ಶುದ್ಧ ನೀರಿನ ಹಕ್ಕುದಾರರಿಗೆ ಕಲುಷಿತ ನೀರ‍್ಯಾಕೆ?-ಗ್ರಾಮಸ್ಥರ ಪ್ರಶ್ನೆ
ಉಪ್ಪಿನಂಗಡಿ: ಪುತ್ತೂರು ನಗರಸಭೆಗೆ ಹೋಗುವ ಶುದ್ಧೀಕರಣಗೊಂಡ ನೀರನ್ನು ಪಡೆಯಲು 34 ನೆಕ್ಕಿಲಾಡಿ ಗ್ರಾಮಸ್ಥರು ಹಕ್ಕುದಾರರಾಗಿರುವುದರಿಂದ ಅದನ್ನು ಪಡೆಯಲು ಮುಂದಾಗುವ ಬದಲು ಕೊಳವೆ ಬಾವಿ ಕೊರೆಸಿ ಗ್ರಾಮಸ್ಥರಿಗೆ ಗ್ರಾ.ಪಂ. ಕಲುಷಿತ ನೀರನ್ನು ಕೊಡುವುದಾದರೂ ಯಾಕೆ ಎಂಬ ಪ್ರಶ್ನೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನ ಜಮಾಬಂದಿ ಸಭೆಯಲ್ಲಿ ಕೇಳಿ ಬಂತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ಆ.29ರಂದು ನಡೆದ ಗ್ರಾ.ಪಂ.ನ ಜಮಾಬಂಧಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಅಸ್ಕರ್ ಅಲಿ, ಕುಮಾರಧಾರ ನದಿಯ ನೀರನ್ನು ನೆಕ್ಕಿಲಾಡಿಯಲ್ಲಿರುವ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಪುತ್ತೂರು ನಗರ ಸಭೆಗೆ ಸರಬರಾಜು ಮಾಡಲಾಗುತ್ತದೆ. ಆದರೆ 34 ನೆಕ್ಕಿಲಾಡಿಯಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ಇಲ್ಲಿನ ಕೊಳವೆ ಬಾವಿಯ ನೀರಿನಲ್ಲಿ ಕಬ್ಬಿಣ್ಣಾಂಶ ಜಾಸ್ತಿಯಿರುವ ಬಗ್ಗೆ ಪ್ರಯೋಗಾಲಯದ ವರದಿ ತಿಳಿಸಿದೆ. ಪುತ್ತೂರು ನಗರಸಭೆಗೆ ಶುದ್ಧ ಕುಡಿಯುವ ನೀರು ನಮ್ಮ ಗ್ರಾಮದಿಂದ ಹೋಗುವುದರಿಂದ ಅದೇ ನೀರನ್ನು ಪಡೆಯುವ ಹಕ್ಕು ನಮ್ಮ ಗ್ರಾಮಕ್ಕೆ ಇದೆ. ಪುತ್ತೂರಿಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರನ್ನು ನಮ್ಮ ಗ್ರಾಮಕ್ಕೂ ಬೇಕೆಂದು ಈ ಹಿಂದೆ ಮುಹಮ್ಮದ್ ರಫೀಕ್ ಅನ್ನುವವರು ಜನತಾ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಅವರ ಪರವಾಗಿ ತೀರ್ಪು ಬಂದಿದ್ದು, ಆಗ ಪುರಸಭೆಯಾಗಿದ್ದ ಪುತ್ತೂರು ನಗರಸಭೆಯವರು ಇಲ್ಲಿನ ಎರಡನೇ ಹಂತದ ಕಾಮಗಾರಿಯ ವೇಳೆ ನೆಕ್ಕಿಲಾಡಿ ಗ್ರಾಮಕ್ಕೆ ಕುಡಿಯುವ ನೀರು ನೀಡುವುದಾಗಿ ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ್ದರು. ಆದರೆ ಈವರೆಗೆ ಈ ಕೆಲಸ ಕಾರ್ಯಗತವಾಗಿಲ್ಲ. ಈ ನಡುವೆ ಬಹುಗ್ರಾಮ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ನೆಕ್ಕಿಲಾಡಿಗೆ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಸೌಲಭ್ಯ ಇರುವುದರಿಂದ ಪುತ್ತೂರು ನಗರದಲ್ಲಿ ಅನುಷ್ಠಾನವಾಗುತ್ತಿರುವ ಜಲಸಿರಿ ಯೋಜನೆಯಡಿ ನೀರು ಪೂರೈಕೆಯ ಅವಶ್ಯಕತೆ ಇರುವುದಿಲ್ಲ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಕೆಯುಐಡಿಎಫ್‌ಸಿ ಇಲಾಖೆಯಲ್ಲಿ ಈ ಬೇಡಿಕೆಯನ್ನು ಪರಿಗಣಿಸಿಲ್ಲ. ಗ್ರಾ.ಪಂ. ಯಾಕೆ ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಬೇಕೆಂದು ಬೇಡಿಕೆ ಮಂಡಿಸಿಲ್ಲ ಎಂದು ಪ್ರಶ್ನಿಸಿದರು.
ಗ್ರಾಮಸ್ಥ ಮುಹಮ್ಮದ್ ರಫೀಕ್ ಮಾತನಾಡಿ, ಇಲ್ಲಿಗೆ ಪುತ್ತೂರು ನಗರ ಸಭೆಗೆ ಪೂರೈಕೆಯಾಗುತ್ತಿರುವ ಶುದ್ಧ ಕುಡಿಯುವ ನೀರು ಬೇಡ ಅಂತ ಈ ಹಿಂದಿನ ಅಧ್ಯಕ್ಷರು ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಇನ್ನು ಇದರ ಬಗ್ಗೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು. ಅದಕ್ಕೆ ಪೂರಕವಾಗಿ ಅಸ್ಕರ್ ಅಲಿ ಮಾತನಾಡಿ, ನಗರಸಭೆಯ ಕುಡಿಯುವ ನೀರು ಬೇಡ ಅಂತ ಗ್ರಾ.ಪಂ. ತಿಳಿಸದಿದ್ದರೆ, ಅಧಿಕಾರಿಗಳು ಆ ತೀರ್ಮಾನ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದರು. ಅದಕ್ಕುತ್ತರಿಸಿದ ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ ಡಿ., ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಅಸ್ಕರ್ ಅಲಿ ಮಾತನಾಡಿ, ನಗರ ಸಭೆಗೆ ಸರಬರಾಜಾಗುತ್ತಿರುವ ಶುದ್ಧ ಕುಡಿಯುವ ನೀರು ನಮ್ಮ ಗ್ರಾಮಕ್ಕೂ ಅತೀ ಅವಶ್ಯವಾಗಿ ಬೇಕು. ಈ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸಲು ಗ್ರಾಮಸ್ಥರ ಸಭೆ ಕರೆಯಿರಿ ಎಂದು ಆಗ್ರಹಿಸಿದರು. ಈ ಬಗ್ಗೆ ಸಭೆ ನಡೆಸುವುದಾಗಿ ಅಧ್ಯಕ್ಷೆ ಸುಜಾತ ಆರ್ ರೈ ಯವರು ತಿಳಿಸಿದರು. ಈ ಸಂದರ್ಭ ಕಲುಷಿತ ನೀರಿನ ಬಗ್ಗೆ ಪ್ರಯೋಗಾಲಯದಿಂದ ಬಂದ ವರದಿಯನ್ನು ಗ್ರಾಮಸ್ಥ ಶಬೀರ್ ಅಹಮ್ಮದ್ ನೀಡಿದರು.
ಗ್ರಾ.ಪಂ. ರಾಷ್ಟ್ರೀಯ ಹೆದ್ದಾರಿ ಮಾರ್ಜಿನ್‌ನಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿದೆ. ಗ್ರಾಮಸ್ಥರೇನಾದರೂ ಕಟ್ಟಡ ಕಟ್ಟಲು ಮುಂದಾದರೆ ರಸ್ತೆ ಮಾರ್ಜಿನ್ ಬಿಟ್ಟು ಕಟ್ಟಬೇಕೆಂದು ಹೇಳುವ ಗ್ರಾ.ಪಂ. ಇಲ್ಲಿ ಯಾಕೆ ಕಟ್ಟಡವನ್ನು ರಸ್ತೆ ಮಾರ್ಜಿನ್‌ನಲ್ಲಿ ನಿರ್ಮಿಸಿದೆ ಎಂದು ಗ್ರಾಮಸ್ಥ ಕಲಂದರ್ ಶಾಫಿ ತಿಳಿಸಿದರು. ಗ್ರಾಮಸ್ಥೆ ಅನಿ ಮಿನೇಜಸ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯವರು ಆ ಜಾಗವನ್ನು ಬಿಟ್ಟುಕೊಡಿ ಎಂದರೆ ನಾವು ಬಿಟ್ಟು ಕೊಡಲೇ ಬೇಕಲ್ಲವೇ. ಆಗ ಗ್ರಾ.ಪಂ.ಗೆ ನಷ್ಟವಲ್ಲವೇ? ಗ್ರಾ.ಪಂ. ಆವರಣದಲ್ಲಿ ಉತ್ತಮವಾಗಿಯೇ ಇದ್ದ ಕಟ್ಟಡವನ್ನು ಹೊಸ ಕಟ್ಟಡ ನಿರ್ಮಾಣ ಮಾಡುತ್ತೇವೆಂದು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಲ್ಲಿ ಗುದ್ದಲಿ ಪೂಜೆಯನ್ನು ನಡೆಸಲಾಗಿದೆ. ಆದರೆ ಈಗ ಅಲ್ಲಿ ಕಟ್ಟಡ ನಿರ್ಮಾಣದ ವಿಷಯದ ಬಗ್ಗೆ ಮಾತ್ರ ಗ್ರಾ.ಪಂ. ಮಾತನಾಡುತ್ತಿಲ್ಲ ಎಂದರು. ಪಿಡಿಒ ಸತೀಶ್ ಬಂಗೇರ ಡಿ. ಮಾತನಾಡಿ, ಸಂತೆಕಟ್ಟೆಯಲ್ಲಿ ಕಟ್ಟಡ ಕಟ್ಟಿರುವ ಜಾಗ ಆಗ ರಾಷ್ಟ್ರೀಯ ಹೆದ್ದಾರಿಯ ಮಾರ್ಜಿನ್ ಆಗಿರಲಿಲ್ಲ. ಆದರೆ ಈಗ ಚತುಷ್ಪಥ ಕಾಮಗಾರಿಯಿಂದಾಗಿ ಅದು ರಾಷ್ಟ್ರೀಯ ಹೆದ್ದಾರಿ ಮಾರ್ಜಿನ್ ಬರುತ್ತಿದೆ ಎಂದರು. ಅದಕ್ಕೆ ಅಸ್ಕರ್ ಅಲಿ ಮಾತನಾಡಿ, ನಿಮ್ಮ ಈ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಸಂತೆಕಟ್ಟೆಯ ಜಾಗ ಈ ಹಿಂದೆಯೇ ಚುತುಷ್ಪಥ ಹೆದ್ದಾರಿ ಕಾಮಗಾರಿಗಾರಿ ಹೆದ್ದಾರಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದೆ. ಅದಕ್ಕೆ ಹಣ ಕೂಡಾ ಗ್ರಾ.ಪಂ.ಗೆ ಸಿಕ್ಕಿದೆ. ಹೆದ್ದಾರಿಗೆ ವಶವಾದ ಜಾಗದಲ್ಲಿದ್ದ ಕಟ್ಟಡಗಳನ್ನು ಕೆಡವಿದಲ್ಲೇ ಈಗ ಮತ್ತೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಗ್ರಾಮಸ್ಥ ಜೆರಾಲ್ಡ್ ಮಸ್ಕರ‍್ಹೇನಸ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಬೇಕು. ತೆರಿಗೆ ಪರಿಷ್ಕರಣೆ ಎಂದರೆ ತೆರಿಗೆ ಜಾಸ್ತಿ ಮಾಡೋದು ಅಲ್ಲ. ಎಲ್ಲಾ ಕಟ್ಟಡಗಳನ್ನು ಅಳತೆ ಮಾಡಿ ತೆರಿಗೆಯನ್ನು ಹಾಕಬೇಕು. ಇಲ್ಲಿ ಕೆಲವು ಹಿಂದಿನ ಮನೆಗಳು ದೊಡ್ಡದಾಗಿದ್ದರೂ, ಅದಕ್ಕೆ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ಆದರೆ ಹೊಸ ಮನೆಗೆ ಈಗಿನ ತೆರಿಗೆ ವಿಧಿಸಲಾಗುತ್ತಿದೆ. ಒಂದೋ ಎಲ್ಲಾ ಮನೆಗಳನ್ನು ಅಳತೆ ಮಾಡಿ ಒಂದೇ ಸಮಾನಾಗಿ ತೆರಿಗೆ ವಿಧಿಸಿ. ಇಲ್ಲದಿದ್ದಲ್ಲಿ ಹೊಸ ಮನೆಗಳಿಗೂ ಕಡಿಮೆ ತೆರಿಗೆ ವಿಧಿಸಿ ಎಂದರು. ಆಗ ಅಧ್ಯಕ್ಷೆ ಸುಜಾತ ಆರ್. ರೈ ಮಾತನಾಡಿ, ತೆರಿಗೆ ಪರಿಷ್ಕರಣೆಗೆ ಗ್ರಾಮಸ್ಥರ ಆಕ್ಷೇಪವಿದೆ ಎಂದರು. ಕಲಂದರ್ ಶಾಫಿ ಮಾತನಾಡಿ, ಎಲ್ಲಾ ಮನೆಗಳನ್ನು ಅಳತೆ ಮಾಡಿ ತೆರಿಗೆ ವಿಧಿಸಿದರೆ, 150-200 ರೂ. ತೆರಿಗೆ ಕಟ್ಟುತ್ತಿರುವವರು ನಂತರ 1000- 1200 ತೆರಿಗೆ ಕಟ್ಟಬೇಕಾಗುತ್ತದೆ. ಅದಕ್ಕೆ ನಾವು ಆಕ್ಷೇಪ ಮಾಡುವುದು ಎಂದರು. ಮುಹಮ್ಮದ್ ರಫೀಕ್ ಮಾತನಾಡಿ, ನನಗೊಂದು ಇಂಡಸ್ಟ್ರಿಯಿದ್ದು, ಕಳೆದ 42 ವರ್ಷಗಳಿಂದ ನಾನು ಅದರ ಪರವಾನಿಗೆ ನವೀಕರಣ ಮಾಡಿಕೊಂಡು ಬರುತ್ತಿದ್ದೇನೆ. ಆದರೆ ಈಗ ಎಲ್ಲಾ ದಾಖಲೆ ನೀಡದೇ ನವೀಕರಣ ಸಾಧ್ಯವಿಲ್ಲ ಎಂದು ಪಿಡಿಒ ಹೇಳುತ್ತಾರೆ. ಮೂಲ ದಾಖಲೆಗಳನ್ನು ಒಮ್ಮೆ ಸಲ್ಲಿಸಿದರೆ ಸಾಕಲ್ಲವೇ? ಪ್ರತಿ ವರ್ಷ ಅದರ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಆಗ ಪಿಡಿಒ ಮಾತನಾಡಿ, ಈಗ ಗ್ರಾ.ಪಂ.ನ ಕಾರ್ಯಗಳು ಕಂಪ್ಯೂಟರೀಕರಣಗೊಂಡಿರುವುದರಿಂದ ಎಲ್ಲಾ ದಾಖಲೆಯನ್ನು ಅದು ಕೇಳುತ್ತದೆ ಎಂದರು. ಆಗ ಅಸ್ಕರ್ ಅಲಿ ಮಾತನಾಡಿ, ವ್ಯವಸ್ಥೆ ಕಂಪ್ಯೂಟರೀಕರಣಗೊಂಡಿದ್ದರೂ, ಎಲ್ಲಾ ದಾಖಲೆಗಳನ್ನು ನೀಡದೇ ಪೌತಿಯಲ್ಲಿ ಮಾಡುವ ಅವಕಾಶವಿದೆಯಲ್ಲವೇ ಎಂದು ಪ್ರಶ್ನಿಸಿದರು. ಆಗ ಮುಹಮ್ಮದ್ ರಫೀಕ್ ಅವರು ಮಾತನಾಡಿ, ಅದು ಅವಕಾಶವಿದ್ದರೂ ಪಿಡಿಒ ಮಾತ್ರ ಮಾಡುತ್ತಿಲ್ಲ ಎಂದರು.
ಸಭೆಯ ಕೊನೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಮಾತನಾಡಿ, ಇಲ್ಲಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಜಮಾಬಂಧಿ ಅಧಿಕಾರಿಯಾಗಿದ್ದ ಪುತ್ತೂರು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ ಮಾತನಾಡಿ, ಜಮಾಬಂಧಿ ಸಭೆಯಲ್ಲಿ ಕಾಮಗಾರಿಗಳ ವಿಚಾರವಾಗಿ ಚರ್ಚೆ ನಡೆಯಬೇಕಿತ್ತು. ಆದರೆ ಇಲ್ಲಿ ಇನ್ನಿತರ ಸಮಸ್ಯೆಗಳ ಚರ್ಚೆ ನಡೆದಿದೆ. ಬೀದಿ ನಾಯಿಗಳ ಹಾವಳಿ ಈಗ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಸಂತಾನಹರಣ ಮಾತ್ರ ಮಾಡಬೇಕು. ಅದು ಕೂಡಾ ಯಾವ ಸ್ಥಳದಿಂದ ನಾಯಿಗಳನ್ನು ಹಿಡಿದುಕೊಂಡು ಹೋಗಲಾಗಿದೆ. ಸಂತಾನ ಹರಣ ಚಿಕಿತ್ಸೆ ನಡೆಸಿ ಮೂರು ದಿನಗಳ ಕಾಲ ನಿಗಾದಲ್ಲಿಟ್ಟು, ಅವುಗಳನ್ನು ಅದೇ ಸ್ಥಳಕ್ಕೆ ತಂದು ಬಿಡಬೇಕು. ಸಂತಾನ ಹರಣ ಚಿಕಿತ್ಸೆ ಪುತ್ತೂರು ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ಕಟ್ಟಡದ ಅವಶ್ಯಕತೆ ಇದೆ. ಆದ್ದರಿಂದ ಇಲ್ಲಿ ಗ್ರಾ.ಪಂ. ನಿಧಿಯಿಂದ ಅದಕ್ಕೊಂದು ಆಸ್ಪತ್ರೆ ನಿರ್ಮಿಸಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ವಿಜಯಕುಮಾರ್, ಗೀತಾ, ವೇದಾವತಿ, ಗ್ರಾಮಸ್ಥರಾದ ಶಬೀರ್ ಅಹಮ್ಮದ್, ಹಮೀದ್ ಪಿ.ಟಿ., ಫಯಾಜ್, ಅಮಿತಾ ಹರೀಶ್, ಪಾವನಾ, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಸದಸ್ಯರು ಯಾಕೆ ಗೈರು?
ಜಮಾಬಂಧಿ ಸಭೆಯ ಬಗ್ಗೆ ಗ್ರಾ.ಪಂ. ಸದಸ್ಯರಿಗೆ ಮಾಹಿತಿ ಇರಲಿಲ್ಲವೇ? ಇಲ್ಲಿ ಬೆರಳೆಣಿಕೆಯ ಸದಸ್ಯರು ಮಾತ್ರ ಇದ್ದು, ಉಳಿದವರು ಗೈರು ಹಾಜರಾಗಿದ್ದಾರೆ ಅದ್ಯಾಕೆ ಎಂದು ಕಲಂದರ್ ಶಾಫಿ ಪ್ರಶ್ನಿಸಿದರು. ಅದಕ್ಕೆ ಪಿಡಿಒ ಅವರು ಎಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದರು. ಅನಿ ಮಿನೇಜಸ್ ಮಾತನಾಡಿ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಉಪಸ್ಥಿತಿ ಇರುತ್ತದೆ. ಆದರೆ ಜಮಾಬಂಧಿ ಸಭೆಗೆ ಯಾಕಿಲ್ಲ ಎಂದು ಪ್ರಶ್ನಿಸಿದರು. ಆಗ ಈ ಸಭೆಗೆ ಬಂದರೆ ಗ್ರಾಮಸ್ಥರ ಪ್ರಶ್ನೆಗೆ ಉತ್ತರ ಕೊಡಬೇಕಲ್ಲ ಎಂದು ಕಲಂದರ್ ಶಾಫಿ ಹೇಳಿದರೆ, ಸಾಮಾನ್ಯ ಸಭೆಯಲ್ಲಿ ಅವರವರೇ ಚರ್ಚೆ ಮಾಡುವುದಲ್ಲ ಎಂದು ಫಯಾಜ್ ಹೇಳಿದರು. ಆಗ ಅಲ್ಲಿದ್ದ ಸದಸ್ಯರೋರ್ವರು ಓರ್ವ ಸದಸ್ಯರು ಮಾತ್ರ ಅವರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಗೈರು ಹಾಜರಿಯಾಗಿದ್ದಾರೆ ಎಂದರು.