ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮ ಪಂಚಾಯತಿನ 2023-24ನೇ ಸಾಲಿನ ಜಮಾಬಂದಿ ಸಭೆ ಆ.27ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿದ ದ.ಕ.ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಸುದೀರ್ ಗಾಂವ್ಕರ್ ಸಭೆಯನ್ನುದ್ದೇಶಿಸಿ ಮಾತನಾಡಿ ಗ್ರಾಮದಲ್ಲಿ ಸ್ಮಶಾನಕ್ಕೆ ಕಾದಿರಿಸಿದ ಜಾಗವನ್ನು ಗುರುತು ಮಾಡಿ ಅದರ ರೆಕಾರ್ಡ್ ಮಾಡಿಸಬೇಕು. ಜಾಗ ಒತ್ತುವರಿ ಮಾಡಿ ಜಾಗದಲ್ಲಿ ಮನೆ, ಕಟ್ಟಡ ಕಟ್ಟಿದರೆ ಇನ್ನು ಹೆಣ ಸುಡಲೂ ಜಾಗ ಇಲ್ಲವಾದೀತು. ಅದಕ್ಕಾಗಿ ಪಂಚಾಯತ್ ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಅಂತರ್ಜಲ ಮಟ್ಟ ಕುಸಿತವಾಗುವುದನ್ನು ತಡೆಗಟ್ಟಲು ಕೆರೆ ನಿರ್ಮಾಣ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಹೇಳಿದರು. ಸಭೆಯಲ್ಲಿ ಗ್ರಾಮಸ್ಥರು ವಿರಳವಾಗಿ ಕಂಡುಬಂದ ಬಗ್ಗೆ ಮಾತನಾಡಿ, ಇದು ಗ್ರಾಮಸ್ಥರಿಗಾಗಿ ಮಾಡುವ ಸಭೆ. ಆದುದರಿಂದ ಸಾರ್ವಜನಿಕರ ಭಾಗವಹಿಸುವಿಕೆ ಬಹಳ ಅಗತ್ಯ ಎಂದು ಹೇಳಿದರು.
ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಉಪಾಧ್ಯಕ್ಷೆ ಸೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ಕಾಮಗಾರಿಗಳ ಪಟ್ಟಿ ವಾಚಿಸಿ ವಂದಿಸಿದರು.
ಪಂಚಾಯತ್ ಸದಸ್ಯರಾದ ಸತೀಶ್ ಶೆಟ್ಟಿ, ಬಾಲಚಂದ್ರ .ಕೆ, ಗ್ರೇಟಾ ಡಿ” ಸೋಜಾ, ಬೆಟ್ಟಂಪಾಡಿ ಪದವಿ ಕಾಲೇಜಿನ ಬಿಎಸ್ ಡಬ್ಲ್ಯೂ ತರಗತಿ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡರು. ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು. ನಂತರ ಜಮಾಬಂದಿ ಅಧಿಕಾರಿ ಲೆಕ್ಕ ಪತ್ರಗಳ ದಾಖಲೆ ಮತ್ತು ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಿದರು.