ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಶ್ರೀ ಕೃಷ್ಣ ಲೀಲೋತ್ಸವ -ನಂದಗೋಕುಲವಾದ ಸಾಂದೀಪನಿ ವಿಹಾರ

0

ಪುತ್ತೂರು : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವದ ಉದ್ಘಾಟನಾ ಕಾರ್ಯಕ್ರಮ ಆ.27 ರಂದು ಸಂಸ್ಥೆಯ ಗೋಪಾಲಕೃಷ್ಣ ಸಭಾಭವನದ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು  ಉದ್ಘಾಟಿಸಿದ ಪ್ರಗತಿಪರ ಕೃಷಿಕ ರತ್ನಾಕರ ವಾರಂಬಾಳಿತ್ತಾಯ ಪಂಜಿಗ ಶಾಂತಿಗೋಡು ಮಾತನಾಡಿ, ಶ್ರೀ ಕೃಷ್ಣನ ಜೀವನವೇ ಆದರ್ಶ ,ದಾರಿದೀಪ. ಶ್ರೀಕೃಷ್ಣ ಪರಮಾತ್ಮ  ಅವತಾರವು  ಧರ್ಮ ಪುನರುತ್ಥಾನಕ್ಕೆ ಆಗಿದೆ.ಶ್ರೀಕೃಷ್ಣ ಪರಮಾತ್ಮ ಧರ್ಮ ಸಂಸ್ಥಾಪಕ ಎಂದ ಅವರು ಸಾಂದೀಪನಿ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿಯ ಗುರುಕುಲ ಪದ್ದತಿಯ ಮಾದರಿ ಶಿಕ್ಷಣ ದೊರಕುತ್ತಿದೆ.ಕೃಷ್ಣನ ಜೀವನದ ಕಥೆಗಳು ಗುರುವಾಗಿ ನಮಗೆ ದಾರಿದೀಪ.ಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಳ್ಳಬೇಕು ಎಂದರು.

ಚಿತ್ರ : ಹೆಬ್ಬಾರ್ ಫೋಟೋಸ್ ಮತ್ತು ಪ್ರವೀಣ್ ಚೆನ್ನಾವರ 

ಮುಖ್ಯ ಅತಿಥಿ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ವೆಂಕಟರಮಣ ಭಟ್ ದೇರ್ಕಜೆ ಮಾತನಾಡಿ,ನಾವು ಕಲಿತು ಎಷ್ಟೇ ಎತ್ತರಕ್ಕೇರಿದರೂ ಶಿಕ್ಷಕರನ್ನು ಮರೆಯಬಾರದು.ಜೀವನದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಇದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಎಲ್ಲರೂ ಕ್ಲಪ್ತ ಸಮಯದಲ್ಲಿ ಶಾಲಾ ಶುಲ್ಕ ಪಾವತಿಸಬೇಕು.ಇಲ್ಲದಿದ್ದರೆ ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ.ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಿದರೆ ಶಾಲಾಭಿವೃದ್ದಿ ಜತೆಗೆ ಮಕ್ಕಳ ಶಿಕ್ಷಣದಲ್ಲೂ ಪ್ರಗತಿ ಸಾಧ್ಯ ಎಂದು ತಮ್ಮ ಜೀವನದ ಸ್ವಅನುಭವವನ್ನು ವೆಂಕಟರಮಣ ಭಟ್ ದೇರ್ಕಜೆ ಹೇಳಿದರು.

ಮುಖ್ಯಶಿಕ್ಷಕಿ ಜಯಮಾಲಾ ವಿ.ಎನ್ ಮಾತನಾಡಿ, ಜೀವನ ಶಿಕ್ಷಣ ಸಾಂದೀಪನಿಯಲ್ಲಿ ಸಿಗುತ್ತದೆ ಎಂಬ ಪೋಷಕರ ಬೆಂಬಲದ ಮಾತಿನೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ.ಸಾಂದೀಪನಿ ಸಂಸ್ಥೆಯು ಪಠ್ಯದ ಜತೆಗೆ ಸಂಸ್ಕೃತಿಯ ಅಂಶವನ್ನು ಬಿತ್ತುವುದರೊಂದಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ,ಯೋಗ ಶಿಕ್ಷಣವನ್ನೂ ನೀಡಲಾಗುತ್ತದೆ. ಸಮಾಜದಲ್ಲಿ ಸಾಂದೀಪನಿ ಶಿಕ್ಷಣ ಸಂಸ್ಥೆಗಳ ಕುರಿತು ಉತ್ತಮ ಅಭಿಪ್ರಾಯ ಇದೆ.ಇದಕ್ಕೆ ಕಾರಣ ಪೋಷಕರು ಹಾಗೂ ವಿದ್ಯಾರ್ಥಿಗಳು ,ಆಡಳಿತ ಮಂಡಳಿ ಎಂದರು.

ಕೃಷ್ಣನ ಆದರ್ಶ ಎಲ್ಲರ ಆದರ್ಶವಾಗಲಿ-ಜಯರಾಮ ಕೆದಿಲಾಯ
ಸಭಾಧ್ಯಕ್ಷತೆಯನ್ನು ವಹಿಸಿದ್ದ  ಸಂಸ್ಥೆಯ ಆಡಳಿತ ಅಧ್ಯಕ್ಷರಾದ ಶಿಬರ ಜಯರಾಮ ಕೆದಿಲಾಯ  ಅವರು ಮಾತನಾಡಿ,ಜಗತ್ತಿಗೆ ರಕ್ಷಣೆ ನೀಡಿದವ ಶ್ರೀ ಕೃಷ್ಣ. ಧರ್ಮರಾಜ್ಯವನ್ನಾಳುತ್ತಾ ಶ್ರೇಷ್ಟ ಸಂದೇಶ ನೀಡಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣನಿಗೆ ವಿದ್ಯಾರ್ಥಿಗಳು ನಿತ್ಯವೂ ಕೈಮುಗಿಯುತ್ತಾರೆ.ಇದರಿಂದಾಗಿ ಶ್ರೀ ಕೃಷ್ಣನ ಅನುಗ್ರಹ  ಎಲ್ಲಾ ವಿದ್ಯಾರ್ಥಿಗಳಿಗೂ ದೊರಕುತ್ತದೆ.ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಗಿಸುತ್ತಾ ,ದೇವರ ಅನುಗ್ರಹವಿದೆ ಎಂಬ ಧೈರ್ಯದಿಂದ ಪೂರ್ಣ ಪ್ರಯತ್ನವಿರಲಿ, ಕೃಷ್ಣನ ಆದರ್ಶ ಎಲ್ಲರ ಆದರ್ಶವಾಗಲಿ.ಎಲ್ಲರೂ ಸಾರ್ಥಕ್ಯ ಜೀವನ ನಡೆಸಬೇಕು ಎಂದರು.

ದಾನಿಗಳಿಗೆ ಗೌರವಾರ್ಪಣೆ
ಸಂಸ್ಥೆಗೆ 1ಲಕ್ಷ ರೂ ವೆಚ್ಚದಲ್ಲಿ ಕಂಪ್ಯೂಟರ್ ನೀಡಿದ ದಾನಿ ಶ್ರೀನಾಥ್ ಪರವಾಗಿ ಅವರ ಪತ್ನಿ ಭಾರತಿ ಶ್ರೀನಾಥ್ ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ,ಸಾಂದೀಪನಿ ಶಿಕ್ಷಣ ಸಂಸ್ಥೆಯ ಸಂಚಾಲಕ ಎಚ್.ಭಾಸ್ಕರ ಆಚಾರ್ ಹಿಂದಾರು, ಆಡಳಿತ ಮಂಡಳಿಯ ಸದಸ್ಯರಾದ ಎಸ್.ಜಿ.ಕೃಷ್ಣ, ಹರೀಶ್ ಪುತ್ತೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣಪ್ರಸಾದ್ ಕೆದಿಲಾಯ ಸ್ವಾಗತಿಸಿದರು.ಮುಖ್ಯಶಿಕ್ಷಕಿ ಜಯಮಾಲಾ ವಿ.ಎನ್ ಪ್ರಸ್ತಾವನೆಗೈದರು. ಶಿಕ್ಷಕಿ ಪ್ರಮೀಳಾ  ವಂದಿಸಿದರು.ಶಿಕ್ಷಕ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಕೃಷ್ಣ ಲೀಲೋತ್ಸವ
ಸಭಾ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳಿಂದ ಶ್ರೀಕೃಷ್ಣನ ಮೂರ್ತಿಯೊಂದಿಗೆ ಮೆರವಣಿಗೆ, ಮೆರವಣಿಯಲ್ಲಿ ವಿದ್ಯಾರ್ಥಿಗಳ ಭಜನೆ ಮೆರವಣಿಗೆಗೆ ಮೆರುಗು ನೀಡಿತು.

ಭಗವದ್ಗೀತೆ ಪಠಣ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ ನಡೆಯಿತು.ಆ.27ರಂದು ಹುಟ್ಟು ಹಬ್ಬ  ಆಚರಿಸುವ ಮಕ್ಕಳಿಗೆ ಉಡುಗೊರೆ ನೀಡಿ ಅಭಿನಂದಿಸಲಾಯಿತು.

ಕೃಷ್ಣ ರಾಧಾ ವೇಷಧಾರಿ ಪುಟಾಣಿಗಳ ಕಲರವ,
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದೆಡೆಗಳ ಪುಟಾಣಿ ಕೃಷ್ಣ ರಾಧಾ ವೇಷಧಾರಿಗಳು,ಸಂಸ್ಥೆಯ ಪುಟಾಣಿಗಳು ಪಾಲ್ಗೊಂಡಿದ್ದರು. ಎಲ್ಲಾ ವೇಷಧಾರಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಎಲ್ಲೆಡೆ ಕೃಷ್ಣ ಒಟ್ಟಿನಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ನಂದಗೋಕುಲವಾಗಿ ಎಲ್ಲೆಡೆ ಕೃಷ್ಣ ನಾಮ ಸ್ಮರಣೆಯೇ ಕೇಳಿಬರುತ್ತಿತ್ತು.

ಕೃಷ್ಣ ರಾಧಾ ವೇಷಧಾರಿ ಪುಟಾಣಿಗಳ ಕಲರವ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಏರ್ಪಡಿಸಲಾದ ವಿವಿಧ ಕ್ರೀಡಾಕೂಟಗಳು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಮೆರುಗು ಪಡೆಯಿತು.

ಮೆರವಣಿಗೆಯ ಬಳಿಕ ವಿದ್ಯಾರ್ಥಿಗಳಿಂದ ಬಯಲು ರಂಗಮಂದಿರದಲ್ಲಿ ಶ್ರೀಕೃಷ್ಣ ಸ್ತುತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. 

LEAVE A REPLY

Please enter your comment!
Please enter your name here