ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ, ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ಟ್ರಸ್ಟ್ ವತಿಯಿಂದ ನಿದ್ರಾಹೀನತೆಯ ಬಗ್ಗೆ ವೈದ್ಯಕೀಯ ಕಾರ್ಯಗಾರ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತಜ್ಞ ವೈದ್ಯ, ಆಯುರ್ವೇದ ಧನ್ವಂತರಿ ಹಾಗೂ ಆಯುರ್ವೇದ ಕಾಲೇಜಿನ ಪ್ರೊಫೆಸರ್ ಆಗಿರುವ ಡಾ.ರಾಘವೇಂದ್ರ ಪ್ರಸಾದ್ ಮಾತನಾಡಿ, ನಿದ್ದೆ ಎನ್ನುವುದು ಮನುಷ್ಯನ ಜೀವನದ ಒಂದು ಭಾಗ, ರಾತ್ರಿ ಹೊತ್ತಲ್ಲಿ ಚೆನ್ನಾಗಿ ನಿದ್ದೆ ಮಾಡುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದರು. ನಿದ್ರಾ ಹೀನತೆಯಿಂದ ಹಲವರು ಬಳಲುತ್ತಿದ್ದಾರೆ. ಚಿಂತೆ, ಹೆಚ್ಚು ಒತ್ತಡ, ಆಲೋಚನೆ, ಇವೆಲ್ಲವೂ ನಿದ್ದೆಗೆ ಭಂಗ ಉಂಟು ಮಾಡುತ್ತದೆ. ಸರಿಯಾಗಿ ನಿದ್ದೆ ಬಾರದವರು ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗಬೇಕು, ನಿರ್ಲಕ್ಷ್ಯ ಮಾಡಿದರೆ ಕೆಲವೊಮ್ಮೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೂ ಬೀರುತ್ತದೆ ಎಂದು ಅವರು ಹೇಳಿದರು.
ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಾಗಿದೆ, ಈಗಿನ ಕಾಲದಲ್ಲಿ ಜನರು ರಾತ್ರಿ ಮೊಬೈಲ್, ಟಿವಿ ನೋಡುವುದರಿಂದ ನಿದ್ದೆಗೆ ಹೋಗುವಾಗಲೇ ಅರ್ಧ ರಾತ್ರಿಯಾಗುತ್ತದೆ, ಮಲಗುವ ವರೆಗೂ ಟಿವಿ, ಮೊಬೈಲ್ ನೋಡುತ್ತಿದ್ದರೆ ಮಲಗಿದ ಕೂಡಲೇ ನಿದ್ದೆ ಬರದೇ ಚಡಪಡಿಸಬೇಕಾದ ಸನ್ನಿವೇಶವೂ ಉಂಟಾಗಬಹುದು. ಹಾಗಾಗಿ ಸಾಧ್ಯವಾದರೆ ರಾತ್ರಿ 9 ಗಂಟೆಯ ಬಳಿಕ ಟಿವಿ, ಮೊಬೈಲ್ ನೋಡುವುದನ್ನು(ಅಗತ್ಯ ಕೆಲಸ ಬಿಟ್ಟು) ನಿಲ್ಲಿಸಿದರೆ ಉತ್ತಮ ಎಂದು ಅವರು ಸಲಹೆ ನೀಡಿದರು.
ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್ ಬಿ ಸಮಯೋಚಿತವಾಗಿ ಮಾತನಾಡಿದರು. ರೋಟರಿ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ದಾಮೋದರ ಉಪಸ್ಥಿತರಿದ್ದರು. ಯೋಗ ಗುರು ಚಂದ್ರಶೇಖರ್ ಅವರು ಯೋಗದ ಬಗ್ಗೆ ಮಾಹಿತಿ ನೀಡಿ ಕೆಲವು ಯೋಗಾಸನಗಳನ್ನು ಮಾಡಿ ತೋರಿಸಿದರು. ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ವಂದಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು.