ಘಟನೆ ಹಿನ್ನೆಲೆಯಲ್ಲಿ ಜಿ.ಪಂ. ಇಂಜಿನಿಯರ್, ಮುಖ್ಯಶಿಕ್ಷಕರ ಅಮಾನತು
ಕಡಬ/ಆಲಂಕಾರು: ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿತಗೊಂಡು ನಾಲ್ವರು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಆ.27ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಹಿಂಭಾಗ ತಡೆಗೋಡೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಪಾಯ ತೆಗೆಯುತ್ತಿದ್ದ ವೇಳೆ ಶಿಥಿಲಗೊಂಡಿದ್ದ ಕಟ್ಟಡಕ್ಕೆ ಹಾನಿಯಾಗಿ ಛಾವಣಿ ಸಹಿತ ಕಟ್ಟಡ ಕುಸಿದು ಬಿದ್ದಿದೆ. ಈ ವೇಳೆ ಕಟ್ಟಡದ ಕೊಠಡಿಯಲ್ಲಿದ್ದ ಏಳನೇ ತರಗತಿ ವಿದ್ಯಾರ್ಥಿಗಳಾದ ರಶ್ಮಿ, ದೀಕ್ಷಾ, ಫಾತಿಮತ್ ಸುಹಾನ, ಯಶ್ಮಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡು ವಿದ್ಯಾರ್ಥಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದು ಸ್ಥಳೀಯರು ಆಗಮಿಸಿ ಅವರನ್ನು ಹೊರತೆಗೆದಿದ್ದಾರೆ. ತಕ್ಷಣ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್ ಅವರ ಆದೇಶದಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸಂಗಪ್ಪ ಹುಕ್ಕೇರಿ ಹಾಗೂ ಶಾಲಾ ಮುಖ್ಯ ಶಿಕ್ಷಕ ರಮೇಶ್ ಅವರನ್ನು ಅಮಾನತು ಮಾಡಲಾಗಿದೆ.
ಘಟನೆ ವಿವರ: ಶಾಲೆಯ ಕಟ್ಟಡದ ಗೋಡೆ ಬಿರುಕು ಬಿಟ್ಟ ಪರಿಣಾಮ ದುರಸ್ತಿಗಾಗಿ ಮಳೆಹಾನಿ ಯೋಜನೆಯಡಿ 1.5 ಲಕ್ಷ ರೂ.ಮಂಜೂರುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ಕಟ್ಟಡದ ಹಿಂದುಗಡೆ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಇದರ ಕಾಮಗಾರಿಯನ್ನು ಶೀಘ್ರದಲ್ಲೇ ಮಾಡಿ ಮುಗಿಸಬೇಕೆಂದು ತಡೆಗೋಡೆ ನಿರ್ಮಾಣಕ್ಕೆ ಪಾಯ ತೋಡುವ ಕೆಲಸವನ್ನು ಆ.27ರಂದು ಪ್ರಾರಂಭಿಸಲಾಗಿತ್ತು. ಏಳು ಹಾಗೂ ಐದನೇ ತರಗತಿ ನಡೆಸುತ್ತಿದ್ದ ಕೊಠಡಿಯ ಹಿಂದುಗಡೆ ಪಾಯ ತೋಡುವ ಕೆಲಸವನ್ನು ಜೆಸಿಬಿಯಲ್ಲಿ ನಡೆಸಲಾಗುತ್ತಿತ್ತು. ಜೆಸಿಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಂತೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಠವಶಾತ್ ಆ ಕಟ್ಟಡದಲ್ಲಿ ಅಭ್ಯಾಸ ಮಾಡುತ್ತಿದ್ದ ಐದನೇ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳನ್ನು ಹೊರಗಡೆ ಆಟದ ಮೈದಾನಕ್ಕೆ ಕಳುಹಿಸಲಾಗಿತ್ತು. ಆದರೆ ನಾಲ್ಕು ವಿದ್ಯಾರ್ಥಿಗಳು ಮಾತ್ರ ಕೊಠಡಿಯೊಳಗೆ ನೀರು ಕುಡಿಯಲೆಂದು ಬಂದು ಕುತೂಹಲದಿಂದ ಜೆಸಿಬಿ ಕೆಲಸ ವೀಕ್ಷಣೆ ಮಾಡುತ್ತಿದ್ದರು. ಅಷ್ಟರಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲೇ ಅಡಿಪಾಯಕ್ಕೆ ಗುಂಡಿ ತೋಡಿದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿ ಕಟ್ಟಡ ನೆಲಕ್ಕುರುಳಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
ಭಾರೀ ಅಕ್ರೋಶ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೋಷಕರು ಹಾಗೂ ಸ್ಥಳೀಯಾಡಳಿತದ ಜನಪ್ರತಿನಿಽಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಇಂಜಿನಿಯರ್ ಹಾಗೂ ಶಾಲಾ ಮುಖ್ಯ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಟ್ಟಡ ಶಿಥೀಲಾವಸ್ಥೆಯಲ್ಲಿದ್ದರೂ ಅದರ ಹಿಂದೆ ತಡೆಗೋಡೆ ನಿರ್ಮಾಣ ಮಾಡಲು ಹೋಗಿ ಈಗ ಅಪಾಯ ಉಂಟಾಗಿದೆ, ಇಲ್ಲಿ ಕಾಮಗಾರಿ ನಡೆಸುವಾಗ ಕನಿಷ್ಠ ಗ್ರಾಮ ಪಂಚಾಯಿತಿಗೆ ತಿಳಿಸುವ ಕೆಲಸವಾಗಿಲ್ಲ. ನಾಲ್ಕು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಎಲ್ಲಾ ಮಕ್ಕಳು ಇದ್ದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಹಾಗೂ ಮುಖ್ಯ ಶಿಕ್ಷಕರ ಬೇಜವಾಬ್ದಾರಿಯಿಂದ ನಡೆದಿದೆ. ಆದುದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು, ಅಪಾಯಕಾರಿ ಕಟ್ಟಡದಲ್ಲಿ ತರಗತಿ ನಡೆಸಬಾರದು ಎಂದು ಆದೇಶ ಮಾಡಿದ್ದರೂ ಯಾಕೆ ತರಗತಿ ನಡೆಸಲು ಹೋಗಿದ್ದೀರಿ ಎಂದು ಮುಖ್ಯ ಶಿಕ್ಷಕರನ್ನು ತರಾಟೆಗೆತ್ತಿಕೊಂಡು ಜಿಲ್ಲಾಧಿಕಾರಿಯವರಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಸಂಜೆಯ ವೇಳೆ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಇಂಜಿನಿಯರ್ ಹಾಗೂ ಮುಖ್ಯ ಶಿಕ್ಷಕರ ಅಮಾನತು ಆದೇಶದ ಬಗ್ಗೆ ದೃಢೀಕರಿಸಿದರು. ಸ್ಥಳದಲ್ಲಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಭರತ್ ಬಿ.ಎಂ. ಉಪ್ಪಿನಂಗಡಿ ವೃತ್ತನಿರೀಕ್ಷಕ ರವಿ ಬಿ.ಎಸ್., ಕಡಬ ಎಸ್‌ಐ ಅಭಿನಂದನ್ ಎಂ.ಎಸ್, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಿಶಿರ, ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ https://youtu.be/pf1HhGP9fTk
ಆಟದ ಮೈದಾನಕ್ಕೆ ಹೋಗಿರುವುದರಿಂದ ಮಕ್ಕಳು ಬಚಾವ್
ಈ ಕಟ್ಟಡದಲ್ಲಿ ಅಭ್ಯಾಸ ಮಾಡುತ್ತಿದ್ದ ಐದು ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳನ್ನು ಹೊರಗಡೆ ಆಟದ ಮೈದಾನಕ್ಕೆ ಕಳುಹಿಸಲಾಗಿತ್ತು. ಆದರೆ ನಾಲ್ಕು ವಿದ್ಯಾರ್ಥಿಗಳು ಮಾತ್ರ ಕೊಠಡಿಯೊಳಗೆ ನೀರು ಕುಡಿಯಲೆಂದು ಬಂದು ಕುತೂಹಲದಿಂದ ಜೆಸಿಬಿ ಕೆಲಸ ವೀಕ್ಷಣೆ ಮಾಡುತ್ತಿದ್ದರು. ಅಷ್ಟರಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಮಕ್ಕಳು ಆಟದ ಮೈದಾನಕ್ಕೆ ತೆರಳಿದ್ದರಿಂದ ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ.
ತರಾತುರಿಯಲ್ಲಿ ಕಾಮಗಾರಿ
ಈ ಶಾಲೆಗೆ 75 ವರ್ಷ ತುಂಬುತ್ತಿದ್ದು, ಕುಸಿದು ಬಿದ್ದಿರುವ ಕಟ್ಟಡವನ್ನು ಸುಮಾರು ಐವತ್ತು ವರ್ಷದ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಅದಕ್ಕೆ ಸರಿಯಾದ ಅಡಿಪಾಯವೇ ಇರಲಿಲ್ಲ. ಇತ್ತ ಕಟ್ಟಡ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆಯಲ್ಲಿತ್ತು. ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದು ಗೊತ್ತಿದ್ದರೂ ತರಾತುರಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪ್ರಾರಂಭಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.