ಪುತ್ತೂರು: ವಾಹನ ತಪಾಸಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈವೆ ಪೆಟ್ರೋಲಿಂಗ್ ವಾಹನದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಆ.23ರಂದು ಮಧ್ಯಾಹ್ನ ಕಬಕ ಜಂಕ್ಷನ್ ನಲ್ಲಿ ನಡೆದಿದೆ.
ಪ್ರತೀ ದಿನ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿಗಳು ಕಬಕ ಪೇಟೆಯ ಒಂದು ಭಾಗದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಬಳಿಕ ಬೇರೆಡೆಗೆ ನಡೆದು ಕೊಂಡು ಬಂದು ವಾಹನ ತಪಾಸಣೆ ನಡೆಸುತ್ತಿದ್ದರೆನ್ನಲಾಗಿದೆ.
ಆ.23ರಂದು ಮಧ್ಯಾಹ್ನದ ವೇಳೆಗೆ ತಮ್ಮ ವಾಹನದಲ್ಲಿ ಬಂದ ಪೊಲೀಸ್ ಸಿಬ್ಬಂದಿಗಳು ಕಬಕ – ಮಂಗಳೂರು ರಸ್ತೆಯಲ್ಲಿರುವ ಕಬಕ ಹೈಸ್ಕೂಲ್ ರಸ್ತೆಯ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿ ಕಬಕ – ವಿಟ್ಲ ರಸ್ತೆಯಲ್ಲಿ ವಾಹನ ತಪಾಸಣೆ ಆರಂಭಿಸಿದ್ದರು. ಈ ವೇಳೆ ಆ ದಾರಿಯಾಗಿ ಹೆಲ್ಮೆಟ್ ಧರಿಸದೆ ಬಂದ ದ್ವಿಚಕ್ರ ವಾಹನವನ್ನು ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರಾದರೂ ಸವಾರ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿದರೆನ್ನಲಾಗಿದೆ. ಈ ವೇಳೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಆ ದ್ವಿಚಕ್ರ ವಾಹನವನ್ನು ಕಾಲಿನಿಂದ ಒದಿಯುವ ಪ್ರಯತ್ನ ಮಾಡಿದ್ದರೆನ್ನಲಾಗಿದೆ. ಇಷ್ಟು ಮಾತ್ರವಲ್ಲದೆ ಆಸ್ಪತ್ರೆಗೆಂದು ತೆರಳಲು ಅದೇ ದಾರಿಯಾಗಿ ದ್ವಿಚಕ್ರ ವಾಹನವೊಂದರಲ್ಲಿ ಬಂದಿದ್ದ ಗರ್ಬಿಣಿ ಮಹಿಳೆಯನ್ನು ತಪಾಸಣೆ ನೆಪದಲ್ಲಿ ಹಲವಾರು ಹೊತ್ತು ಇದೇ ಪೊಲೀಸರು ಕಾಯಿಸಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಇದನ್ನು ಕಂಡ ಅಲ್ಲಿದ್ದ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಪೊಲೀಸರು ತಪಾಸಣೆ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನೀವುಗಳು ತಪಾಸಣೆ ಮಾಡುವ ರೀತಿಯಲ್ಲಿ ಮಾಡಿ ಅದು ಬಿಟ್ಟು ಪ್ರತೀ ದಿನ ಬೆಳಗ್ಗೆ ಬಂದು ಕಬಕದಲ್ಲಿ ಎಲ್ಲೊಂದರಲ್ಲೂ ವಾಹನವನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳುವವರಿಗೆ ಹಾಗೂ ಕೆಲಸಕ್ಕೆ ತೆರಳುವವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಸಾರ್ವಜನಿಕರು ವಿನಂತಿಸಿದರು.
ಈ ವೇಳೆ ಪೊಲೀಸ್ ಸಿಬ್ಬಂದಿ ಮಾತನಾಡಿ ನೀವುಗಳು ಕಾನೂನಿನ ಅಡಿಯಲ್ಲಿ ವಾಹನ ಚಲಾವಣೆ ಮಾಡಿ ಆಗ ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಾವುಗಳು ತಪಾಸಣೆ ನಡೆಸುವ ಉದ್ದೇಶವೆ ನೀವುಗಳಿಗೆ ತೊಂದರೆಯಾಗದಿರಲೆಂದು ಎಂದು ಸಾರ್ವಜನಿಕರಿಗೆ ತಿಳಿಸಿದರು. ಪರಿಸ್ಥಿತಿ ಕೈ ಮೀರುವ ಬಗ್ಗೆ ಮಾಹಿತಿ ಅರಿತ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಆದರೆ ಆ ವೇಳೆಗಾಗಲೆ ಪರಿಸ್ಥಿತಿ ಹತೋಟಿಗೆ ಬಂದು ಸಾರ್ವಜನಿಕರು ಅಲ್ಲಿಂದ ತೆರಳಿದ್ದರು.