಾಜಿ ಸಂಸದ ಪ್ರತಾಪ್ ಸಿಂಹ ಶ್ಲಾಘನೆ

0

ಪುತ್ತೂರು: ಮೈಸೂರಿನಲ್ಲಿ ಮೈಸೂರು ಮಿತ್ರ ಪತ್ರಿಕೆಯಂತೆ ಇಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಇದೆ. ಮೊದಲು ಕಪ್ಪು ಬಿಳುಪಿನಲ್ಲಿ ಬರುತ್ತಿದ್ದ ಪತ್ರಿಕೆ ಈಗ ಕಲರ್ ನಲ್ಲಿ ಹೆಚ್ಚು ಪುಟಗಳನ್ನು ಹೊಂದಿ ಪ್ರಕಟವಾಗುತ್ತಿದ್ದು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದು ಮೈಸೂರು ಕ್ಷೇತ್ರದ ಮಾಜಿ ಸಂಸದ ಹಾಗೂ ಪತ್ರಕರ್ತ ಪ್ರತಾಪ ಸಿಂಹರವರು ಹೇಳಿದ್ದಾರೆ.


ಅವರು ಆ. 18 ರಂದು ಬೆಳ್ತಂಗಡಿಯಲ್ಲಿ ನಡೆದ ಕೆಸರ್ ಕಂಡೊಡು ಗೌಡ್ರ ಗಮ್ಮತ್‌ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂದರ್ಭ ಸುದ್ದಿಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದರು. “ಸುದ್ದಿ ಬಿಡುಗಡೆ ಪತ್ರಿಕೆಯನ್ನು ಓದಿದ್ದೀರಲ್ಲ… ನಿಮ್ಮ ಅಭಿಪ್ರಾಯವೇನು” ಎಂದು ಸುದ್ದಿ ಚಾನೆಲ್ ವರದಿಗಾರರು ಕೇಳಿದಾಗ, “ನಾನು ಹಿಂದೆ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸುದ್ದಿ ಪತ್ರಿಕೆಯನ್ನು ಓದುತ್ತಿದ್ದೆ. ಆಗ ಅದು ಕಪ್ಪು ಬಿಳುಪು ಪತ್ರಿಕೆಯಾಗಿತ್ತು. ಈಗ ಕಲರಲ್ಲಿ ಮುದ್ರಣಗೊಳ್ಳುತ್ತಿದೆ. ಪುಟಗಳ ಸಂಖ್ಯೆಯೂ ಹೆಚ್ಚಾಗಿದೆ. ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳು ಹೇಗಿರುತ್ತವೆಯೋ ಹಾಗೇ ಇದೆ. ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ನೋಡಿದರೆ ನಮ್ಮ ಮೈಸೂರಿನ ಮೈಸೂರು ಮಿತ್ರ ಪತ್ರಿಕೆ ದೇಶದಲ್ಲೇ ಅತೀ ಹೆಚ್ಚು ಪ್ರಸಾರ ಇರುವಂಥದ್ದು. ಅದೇ ರೀತಿ ತಾಲೂಕಿನ ಪತ್ರಿಕೆಗಳನ್ನು ನೋಡಿದರೆ ಸುದ್ದಿ ಬಿಡುಗಡೆ ಪತ್ರಿಕೆ ಅತೀ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿದೆ. ಇಲ್ಲಿ ಜನರು ಬೇರೆ ಯಾವುದೇ ಪತ್ರಿಕೆ ತೆಗೆದುಕೊಂಡರೂ ಸುದ್ದಿ ಪತ್ರಿಕೆಯನ್ನಂತೂ ತೆಗೆದುಕೊಳ್ಳುತ್ತಾರೆ. ಪ್ರತೀ ಮನೆ ಮನೆಗೆ ಇದು ಹೋಗುತ್ತದೆ. ಅಂತಹ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡ ಪತ್ರಿಕೆ ಸುದ್ದಿ ಬಿಡುಗಡೆ ಎಂದರು.


ಪ್ರತಾಪ ಸಿಂಹರವರು ‘ಕೆಸರ್ ಕಂಡೊಡು ಗೌಡ್ರ ಗಮ್ಮತ್’ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಹರೀಶ್ ಪೂಂಜರವರು ಹೆದ್ದಾರಿಯ ಕಾಮಗಾರಿಯ ಲಂಚದ ಆರೋಪದ ಬಗ್ಗೆ ಪ್ರಮಾಣ ಮಾಡಿದ ವಿಚಾರ ಪ್ರಸ್ತಾಪ ಮಾಡಿ, ಸುದ್ದಿ ಪತ್ರಿಕೆಯಲ್ಲಿ ನೋಡಿದೆ. ಈಗ ಮೋದಿ ಸರಕಾರದ ಸಂದರ್ಭ ಹೆದ್ದಾರಿ ಕಾಮಗಾರಿಯಲ್ಲಿ ಲಂಚ ಪಡೆಯಲು ಆಗುವುದಿಲ್ಲ. ಕೇವಲ ೫ ಪರ್ಸೆಂಟ್ ಮಾತ್ರ ಕಂಟ್ರಾಕ್ಟರ್‌ಗಳಿಗೆ ಸಿಗುತ್ತದೆ. ಆದ್ದರಿಂದ ಆ ವಿಚಾರವಾಗಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಒಟ್ಟಾಗಿ ಅಭಿವೃದ್ಧಿ ಕಾರ್ಯ ಮಾಡುವುದು ಒಳ್ಳೆಯದು ಎಂದು ಹೇಳಿದರು. ತಾನು ವೇದಿಕೆ ಏರುವಾಗ ಕೊಂಡೊಯ್ದಿದ್ದ ಬೆಳ್ತಂಗಡಿ ಸುದ್ದಿ ಪತ್ರಿಕೆಯನ್ನು ಪ್ರೇಕ್ಷಕರಿಗೆ ತೋರಿಸಿ ‘ನಾನು ಉಜಿರೆ ಕಾಲೇಜಿಗೆ ಹೋಗುತ್ತಿದ್ದಾಗಲೇ ಸುದ್ದಿ ಪತ್ರಿಕೆಯನ್ನು ಓದುತ್ತಿದ್ದೆ. ಇಲ್ಲಿ ಇದು ಬಹಳ ಜನಪ್ರಿಯ ಪತ್ರಿಕೆ. ಕಾಲೇಜ್ ದಿನದಲ್ಲಿ ಮೊದಲು ಓದುತ್ತಿದ್ದದ್ದು ಸುದ್ದಿ ಪತ್ರಿಕೆ. ಅದಾದ ನಂತರ ಉದಯವಾಣಿ ಮತ್ತು ಹೊಸದಿಂಗತ ಪತ್ರಿಕೆಗಳು ಆ ಕಾಲದಲ್ಲಿ ಜನಪ್ರಿಯವಾಗಿದ್ದವು. ಈ ಮೂರು ಪತ್ರಿಕೆಗಳನ್ನು ಓದಿ ನಾನು ಪತ್ರಕರ್ತನಾಗಿ ಹೊರ ಹೊಮ್ಮಿದವನು. ಆದ್ದರಿಂದ ಈ ಮೂರು ಪತ್ರಿಕೆಗಳಿಗೂ ಕೂಡಾ ಈ ವೇದಿಕೆಯ ಮೂಲಕ ನಾನು ಧನ್ಯವಾದ ಹೇಳುತ್ತೇನೆ’ ಎಂದು ಹೇಳಿದರು.

LEAVE A REPLY

Please enter your comment!
Please enter your name here