ತಾ|ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ – ಸಂಘದಿಂದ ಸೇವಾ ಚಟುವಟಿಕೆಗಳು ಸಮಾಜಕ್ಕೆ ಕೊಡುಗೆ ಶ್ಲಾಘನೀಯ-ರಾಜಾರಾಂ ಬಿ

0

ಪುತ್ತೂರು: ಸರಕಾರಿ ನೌಕರರ ಸಂಘವು ಸಂಘದಲ್ಲಿನ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿರುವುದು ಮತ್ತು ಸರಕಾರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸರಕಾರಿ ನೌಕರರನ್ನು ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಸಮಾಜಕ್ಕೆ, ಹೆತ್ತವರಿಗೆ ಕೀರ್ತಿಯನ್ನು ತರುವಂತಾಗಲಿ ಜೊತೆಗೆ ಪುತ್ತೂರು ಸರಕಾರಿ ನೌಕರರ ಸಂಘವು ತನ್ನ ಸೇವಾ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್ ಬಿ.ರವರು ಹೇಳಿದರು.

ಆ.30ರಂದು ಸರಕಾರಿ ನೌಕರರ ಸಂಘದ ಮೇರಿ ದೇವಾಸಿಯಾ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಎಸೆಸ್ಸೆಲ್ಸಿ, ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಏಳನೇ ವೇತನ ಆಗುವಲ್ಲಿ ಸಂಘ ಹೋರಾಟ ಸ್ಮರಿಸಬೇಕಾಗಿದೆ-ಡಾ.ಪ್ರಸನ್ನ ಹೆಬ್ಬಾರ್:
ಕೊೖಲ ಜಾನುವಾರು ತಳಿ ಸಂವರ್ಧನ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಮಾತನಾಡಿ, ಪುತ್ತೂರಿನ ಹೃದಯಭಾಗದಲ್ಲಿ ಸರಕಾರಿ ನೌಕರರ ಸಂಘದ ಸುಂದರ ಕಟ್ಟಡ ನೆಲೆನಿಂತಿರುವುದರ ಹಿಂದೆ ಹಿಂದಿನ ಅಧ್ಯಕ್ಷರ, ಪದಾಧಿಕಾರಿಗಳ ನಿರಂತರ ಶ್ರಮವಿದೆ. ಸರಕಾರಿ ನೌಕರರ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅಭಿನಂದಿಸಿರುವುದು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಲಿಕೆಗೆ ಪ್ರೋತ್ಸಾಹ ನೀಡುವಂತಿದೆ. ಅಲ್ಲದೆ ನಿವೃತ್ತಗೊಂಡ ಈರ್ವರು ಸರಕಾರಿ ನೌಕರರನ್ನು ಸನ್ಮಾನಿಸಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿರುವುದು ಅಭಿನಂದನೀಯ. ಸರಕಾರಿ ನೌಕರರ ಬಹು ಬೇಡಿಕೆಯ ಏಳನೇ ವೇತನಕ್ಕೆ ಸರಕಾರ ಅಸ್ತು ನೀಡಿರುವುದರ ಹಿಂದೆ ಸಂಘದ ಹೋರಾಟವನ್ನು ನಾವು ಸ್ಮರಿಸಬೇಕಾಗಿದೆ ಎಂದರು.


ಸರಕಾರಿ ನೌಕರರ ಒತ್ತಡದೆಡೆಯಲ್ಲಿಯೂ ಸಂಘವು ಅಭಿವೃದ್ಧಿದೆಡೆಗೆ-ಕೃಷ್ಣಪ್ಪ ಕೆ:
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಕೆ ಮಾತನಾಡಿ, ಐವತ್ತು ವರುಷದ ಹಿಂದೆ ಹಿರಿಯ ಸರಕಾರಿ ನೌಕರ ಸದಸ್ಯರು ಸರಕಾರಿ ನೌಕರರ ಸಂಘದ ಹೆಸರಿನಲ್ಲಿ ಪುತ್ತೂರಿನ ಹೃದಯಭಾಗದಲ್ಲಿ 65 ಸೆಂಟ್ಸ್ ಜಾಗವನ್ನು ಮಾಡಿರುತ್ತಾರೆ. ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಈ ಭಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಪ್ರಸ್ತುತ ಇದನ್ನು ಇಂದಿನ ಅಧ್ಯಕ್ಷ ಶಿವಾನಂದ ಆಚಾರ್ಯರವರು ಸರ್ವರ ಒಗ್ಗೂಡುವಿಕೆಯಿಂದ ಮುನ್ನೆಡೆಸಿಕೊಂಡು ಹೋಗುತ್ತಿರುವುದು ಅಭಿನಂದನೀಯ. ಸರಕಾರಿ ನೌಕರರ ಒತ್ತಡದ ಎಡೆಯಲ್ಲಿಯೂ ಸಂಘವನ್ನು ಅಭಿವೃದ್ಧಿದೆಡೆಗೆ ಸಾಗಿಸುತ್ತಿರುವುದು ಶ್ಲಾಘನೀಯ ಎಂದರು.


ನಿಸ್ವಾರ್ಥತೆ, ವಿಶ್ವಾಸ, ಒಗ್ಗಟ್ಟಿನಿಂದ ಕೂಡಿದ ಸಮರ್ಥ ನಿರ್ದೇಶಕರನ್ನು ಆರಿಸಬೇಕಾಗಿದೆ-ಮೌರಿಸ್ ಮಸ್ಕರೇನ್ಹಸ್:
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ನಿಕಟಪೂರ್ವ ಅಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಅಧ್ಯಕ್ಷ ಶಿವಾನಂದ ಆಚಾರ್ಯರವರ ನೇತೃತ್ವದಲ್ಲಿ ಪ್ರಾಮಾಣಿಕವಾಗಿ, ಪಾರದರ್ಶಕತೆಯೊಂದಿಗೆ ಇದೀಗ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ಸಾಲಿನಲ್ಲಿ ಸಂಘಕ್ಕೆ ಚುನಾವಣೆ ನಡೆಯಲಿದ್ದು ಸಂಘವು ಮುನ್ನೆಡೆಯಬೇಕಾದರೆ ಪ್ರಸ್ತುತ ತಂಡದಂತೆ ನಿಸ್ವಾರ್ಥತೆ, ವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಕೂಡಿದ ಸಮರ್ಥ ನಿರ್ದೇಶಕರನ್ನು ಆರಿಸಬೇಕಾಗಿದೆ. ಸರಕಾರಿ ನೌಕರರ ಮೇಲೆ ಸಾರ್ವಜನಿಕರಿಗೆ ಒಳ್ಳೆಯ ಅಭಿಪ್ರಾಯ ಬರಬೇಕಾದರೆ ಸರಕಾರಿ ನೌಕರರು ಉತ್ತಮ ಕೆಸಲ ಮಾಡುವ ಮೂಲಕ ಜನಸ್ನೇಹಿ ನೌಕರರಾಗಿ ಹೊರಹೊಮ್ಮಬೇಕು ಎಂದರು.


ಪ್ರತಿಭಾ ಪುರಸ್ಕಾರ:
ಸಂಘದ ಸದಸ್ಯರಾಗಿದ್ದು, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಾದ ಅದಿತಿ ಆರ್ ರೈ, ದೈವಿಕ್ ಹೆಬ್ಬಾರ್, ಶಿಫಾಲಿ ರೈ, ಇಶಾ ಜಾರ್ಜ್, ಸುಹಾಸ್ ಎಂ, ಸೃಷ್ಟಿ ಎಸ್.ಪಿ, ಬಿ.ವಿ ವಿಧಿಷಾ, ಅಮೋಘಕೃಷ್ಣ ಕೆ, ಯಶಸ್ವಿ ಎಚ್.ಸುವರ್ಣ, ಪ್ರಕೃತಿ ವಿ.ರೈ, ಪೂರ್ಣೇಶ್ ವೈ.ರೈ, ಎರೋಳ್ ಶಮನ್ ಡಿ’ಸೋಜ, ಅದ್ವೈತ್ ಶೆಟ್ಟಿ ಕೆ, ಹರಿಣಿ ಗೌಡ, ಅಂಶಕಾ ಪಿ.ಜಿ, ವೃದ್ಧಿ ರೈ, ವೈಶಾಲಿ, ಪೂರ್ಣೇಶ್ ವೈ.ರೈ, ಪಿಯುಸಿ ಪರೀಕ್ಷೆಯಲ್ಲಿ ಧೃತಿ ಎಸ್, ತೃಷಾ, ಪ್ರಥಮ್ ಡಿ, ರಿಯೋರಾಮ್, ಇಶಿಕಾ, ಪವನ್ ಕುಮಾರ್ ಪಿ, ವರ್ಷಾ ದೈತೋಟ, ಕೆ.ಅರ್ಪಿತಾ ಶೇಟ್, ಕಾರ್ತಿಕ್ ರವರುಗಳನ್ನು ಅಭಿನಂದಿಸಲಾಯಿತು. ಶಿಕ್ಷಣ ಇಲಾಖೆಯ ಸ್ಮಿತಾಶ್ರೀ ಹಾಗೂ ಸಿಡಿಪಿಒ ಸುಜಾತಾರವರು ಪ್ರತಿಭಾನ್ವಿತರ ಹೆಸರನ್ನು ಓದಿದರು.

ಕು.ಹರಿಣಿ ಗೌಡ ಪ್ರಾರ್ಥಿಸಿದರು. ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ.ರವರು ಸ್ವಾಗತಿಸಿ, ಸಂಘದ ಜೊತೆ ಕೋಶಾಧಿಕಾರಿ ಕವಿತ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ. ವರದಿ ಹಾಗೂ ಕೋಶಾಧಿಕಾರಿ ಕೃಷ್ಣ ಬಿ., ಲೆಕ್ಕಪತ್ರ ಮಂಡಿಸಿದರು. ಸಂಘದ ಗೌರವಾಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷೆ ಪದ್ಮಾವತಿ ಎಂ.ಆರ್, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ಉಪಾಧ್ಯಕ್ಷ ವಿಜಯ ಕುಮಾರ್ ಕೆ., ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ರವಿಚಂದ್ರ ಯು.ರವರು ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಕ್ರೀಡಾ ಜೊತೆ ಕಾರ್ಯದರ್ಶಿ ವಿನೋದ್ ಕುಮಾರ್ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.

ಬೀಳ್ಕೋಡುಗೆ ಸನ್ಮಾನ..
ಈ ಸಂದರ್ಭದಲ್ಲಿ ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ಉಪಾಧ್ಯಕ್ಷ ಹೊನ್ನಪ್ಪ ಗೌಡ ಹಾಗೂ ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯ ಸದಸ್ಯ ಗಿರಿಧರ್ ಗೌಡರವರನ್ನು ಸನ್ಮಾನಿಸುವ ಮೂಲಕ ಬೀಳ್ಕೋಡುಗೆ ಸನ್ಮಾನ ಜರಗಿತು. ಸನ್ಮಾನ ಸ್ವೀಕರಿಸಿದ ಹೊನ್ನಪ್ಪ ಗೌಡರವರು ಅನಿಸಿಕೆ ವ್ಯಕ್ತಪಡಿಸಿದರು.

ಶೀಘ್ರವೇ ಸರಕಾರಿ ನೌಕರರ ಸಹಕಾರಿ ಸಂಘ ಆಸ್ತಿತ್ವಕ್ಕೆ..
ಸರಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಕ್ರೋಢೀಕರಣೆಯಲ್ಲಿ ಬೆನ್ನೆಲುಬಾಗಿ ನಿಂತದ್ದು ಪಿಡಬ್ಲ್ಯೂಡಿ ಇಲಾಖೆ. ಪಿಡಬ್ಲ್ಯೂಡಿ ಇಲಾಖೆಯ ಅಪೆಂಡಿಕ್ಸ್ ಇ ಮುಖೇನ ಸುಮಾರು ಒಂದು ಕೋಟಿ ಹಣವನ್ನು ಕಟ್ಟಡಕ್ಕೆ ವಿನಿಯೋಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಾದರೆ ಸ್ವಾರ್ಥರಹಿತ ತಂಡವನ್ನು ರಚಿಸಬೇಕಾಗಿದೆ. ಯಾಕೆಂದರೆ ಈ ಸಂಘವನ್ನು ಹುಟ್ಟು ಹಾಕಿ ಅದನ್ನು ಸಮರ್ಥವಾಗಿ ಮುನ್ನೆಡೆಸಿದ ಹಿರಿಯರ ಶ್ರಮವನ್ನು ನಾವು ಅರ್ಥೈಸಬೇಕಾಗಿದೆ. ಏಳನೇ ವೇತನ ಜಾರಿಯಾಗುವಲ್ಲಿ ಸರಕಾರಿ ನೌಕರರ ಸಂಘದ ಹೋರಾಟ ಯಶಸ್ವಿಯಾಗಿದ್ದು ಮುಂದೆ ಎನ್‌ಪಿಎಸ್ ಅನ್ನು ತೊಲಗಿಸುವುದೇ ನಮ್ಮ ಗುರಿಯಾಗಿದೆ. ಶೀಘ್ರವೇ ಪುತ್ತೂರು ಸರಕಾರಿ ನೌಕರರ ಸಹಕಾರಿ ಸಂಘ ಆಸ್ತಿತ್ವಕ್ಕೆ ಬರಲಿದೆ ಎಂದು ತಾಲೂಕು ಸರಕಾರಿ ನೌಕರರ ಸಂಘ ಅಧ್ಯಕ್ಷ ಶಿವಾನಂದ ಆಚಾರ್ಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here