ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0


ರೂ.170.84 ಕೋಟಿ ವ್ಯವಹಾರ, 1.10 ಕೋಟಿ ಲಾಭ,10% ಡಿವಿಡೆಂಡ್ ಘೋಷಣೆ

ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.170.84 ಕೋಟಿ ವ್ಯವಹಾರ ನಡೆಸಿ ಸಂಘದ ಇತಿಹಾಸದಲ್ಲೇ ಅತೀ ಹೆಚ್ಚು ರೂ.1,10,45,572 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶಶಿಧರ ರಾವ್ ಕೆ ಬೊಳಿಕ್ಕಳ ಹೇಳಿದರು.
ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ಆ.27ರಂದು ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರ ಸಹಕಾರಿಂದಾಗಿ ಸಂಘಕ್ಕೆ ಈ ಬಾರಿ ಅತೀ ಹೆಚ್ಚು ಲಾಭ ಬಂದಿದ್ದು ಸಂಘ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಕೆದಂಬಾಡಿ ಮತ್ತು ಕೆಯ್ಯೂರಿನಲ್ಲಿ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕೆನ್ನುವುದು ನಮ್ಮ ಆಸೆಯಾಗಿದೆ, ನಿಮ್ಮೆಲ್ಲರ ತುಂಬು ಹೃದಯದ ಸಹಕಾರವಿದ್ದರೆ ಅದು ಮುಂದಿನ ದಿನಗಳಲ್ಲಿ ಸಾಧ್ಯವಾಗಬಹುದು. ನಿಮ್ಮ ಜೊತೆ ಸಹಕಾರ ಸಂಘ ಯಾವತ್ತೂ ಇದೆ, ಸಂಘದ ಅಭಿವೃದ್ಧಿಗೆ ಕಾರಣೀಭೂತರಾದ ನಿಮಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಶಿಧರ ರಾವ್ ಬೊಳಿಕ್ಕಳ ಹೇಳಿದರು.

ಕೆದಂಬಾಡಿಯಲ್ಲಿ 2.50 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ:
ಸಭೆಯಲ್ಲಿ ಸಂಘದ ನಿವ್ವಲ ಲಾಭ ವಿಂಗಡನೆ ನಿರ್ವಹಿಸಿದ ಸಂಘದ ನಿರ್ದೇಶಕರಾದ ಎಸ್.ಬಿ ಜಯರಾಮ ರೈ ಮಾತನಾಡಿ ನಮ್ಮ ಸಹಕಾರ ಸಂಘಕ್ಕೆ ಕೆದಂಬಾಡಿಯಲ್ಲಿ ಅಂದಾಜು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿದ್ದೆವು, ಬಳಿಕ ಕಟ್ಟಡ ಪೂರ್ತಿಗೊಳಿಸಲು ಆ ಹಣ ಸಾಕಾಗದು ಎನ್ನುವ ಕಾರಣಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ನಾವು ಸಾಲ ಕೇಳಿದ್ದು ಶೇ.1 ಬಡ್ಡಿಯಲ್ಲಿ 1 ಕೋಟಿ ರೂ ಕೊಡಲು ಕೇಂದ್ರ ಬ್ಯಾಂಕ್‌ನವರು ಒಪ್ಪಿಕೊಂಡಿದ್ದಾರೆ, ಹಾಗಾಗಿ ಎರಡೂವರೆ ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ಈಗಾಗಲೇ ಕಟ್ಟಡಕ್ಕೆ ಬೇಕಾದ ಎಸ್ಟಿಮೇಟ್, ಪ್ಲ್ಯಾನ್ ಆಗಿ ಸಂಬಂಧಪಟ್ಟ ಇಲಾಖೆಗೆ ಹೋಗಿದೆ. ಈ ಬಾರಿ ಸದಸ್ಯರು ಮನಸ್ಸು ಮಾಡಿದರೆ ಡಿವಿಡೆಂಡ್ ಅಲ್ಪ ಕಮ್ಮಿ ಮಾಡಿಕೊಂಡು ಅದನ್ನು ಕಟ್ಟಡಕ್ಕೆ ಬಳಸಬಹುದಾಗಿದೆ ಎಂದು ಅವರು ಹೇಳಿದರು. ಅದೇ ರೀತಿ ಕೆಯ್ಯೂರಿನಲ್ಲಿಯೂ ಸಂಘಕ್ಕೆ ರೂ. 40 ಲಕ್ಷ ವೆಚ್ಚದಲ್ಲಿ ಕಟ್ಟಡ ಕಟ್ಟಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಸ್.ಬಿ ಜಯರಾಮ ರೈ ಮಾಹಿತಿ ನೀಡಿದರು.

ಕೆಯ್ಯೂರಿನಲ್ಲಿ 1 ಕೋಟಿ ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಆಗ್ರಹ:
ಕೆದಂಬಾಡಿಯಲ್ಲಿ ಎರಡೂವರೆ ಕೋಟಿ ವೆಚ್ಚದ ಕಟ್ಟಡ ಕಟ್ಟುವುದು ಒಳ್ಳೆಯ ವಿಚಾರ, ಆದರೆ ಕೆಯ್ಯೂರಿನಲ್ಲಿ 40 ಲಕ್ಷ ರೂ ವೆಚ್ಚದ ಕಟ್ಟಡ ಕಟ್ಟುವುದು ಯಾಕೆ? ಕೆಯ್ಯೂರಿನಲ್ಲಿ ಕನಿಷ್ಠ ಒಂದು ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ಕಟ್ಟಬೇಕು ಎಂದು ಸದಸ್ಯ ಎ.ಕೆ ಜಯರಾಮ ರೈ ಆಗ್ರಹಿಸಿದರು. ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಉತ್ತರಿಸಿ ಕೆಯ್ಯೂರಿನಲ್ಲಿ ದೊಡ್ಡ ಕಟ್ಟಡ ಕಟ್ಟಲು ಜಾಗದ ಕೊರೆಯಿದೆ ಎಂದು ಹೇಳಿದರು. ಎ.ಕೆ ಜಯರಾಮ ರೈ ಮಾತನಾಡಿ ಈ ಹಿಂದೆ ಅಲ್ಲಿ ಕಟ್ಟಡ ಮಾಡುವ ಸಂದರ್ಭವೇ ಅಲ್ಪ ಹಿಂದಕ್ಕೆ ಕಟ್ಟಬೇಕೆಂದು ನಾನು ಹೇಳಿದ್ದೆ, ಈಗ ನೋಡಿ ಸಮಸ್ಯೆ ಆರಂಭವಾಗಿದೆ ಎಂದು ಹೇಳಿದರು. ಏನೇ ಆದರೂ 40 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವುದ ಬೇಡ, ಮಾಡಿದರೆ ಸುಸಜ್ಜಿತ 1 ಕೋಟಿ ರೂ ವೆಚ್ಚದ ಕಟ್ಟಡವೇ ನಿರ್ಮಾಣ ಮಾಡಬೇಕು ಎಂದು ಎ.ಕೆ ಜಯರಾಮ ರೈ ಪಟ್ಟು ಹಿಡಿದರು.
ಸದಸ್ಯ ಕಡೆಮಜಲು ಸುಭಾಷ್ ರೈ ಮಾತನಾಡಿ ಈ ವರ್ಷ ಕೆದಂಬಾಡಿಯ ಕಟ್ಟಡ ಕಾಮಗಾರಿ ನಡೆಸಿ, ಮುಂದಿನ ವರ್ಷ ಕೆಯ್ಯೂರಿನ ಕಟ್ಟಡ ಕಾಮಗಾರಿ ನಡೆಸಿ, 1 ಕೋಟಿ ರೂ. ವೆಚ್ಚದಲ್ಲಿ ಕೆಯ್ಯೂರಿನಲ್ಲ ಕಟ್ಟಡ ಮಾಡಿದರೆ ಉತ್ತಮ ಎಂದು ಹೇಳಿದರು.
ನಿರ್ದೇಶಕ ಎಸ್.ಬಿ ಜಯರಾಮ ರೈ ಮಾತನಾಡಿ ನಿಮ್ಮೆಲ್ಲರ ಅಭಿಪ್ರಾಯ ಪಡೆದುಕೊಂಡು, ಸಾದಕ ಬಾಧಕ ವಿಚಾರಗಳ ಬಗ್ಗೆ ಚರ್ಚೆ ಮಾಡಿಕೊಂಡು ಮುಂದುವರಿಯುತ್ತೇವೆ ಎಂದು ಹೇಳಿದರು.

ಡಿವಿಡೆಂಡ್ ವಿಚಾರ-ಅಧ್ಯಕ್ಷರ ಮನವಿ
ಸದಸ್ಯರ ಡಿವಿಡೆಂಡ್ ವಿಚಾರವಾಗಿ ಮಾತನಾಡಿದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಅವರು ಕಟ್ಟಡ ಕಾಮಗಾರಿಗೆ ಬಹಳಷ್ಟು ಖರ್ಚುವೆಚ್ಚಗಳಿರುವುದರಿಂದ ಸದಸ್ಯರು ಮನಸ್ಸು ಮಾಡಿದರೆ 14% ಬದಲಿಗೆ ಈ ಬಾರಿ 9% ಡಿವಿಡೆಂಡ್ ನೀಡುತ್ತೇವೆ ಎಂದು ಹೇಳಿದರು. ಸುಭಾಷ್ ರೈ ಕಡೆಮಜಲು ಮಾತನಾಡಿ ಒಳ್ಳೆಯ ಕೆಲಸಕ್ಕೆ ಜನರ ಸಹಕಾರ ಇದ್ದೇ ಇದೆ, 9% ಬದಲು 10% ಮಾಡಿ ಎಂದು ಹೇಳಿದರು. ಇತರ ಕೆಲ ಸದಸ್ಯರು ಧ್ವನಿಗೂಡಿಸಿದರು. ಬಳಿಕ 10% ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರು ಘೋಷಿಸಿದರು.

ಸತತ ಏಳನೇ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಪ್ರಶಸ್ತಿ:
ಕೆಯ್ಯೂರು-ಕೆದಂಬಾಡಿ ಪ್ರಾ.ಕೃ.ಪ.ಸ.ಸಂಘಕ್ಕೆ ಸತತ ಏಳನೇ ಬಾರಿಗೆ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಕೇಂದ್ರ ಬ್ಯಾಂಕಿನಿಂದ ಬಹುಮಾನ ಲಭಿಸಿದ್ದು ಇದಕ್ಕೆ ಕಾರಣಕರ್ತರಾದ ದ.ಕ ಜಇಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ ಕುಮಾರ್, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಹಾಗೂ ಬ್ಯಾಂಕ್‌ನ ಎಲ್ಲಾ ನಿರ್ದೇಶಕರು ಮತ್ತು ಸಂಘದ ವಲಯ ಮೇಲ್ವಿಚಾರಕರಾದ ಶರತ್ ಡಿ ಅವರಿಗೆ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಅಭಿನಂದನೆ ಸಲ್ಲಿಸಿದರು.

ಎಫ್.ಡಿ ಇಂಟ್ರೆಸ್ಟ್ ಹೆಚ್ಚಳಕ್ಕೆ ಆಗ್ರಹ:
ಸೊಸೈಟಿಯಲ್ಲಿ ಎಫ್.ಡಿ ಇಡುವವರಿಗೆ ಬೇರೆ ಸಂಘಗಳಲ್ಲಿ 9% ಬಡ್ಡಿ ನೀಡುತ್ತಿದ್ದರೆ ನಮ್ಮ ಸಂಘದಲ್ಲಿ 8% ಬಡ್ಡಿ ನೀಡಲಾಗುತ್ತಿದೆ, ಇದನ್ನು 9%ಗೆ ಹೆಚ್ಚಳ ಮಾಡಬೇಕೆಂದು ಸದಸ್ಯ ರಾಮಕೃಷ್ಣ ಭಟ್ ಆಗ್ರಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯಕುಮಾರ್ ರೈ ಡಿ ಅವರು ಈ ವಿಚಾರದ ಬಗ್ಗೆ ಸ್ಪಷ್ಟಣೆ ನೀಡಿದರು. ಅಧ್ಯಕ್ಷ ಶಶಿದರ ರಾವ್ ಬೊಳಿಕ್ಕಳ ಉತ್ತರಿಸಿ ಕೂಲಂಕುಷ ಚರ್ಚೆ ಮಾಡಿ ಮುಂದಕ್ಕೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಪ್ರಯೋಜನಕ್ಕಿಲ್ಲದ ಯಶಸ್ವಿನಿ ಯೋಜನೆ ರದ್ದುಗೊಳಿಸಿ:
ಯಶಸ್ವಿನಿ ಯೋಜನೆಯ ಹಣ ಅಗತ್ಯ ಸಂದರ್ಭದಲ್ಲಿ ಯಾರಿಗೂ ಸಿಗುವುದಿಲ್ಲ, ಪುತ್ತೂರು ಆಸ್ಪತ್ರೆಗಳಲ್ಲಿ ಅದು ಹೇಗೂ ಸಿಗುವುದಿಲ್ಲ, ಮಂಗಳೂರಿನ ಕೆಲ ಆಸ್ಪತ್ರೆಗಳಲ್ಲಿ ಮಾತ್ರ ಆ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ, ಜನರಿಗೆ ಅಗತ್ಯ ಸಂದರ್ಭದಲ್ಲಿ ಉಪಯೋಗಕ್ಕೆ ಬಾರದ ಯಶಸ್ವಿನಿ ಯೋಜನೆಯನ್ನು ರದ್ದು ಮಾಡುವುದು ಉತ್ತಮ, ಈ ಕುರಿತು ನಿರ್ಣಯ ಮಾಡಿ ಎಂದು ಎ.ಕೆ ಜಯರಾಮ ರೈ ಹೇಳಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯಕುಮಾರ್ ರೈ ಡಿ ಉತ್ತರಿಸಿ ನೀವು ಹೇಳುವುದು ಸರಿಯಿದೆ, ಪುತ್ತೂರಿನ ಆಸ್ಪತ್ರೆಗಳಲ್ಲಿ ಅದು ಆಗುವುದಿಲ್ಲ. ಪುತ್ತೂರಿನ ಕನಿಷ್ಠ ೨ ಆಸ್ಪತ್ರೆಗಳಲ್ಲಾದರೂ ಈ ಯೋಜನೆ ಅನ್ವಯವಾಗುವಂತೆ ವ್ಯವಸ್ಥೆ ಮಾಡಲು ಶಾಸಕರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಕ್ಯಾಂಪ್ಕೋದಲ್ಲಿ ಅಡಿಕೆಗೆ 5 ರೂ ಕಡಿಮೆ:
ಕ್ಯಾಂಪ್ಕೋಗೆ ಅಡಿಕೆ ಕೊಂಡುಹೋದರೆ ಅಲ್ಲಿ ಪುತ್ತೂರು, ಬೆಳ್ಳಾರೆಯಲ್ಲಿ ಸಿಗುವ ದರಕ್ಕಿಂತ 5 ರೂ ಕಡಿಮೆ ಸಿಗುತ್ತದೆ, ಹಾಗಾದರೆ ಕ್ಯಾಂಪ್ಕೋಗೆ ಅಡಿಕೆ ಕೊಡುವುದು ಯಾಕೆ ಎಂದು ರಾಮಕೃಷ್ಣ ಭಟ್ ಪ್ರಶ್ನಿಸಿದರು. ಉಪಾಧ್ಯಕ್ಷ ಕೃಷ್ಣಕುಮಾರ್ ರೈ ಗುತ್ತು ಇದಕ್ಕೆ ಸ್ಪಷ್ಟನೆ ನೀಡಿದರು. ಬಳಿಕ ಈ ಬಗ್ಗೆ ನಿರ್ಣಯ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸಿಕೊಡುತ್ತೇವೆ ಎಂದು ಕೃಷ್ಣಕುಮಾರ್ ರೈ ಗುತ್ತು ಹೇಳಿದರು.

ಸಾಲಮನ್ನಾ ವಂಚಿತರ ಬಗ್ಗೆ ಚರ್ಚೆ:
ಸದಸ್ಯ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ ನಮ್ಮ ಸಂಘದ ಕೆಲವು ಸದಸ್ಯರಿಗೆ ಸಾಲಮನ್ನಾ ಪ್ರಯೋಜನ ಸಿಕ್ಕಿಲ್ಲ, ಇದಕ್ಕೆ ಏನು ಪರಿಹಾರ? ಅವರನ್ನು ಗ್ರೀನ್ ಲಿಸ್ಟ್‌ಗೆ ಸೇರಿಸಿದೆಯಾ ಎಂದು ಕೇಳಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯಕುಮಾರ್ ರೈ ಡಿ ಉತ್ತರಿಸಿ ಇದು ಸರಕಾರಿ ಮಟ್ಟದಲ್ಲಿ ಆಗಬೇಕಾದ ವಿಚಾರವಾಗಿದ್ದು ಗ್ರೀನ್ ಲಿಸ್ಟ್‌ಗೆ ಸೇರ್ಪಡೆ ಆಗಿದೆ ಎಂದು ಹೇಳಿದರು.

ತಿಂಗಳಾಡಿ ಸಹಕಾರಿ ಮಾರ್ಟ್‌ನಲ್ಲಿ 9 ಲಕ್ಷ ರೂ ಲಾಭ:
ಸಂಘದ ಅಧೀನದಲ್ಲಿ ತಿಂಗಳಾಡಿಯಲ್ಲಿರುವ ಸಹಕಾರಿ ಮಾರ್ಟ್‌ನಲ್ಲಿ ವರ್ಷಕ್ಕೆಷ್ಟು ಲಾಭ ಬಂದಿದೆ ಎಂದು ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಕಳೆದ ಸಾಲಿನಲ್ಲಿ ರೂ.೯ ಲಕ್ಷ ಲಾಭ ಬಂದಿದೆ ಎಂದು ಹೇಳಿದರು.
ನಿರ್ದೇಶಕರಾದ ತಾರನಾಥ ಕಂಪ, ಜನಾರ್ದನ ರೈ ಪಿ, ರಿತೇಶ್ ಎಂ, ಸೀತಾರಾಮ ಗೌಡ, ಪುಷ್ಪಲತಾ ಜೆ ರೈ, ಜಯಂತಿ, ಲೋಕೇಶ್ ಬಿ, ಪ್ರವೀಣ, ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಶರತ್ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯಕುಮಾರ್ ರೈ ಡಿ ವಾರ್ಷಿಕ ವರದಿ ವಾಚಿಸಿದರು. ಸಿಬ್ಬಂದಿ ಸೂರಜ್ ಕುಮಾರ್ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.

ಸಿಬ್ಬಂದಿ ಅಣ್ಣು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ರೈ ಗುತ್ತು ಸ್ವಾಗತಿಸಿದರು. ನಿರ್ದೇಶಕ ಸಂತೋಷ್ ಕುಮಾರ್ ರೈ ವಂದಿಸಿದರು. ಸಿಬ್ಬಂದಿ ಪ್ರೀತಂ ಬಿ ರೈ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ನಿರುಪಮ, ಕೌಸಲ್ಯ, ಭವ್ಯಶ್ರೀ, ದುರ್ಗಾಕಿರಣ್, ಐತ್ತಪ್ಪ ಹಾಗೂ ಪ್ರದೀಪ್ ಸಹಕರಿಸಿದರು. ಪ್ರಾರಂಭದಲ್ಲಿ ಕಳೆದ ಸಾಲಿನಲ್ಲಿ ನಿಧನ ಹೊಂದಿದ ಸಂಘದ ಸದಸ್ಯರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು. ಸಭೆಯಲ್ಲಿ ನೂರಾರು ಮಂದಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here