ಕುಂತೂರು ಶಾಲೆ: ಐದೇ ವರ್ಷದಲ್ಲಿ ಬಿರುಕುಬಿಟ್ಟ ಗೋಡೆ-ನಿರುಪಯುಕ್ತವಾಗಿರುವ ಮುಖ್ಯಶಿಕ್ಷಕರ ಕೊಠಡಿ

0

ಪುತ್ತೂರು: ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ಸರ್ವಶಿಕ್ಷಣ ಅಭಿಯಾನದಡಿ 2011-12ನೇ ಸಾಲಿನಲ್ಲಿ 4.46 ಲಕ್ಷ ರೂ.ಸರಕಾರದ ಅನುದಾನ ಹಾಗೂ ದಾನಿಯೊಬ್ಬರ ರೂ.75 ಸಾವಿರ ದೇಣಿಗೆ ಸೇರಿ ಮುಖ್ಯಶಿಕ್ಷಕರ ಕೊಠಡಿ ನಿರ್ಮಾಣಗೊಂಡಿದೆ. ಆದರೆ ಈ ಕಟ್ಟಡದ ಗೋಡೆ ಐದೇ ವರ್ಷದಲ್ಲಿ ಬಿರುಕು ಬಿಟ್ಟಿದ್ದು ಈಗ ಬಾಗಿಲುಮುಚ್ಚಿ ನಿರುಪಯುಕ್ತವಾಗಿದೆ.


2011-12ನೇ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನದಡಿ ಮುಖ್ಯಶಿಕ್ಷಕರ ಕೊಠಡಿ ನಿರ್ಮಾಣಗೊಂಡು 17-9-2012ರಂದು ಉದ್ಘಾಟನೆಗೊಂಡಿತ್ತು. 2012-13ನೇ ಸಾಲಿನಲ್ಲಿ ಇದನ್ನು ಕಂಪ್ಯೂಟರ್ ಆಧಾರಿತ ಕಲಿಕಾ ಕೇಂದ್ರವಾಗಿಯೂ ಮಾಡಲಾಗಿತ್ತು. ಆದರೆ ಐದೇ ವರ್ಷದಲ್ಲಿ ಈ ಕಟ್ಟಡದ ಗೋಡೆ, ಅಡಿಪಾಯದಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಈ ಕಟ್ಟಡಕ್ಕೆ ಐದಾರು ವರ್ಷಗಳಿಂದ ಬಾಗಿಲು ಹಾಕಿ ಮುಚ್ಚಲಾಗಿದೆ.


ಕಟ್ಟಡ ತೆರವಿಗೆ ನಿರ್ಧಾರ:
ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸುವ ಸಂದರ್ಭ ಈ ಕಟ್ಟಡವನ್ನೂ ತೆರವುಗೊಳಿಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಇಒ ಲೋಕೇಶ್ ಎಸ್.ಆರ್.ಅವರು ಪೋಷಕರಿಗೆ ತಿಳಿಸಿದರು. ಐದೇ ವರ್ಷದಲ್ಲಿ ಕಾಂಕ್ರೀಟ್ ಕಟ್ಟಡವನ್ನೂ ತೆರವುಗೊಳಿಸಬೇಕಾಗಿ ಬಂದಿರುವುದು ಹಣ ಪೋಳಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಒಟ್ಟಿನಲ್ಲಿ ಕಳಪೆ ಕಾಮಗಾರಿಯಿಂದಾಗಿ ಸರಕಾರ ಜನರ ತೆರಿಗೆಯಿಂದ ನೀಡಿದ 4.46 ಲಕ್ಷ ರೂ.ಅನುದಾನ ಇಲ್ಲಿ ವ್ಯರ್ಥವಾಗಿದೆ. ಕಾಂಕ್ರಿಟ್ ಕಟ್ಟಡವೊಂದು ಐದೇ ವರ್ಷದಲ್ಲಿ ನಿರುಪಯುಕ್ತವಾಗಿ ಬಾಗಿಲು ಮುಚ್ಚಿಕೊಂಡಿರುವುದಕ್ಕೆ ಯಾರು ಹೊಣೆ ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದು ಇದಕ್ಕೆ ಅಧಿಕಾರಿಗಳು, ಗುತ್ತಿಗೆದಾರರು ಉತ್ತರಿಸಬೇಕಾಗಿದೆ. ಶಾಸಕರ ಭೇಟಿಯ ಸಂದರ್ಭದಲ್ಲಿ ಈ ವಿಚಾರವನ್ನೂ ಪ್ರಸ್ತಾಪಿಸಿದ ಪೋಷಕರು ಕಳಪೆ ಕಾಮಗಾರಿಗೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here