ಕಡಬ: ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ತ್ರೈವಾರ್ಷಿಕ ಮಹಾಸಭೆ

0

ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ರೂ.5 ಕೋಟಿಗೆ ಪ್ರಸ್ತಾವನೆ: ಬಾಲಚಂದ್ರ ಎಚ್

ಕಡಬ: ಇಲಿನ ಎಸ್‌ಆರ್‌ಕೆ ಟವರ‍್ಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ 2021-22, 2022-23 ಹಾಗೂ 2023-24ನೇ ಸಾಲಿನ ತ್ರೈವಾರ್ಷಿಕ ಮಹಾಸಭೆ ಆ.24ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಲಚಂದ್ರ ಎಚ್.ಅವರು ಮಾತನಾಡಿ, ಸಂಘಕ್ಕೆ ಕಡಬದಲ್ಲಿ ಅಂದಾಜು 3 ಕೋಟಿ ರೂ.ವೆಚ್ಚದಲ್ಲಿ ಸ್ವಂತ ನಿವೇಶನ ಖರೀದಿ ಮಾಡಲಾಗಿದ್ದು, ಇಲ್ಲಿ ಸಂಘದ ಪ್ರಧಾನ ಕಚೇರಿಗೆ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ.ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಸೆಂಬರ್ ವೇಳೆಗೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ 2 ವರ್ಷದಲ್ಲಿ ಸಂಘಕ್ಕೆ ಸ್ವಂತ ಕಚೇರಿಯ ಬೃಹತ್ ಕಟ್ಟಡ ಪೂರ್ಣಗೊಳಿಸಬೇಕೆಂಬ ಚಿಂತನೆ ಇದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು. 2019-20ರ ಸಾಲಿನಲ್ಲಿ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಸಹಕಾರ ಸಂಘದಲ್ಲಿ ನೋಂದಾವಣೆಗೊಂಡು ಆರಂಭಗೊಂಡಿದೆ. ಈಗ ನಷ್ಟವನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಎಲ್ಲವೂ ಪಾರದರ್ಶಕತೆಯಿಂದ ಕೂಡಿದೆ. ಸದಸ್ಯರು ಯಾವುದೇ ಸಮಸ್ಯೆ, ಪ್ರಶ್ನೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಿದಲ್ಲಿ ಉತ್ತರ ನೀಡಲಾಗುವುದು ಎಂದು ಹೇಳಿದ ಅವರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲೂ ಕಚೇರಿ ನಿರ್ಮಾಣ ಮಾಡಲಾಗುವುದು. ಆ ಭಾಗದ ವಿಕಲಚೇತನರೂ ಇದರ ಸೌಲಭ್ಯ ಪಡೆದುಕೊಳ್ಳಬಹುದು. ಸದಸ್ಯರು ವಸತಿ ಯೋಜನೆ ಸೌಲಭ್ಯ ಪಡೆದುಕೊಳ್ಳಬಹುದು. ಸ್ವಸಹಾಯ ಗುಂಪುಗಳನ್ನು ಸರಿಯಾಗಿ ನಡೆಸಿಕೊಂಡು ಹೋಗಬೇಕೆಂದು ರಾಮಚಂದ್ರ ಹೆಚ್. ಹೇಳಿದರು.

ಸನ್ಮಾನ:
ಸಂಘದ ಸದಸ್ಯೆಯರಾಗಿದ್ದು ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಬಿ.ಫಾತಿಮಾ ಹಾಗೂ ಜುಲೈಕಾ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಕ ಪದ್ಮರಾಜ್ ಚಾರ್ವಾಕ ಅವರಿಗೆ ಶಾಲು ಹಾಕಿ ಗೌರವಿಸಲಾಯಿತು. ಸೆಲ್ಕೋ ಸೋಲಾರ್ ಸಂಸ್ಥೆಯವರು ಸೋಲಾರ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ಹಿರಿಯ ಸದಸ್ಯೆ ಫಾತಿಮಾ ಉದ್ಘಾಟಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನಮೋಹನ್ ಎಂ.ಎಸ್.ಅವರು, 2021-22, 2022-23 ಮತ್ತು 2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ವ್ಯವಸ್ಥಾಪಕಿ ಪೂಜಾ ಪಿ.ಹೆಚ್.ಅವರು 2021-22, 2022-23 ಮತ್ತು 2023-24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ಸಿಬ್ಬಂದಿ ಹಿತೇಶ್ ಇ. ಮಹಾಸಭೆಯ ನೋಟಿಸ್, 2024-25ನೇ ಸಾಲಿನ ಅಂದಾಜು ಆಯ-ವ್ಯಯ ಮಂಡಿಸಿದರು. ನಿತೀಶ್‌ಕುಮಾರ್ ಸ್ವಾಗತಿಸಿದರು. ಪದ್ಮರಾಜ್ ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಮಧುರಾ ಕೆ.ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here