ನಿವ್ವಳ ಲಾಭ ರೂ.1,37,756, ಶೇ.10 ಡಿವಿಡೆಂಡ್, ಲೀ.26 ಪೈಸೆ ಬೋನಸ್
ಪುತ್ತೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.31 ರಂದು ಮಾಡಾವುನಲ್ಲಿರುವ ಸಂಘದ ಕಛೇರಿಯ ವಠಾರದಲ್ಲಿ ಸಂಘದ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಭಾಸ್ಕರ ರೈ ಎಂ.ರವರು 2023-24 ನೇ ಸಾಲಿನ ವರದಿ ವಾಚನ ಮಾಡುತ್ತಾ, ವರದಿ ಸಾಲಿನಲ್ಲಿ 374 ಮಂದಿ ಸದಸ್ಯರಿದ್ದು ಸುಮಾರು 125 ಮಂದಿ ಸದಸ್ಯರು ಹಾಲು ಪೂರೈಸುತ್ತಿದ್ದಾರೆ. ರೂ.1,23,100 ಷೇರು ಬಂಡವಾಳ ಇದ್ದು ಸ್ವಂತ ಕಟ್ಟಡ ಹಾಗೂ 3 ಸಾವಿರ ಲೀಟರ್‌ನ ಎಎಂಸಿ ಸಾಂದ್ರಶೀಲೀಕರಣ ಘಟಕವನ್ನು ಹೊಂದಿದೆ. ಸಂಘವು ಸತತವಾಗಿ 10 ವರ್ಷಗಳಿಂದ ಎ ತರಗತಿ ಆಡಿಟ್ ವರ್ಗೀಕರಣ ಪಡೆದುಕೊಂಡಿದೆ. ಹಾಲು ಒಕ್ಕೂಟದ ಉತ್ತಮ ಸಂಘ ಪ್ರಶಸ್ತಿ ಹಾಗೂ ದ.ಕ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ 4 ವರ್ಷದಿಂದ ಸಾಧನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಂಘವು ವರದಿ ಸಾಲಿನಲ್ಲಿ ಒಟ್ಟು ರೂ.4 ಕೋಟಿ, 7 ಲಕ್ಷದ 68 ಸಾವಿರದ 281 ರೂಪಾಯಿಯ ವ್ಯವಹಾರ ನಡೆಸಿ ಹಾಲು ವ್ಯಾಪಾರ, ಪಶು ಆಹಾರ, ವ್ಯಪಾರ ಮತ್ತು ಇತರೇ ವ್ಯವಹಾರಗಳಿಂದ ಬ್ಯಾಂಕ್ ಬಡ್ಡಿ, ಬ್ಯಾಂಕ್ ಡಿವಿಡೆಂಡ್, ಒಕ್ಕೂಟದ ಡಿವಿಡೆಂಡ್ ಒಕ್ಕೂಟದ ಬೋನಸ್ಸು, ಪ್ರವೇಶ ಧನ ಇತ್ಯಾದಿಗಳಿಂದ ರೂ.9,85,027.71 ಪೈಸೆ ಆದಾಯ ಬಂದಿರುತ್ತದೆ ಎಂದು ತಿಳಿಸಿದರು. ಆಡಳಿತ ಮತ್ತು ಸಾದಿಲ್ವಾರು ಖರ್ಚು ಸೇರಿದಂತೆ ಎಲ್ಲಾ ಖರ್ಚುಗಳನ್ನು ಕಳೆದು ಸಂಘವು ಒಟ್ಟು ರೂ.1,37,756.55 ಪೈಸೆ ನಿವ್ವಳ ಲಾಭ ಗಳಿಸಿದೆ ಎಂದು ಕಾರ್ಯದರ್ಶಿ ಸಭೆಗೆ ತಿಳಿಸಿದರು.
ಸದಸ್ಯರ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಜಾನುವಾರು ವಿಮೆ ಮಾಡಿಸಲಾಗಿದ್ದು ಒಕ್ಕೂಟದ ಅನುದಾನದಲ್ಲಿ ಹಾಲು ಕರೆಯುವ ಯಂತ್ರ, ಗೋಬರ್ ಗ್ಯಾಸ್, ಹುಲ್ಲು ಕತ್ತರಿಸುವ ಯಂತ್ರ, ಮಿನಿ ಡೈರಿ ಯೋಜನೆ ಇತ್ಯಾದಿಗಳನ್ನು ಸದಸ್ಯರಿಗೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ದ.ಕ ಹಾಲು ಒಕ್ಕೂಟದ ಅನುದಾನವು ಹಲವು ಸದಸ್ಯರಿಗೆ ಲಭಿಸಿದ್ದು, ಕರು ಸಾಕಾಣಿಕಾ ಯೋಜನೆಯಲ್ಲಿ 58 ಸದಸ್ಯರ ಜಾನುವಾರುಗಳ ಹೆಣ್ಣು ಕರು ಸಾಕಾಣಿಕಾ ಯೋಜನೆಯಲ್ಲಿ ನೋಂದಾವಣೆ ಮಾಡಿಸಲಾಗಿದೆ ಎಂದರು. ಸಂಘದ ವತಿಯಿಂದ ಜಾನುವಾರು ಕೃತಕ ಗರ್ಭಧಾರಣೆ ಮತ್ತು ಹೆಣ್ಣು ಕರು ವೀರ್ಯನಳಿಕೆ ಸೌಲಭ್ಯವನ್ನು ರೈತರಿಗೆ ಒದಗಿಸಲಾಗಿದೆ ಹಾಗೇ ಪ್ರಸಕ್ತ ಸಾಲಿನಲ್ಲಿ ರೈತರ ಅನುಕೂಲಕ್ಕಾಗಿ ಕಣಿಯಾರು ಎಂಬಲ್ಲಿ ಹಾಲು ಖರೀದಿ ಕೇಂದ್ರವನ್ನು ತೆರೆಯಲಾಗಿದೆ ಎಂದು ಕಾರ್ಯದರ್ಶಿ ಭಾಸ್ಕರ ರೈ ಎಂ.ರವರ ತಮ್ಮ ವರದಿ ವಾಚನದಲ್ಲಿ ತಿಳಿಸಿದರು.
ಸಂಘದ ಅಧ್ಯಕ್ಷ ಎಸ್.ಬಿ.ಜಯರಾಮ ರೈಯವರು 2023-24 ನೇ ಸಾಲಿನ ಲಾಭಾಂಶ ವಿಂಗಡಣೆ ಮಾಡಿ ಒಟ್ಟು ಲಾಭ ರೂ.1,37,756.55 ಪೈಸೆ ಆಗಿದ್ದು ಇದರಲ್ಲಿ ಇತರ ನಿಧಿಗಳನ್ನು ಕಳೆದು ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಲೀಟರ್‌ಗೆ 26 ಪೈಸೆ ಬೋನಸ್ ನೀಡುವುದು ಎಂದು ಘೋಷಣೆ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಹೈನುಗಾರಿಕೆ ಕಷ್ಟದಾಯಕ ಅಂತ ಅನ್ನಿಸಿಕೊಳ್ಳಲು ಮುಖ್ಯ ಕಾರಣ ಇಲ್ಲಿ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದು ಆಗಿದೆ. ನಾವು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ನಾವು ಹೆಚ್ಚಾಗಿ ಪಶು ಆಹಾರವನ್ನೇ ಅವಲಂಭಿಸಿರುತ್ತದೆ. ಪಶು ಆಹಾರ ಬೇಕು ಆದರೆ ಅದರೊಟ್ಟಿಗೆ ಇತರ ಮಾರ್ಗಗಳನ್ನು ಕೂಡ ಕಂಡುಕೊಳ್ಳಬೇಕಾಗಿದೆ ಅದಕ್ಕಾಗಿಯೇ ಒಕ್ಕೂಟ ಗಿಣಿ ಹುಲ್ಲು ನಾಟಿ, ಜೋಳ ನಾಟಿ ಇತ್ಯಾದಿಗಳಿಗೆ ಪ್ರೋತ್ಸಾಹ ಕೊಡುತ್ತಿದೆ ಎಂದರು. ಮಂಡ್ಯ, ಹಾಸನದ ಕಡೆಯಲ್ಲಿ ಲೀಟರ್ ಹಾಲಿಗೆ 30 ರೂಪಾಯಿ ಆದರೆ ಆದರೆ ನಮ್ಮಲ್ಲಿ 35 ರೂಪಾಯಿ ಸಿಗುತ್ತದೆ ಆದರೂ ನಮಗೆ ಖರ್ಚನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣವೇ ಉತ್ಪಾದನಾ ವೆಚ್ಚದ ಹೆಚ್ಚಳ ಎಂದು ಅವರು ತಿಳಿಸಿದರು. ಇದಲ್ಲದೆ ಜಾನುವಾರು ಸಾಕಾಣಿಯ ಬಗ್ಗೆ, ಗರ್ಭಧಾರಣೆ ಬಗ್ಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿದರು.
ದ.ಕ ಹಾಲು ಒಕ್ಕೂಟದ ಪಶು ವೈದ್ಯರಾದ ಡಾ| ಅನುದೀಪ್‌ರವರು ಹೆಣ್ಣು ಕರು ಸಾಕಾಣಿಕಾ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ಸರಕಾರದ ಪ್ರೋತ್ಸಾಹ ಧನ ಸೇರಿದಂತೆ ರೈತರಿಗೆ ಕೇವಲ 100 ರೂಪಾಯಿಯಲ್ಲಿ ತಮ್ಮ ಜಾನುವಾರುಗಳಿಗೆ ಹೆಣ್ಣು ಕರು ಇಂಜೆಕ್ಷನ್ ಅನ್ನು ಹಾಕಿಸಿಕೊಳ್ಳಬಹುದಾಗಿದೆ ಒಂದು ವೇಳೆ ಹೆಣ್ಣು ಕರು ಜನಿಸದೆ ಇದ್ದರೆ ತಾವು ಕಟ್ಟಿದ ಹಣವನ್ನು ಮರಳಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಕಳೆದ ವರ್ಷ ಸುಮಾರು 58 ಕರುಗಳ ನೋಂದಾವಣೆ ಆಗಿದ್ದು ಈ ಕರುಗಳಿಗೆ ಉಚಿತವಾಗಿ ಔಷಧಿ ಹಾಗೂ ಪಶು ಆಹಾರವನ್ನು ನೀಡಲಾಗಿದೆ ಎಂದು ತಿಳಿಸಿದರು. ರೈತರು ತಮ್ಮ ಜಾನುವಾರುಗಳಿಗೆ ಒಕ್ಕೂಟದಿಂದ ವಿಮೆ ಮಾಡಿಸುವುದು ಅತೀ ಅಗತ್ಯವಾಗಿದ್ದು ಕೆಯ್ಯೂರು ಸಂಘವು ತಾಲೂಕಿನಲ್ಲೇ ಅತೀ ಹೆಚ್ಚು ವಿಮೆ ಮಾಡಿಸಿದ ಸಂಘವಾಗಿದೆ. ವಿಮೆ ಮಾಡಿಸಿದ ಜಾನುವಾರುಗಳ ಕಿವಿಯಲ್ಲಿ ಟ್ಯಾಗ್ ಇರಲೇಬೇಕು, ಇದು ಬಿದ್ದು ಹೋದರೆ ಬೇರೆ ಟ್ಯಾಗ್ ಮಾಡಿಸಿ ಹಾಕಿಸಿ, ಟ್ಯಾಗ್ ಕಿವಿಯಲ್ಲಿ ಇಲ್ಲದಿದ್ದರೆ ಯಾವುದೇ ಇನ್ಸೂರೆನ್ಸ್ ಕ್ಲೈಮ್ ಅಗುವುದು ಎಂದು ಸಲಹೆ ನೀಡಿದರು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿಯವರು ಹಾಲಿನ ಗುಣಮಟ್ಟ ಹೆಚ್ಚಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಬಹುಮಾನ ವಿತರಣೆ
ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಲೋಕನಾಥ ಪಕ್ಕಳ ನೂಜಿ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಶಶಿ ಎನ್.ಕಣಿಯಾರು ಹಾಗೂ ತೃತೀಯ ಬಹುಮಾನವನ್ನು ಎಸ್.ಬಿ.ಜಯರಾಮ ರೈ ಬಳಜ್ಜ ಪಡೆದುಕೊಂಡರು. ಉಳಿದಂತೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸದಸ್ಯರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುತ್ತೇವೆ, ನಿಮ್ಮೊಂದಿಗೆ ನಾವಿದ್ದೇವೆ: ಎಸ್.ಬಿ.ಜಯರಾಮ ರೈ
ಸಂಘದ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಎಸ್.ಬಿ.ಜಯರಾಮ ರೈ ಮಾತನಾಡಿ, ಒಂದು ಸಂಘ ಅಭಿವೃದ್ಧಿಯಾಗಬೇಕಾದರೆ ಆ ಸಂಘದಲ್ಲಿರುವ ಸದಸ್ಯರೇ ಮುಖ್ಯ ಕಾರಣೀಕರ್ತರು ಆದ್ದರಿಂದ ಸದಸ್ಯರ ಸಮಸ್ಯೆಗಳಿಗೆ ಅವರ ಬೇಕು ಬೇಡಗಳಿಗೆ ಸದಾ ಸ್ಪಂದನೆ ಕೊಡುವ ಕೆಲಸವನ್ನು ಒಕ್ಕೂಟ ಮಾಡುತ್ತಾ ಬಂದಿದೆ. ಮುಂದೆಯೂ ನಿಮ್ಮೊಂದಿಗೆ ನಾವಿದ್ದೇವೆ ಎಂದರು. ಒಕ್ಕೂಟದಲ್ಲಿ 745 ಸಂಘಗಳಿದ್ದು 211 ಮಹಿಳಾ ಸಂಘಗಳಿವೆ 160 ಎಎಂಸಿಗಳಿವೆ ಎಂದು ತಿಳಿಸಿದರು. ಈ ಹಿಂದೆ ಒಕ್ಕೂಟಕ್ಕೆ 5 ಲಕ್ಷದ 68 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದ್ದು ಪ್ರಸ್ತುತ 3 ಲಕ್ಷದ 26 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಸುಮಾರು 2 ಲಕ್ಷ ಲೀಟರ್ ಹಾಲು ಪೂರೈಕೆ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಹಾಲು ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು ಹಾಲಿನ ದರ ಕಡಿಮೆಯಾಗಿರುವುದು ಆಗಿದೆ. ಕನಿಷ್ಠ 50 ರೂಪಾಯಿ ಹಾಲಿನ ದರ ಆಗಬೇಕಾಗಿದೆ. ಈ ಬಗ್ಗೆ ಈಗಾಗಲೇ ಒಕ್ಕೂಟದಲ್ಲೂ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು. ಒಕ್ಕೂಟದಲ್ಲಿ ಸುಮಾರು 19 ಯೋಜನೆಗಳಿದ್ದು ಈಗಾಗಲೇ 21 ಕೋಟಿ ರೂ. ಅನುದಾನವನ್ನು ನೀಡಲಾಗಿದೆ, ಒಕ್ಕೂಟದಲ್ಲಿ ಉತ್ತಮ ಅಧಿಕಾರಿಗಳಿದ್ದು ಒಳ್ಳೆಯ ಸ್ಪಂದನೆ ನೀಡುತ್ತಿದ್ದಾರೆ ಎಂದರು. ಒಕ್ಕೂಟದಲ್ಲಿರುವ 160 ಬಿಎಂಸಿಗಳಲ್ಲಿ ಈಗಾಗಲೇ 40 ಬಿಎಂಸಿಗಳು ಮುಚ್ಚುವ ಹಂತದಲ್ಲಿವೆ ಇದನ್ನು ಮುಚ್ಚದಂತೆ ಮಾಡಬೇಕಾದರೆ ಹಾಲಿನ ಪೂರೈಕೆ ಜಾಸ್ತಿಯಾಗಬೇಕಾಗಿದೆ ಎಂದ ಅವರು, ಕೆಯ್ಯೂರು ಹಾಲು ಉತ್ಪಾದಕರ ಸಂಘದ ಬೆಳವಣಿಗೆಗೆ ಸಹಕರಿಸುತ್ತಿರುವ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ದೇವಿಕಾ ಎ.ಎಸ್, ಪದ್ಮನಾಭ ರೈ ಡಿ, ಕೆ.ಗುಡ್ಡಪ್ಪ ರೈ, ಈಶ್ವರಿ ಜೆ.ರೈ, ರಾಮಣ್ಣ ಗೌಡ, ಪದ್ಮನಾಭ ಪಿ.ಎಸ್, ಪ್ರವೀಣ ಕೆ, ರಘುಚಂದ್ರ ಪಿ.ಆರ್,ವಿನಯಚಂದ್ರ ಪಿ.ಕೆ, ಹರಿಣಾಕ್ಷಿ, ಮಾಜಿ ನಿರ್ದೇಶಕ, ಕೆದಂಬಾಡಿ ಕೆಯ್ಯೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ, ಮಾಜಿ ಕಾರ್ಯದರ್ಶಿ ಬಿ.ಚಂದ್ರಹಾಸ ರೈ ಬೊಳಿಕ್ಕಳಮಠ ಸ್ವಾಗತಿಸಿದರು. ಸಿಬ್ಬಂದಿ ಪದ್ಮಯ್ಯ ಪಿ.ಹಿಂದಿನ ಸಭೆಯ ನಡವಳಿಕೆಯನ್ನು ಓದಿದರು. ಸಂಘದ ಕಾರ್ಯದರ್ಶಿ ಭಾಸ್ಕರ ರೈ ಎಂ. ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಪದ್ಮಯ್ಯ ಪಿ., ಲಲಿತಾ ರೈ, ರೋಹಿತಾಕ್ಷ ರೈ, ಪ್ರಶಾಂತ್ ಕುಮಾರ್, ಗಂಗಾಧರ ಪೂಜಾರಿ ಸಹಕರಿಸಿದ್ದರು. ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾದ ಭಾಸ್ಕರ ರೈ ಇಳಂತಾಜೆರವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಅಪೂರ್ಣ ಸದಸ್ಯತ್ವ ಮತ್ತು ವ್ಯವಹಾರ ನಡೆಸದೇ ಇರುವ ಸದಸ್ಯರ ಷೇರು ಹಿಂತಿರುಗಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈ ಗೊಳ್ಳಲಾಯಿತು. 2024-25 ನೇ ಸಾಲಿನ ಯೋಜನೆಯಲ್ಲಿ ಪ್ರತಿ ಮನೆಗೆ ಅಭಿಯಾನ ನಡೆಸುವುದು ಈ ಅಭಿಯಾನದಲ್ಲಿ ಅಧಿಕಾರಿಗಳನ್ನು ಸೇರಿಸಿಕೊಂಡು ರೈತರಿಗೆ ಜಾನುವಾರು ಸಾಕಾಣಿಕೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಎಂದು ನಿರ್ಣಯಿಸಲಾಯಿತು.
ಗೌರವಾರ್ಪಣೆ
ಕಣಿಯಾರು ಭಾಗದಲ್ಲಿ ಹಾಲು ಖರೀದಿ ಕೇಂದ್ರ ತೆರೆಯಬೇಕು ಎಂಬ ಯೋಜನೆಯಲ್ಲಿರುವಾಗ ಕೇಂದ್ರಕ್ಕೆ ಬೇಕಾದ ಜಾಗ ಸೇರಿದಂತೆ ಕಟ್ಟಡದ ವ್ಯವಸ್ಥೆ, ವಿದ್ಯುತ್, ನೀರು ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುವ ಅಮ್ಮಿ ಪೂಜಾರಿ ಕಣಿಯಾರುರವರನ್ನು ಸಂಘದ ವತಿಯಿಂದ ಈ ಸಂದರ್ಭದಲ್ಲಿ ಶಾಲು ಹಾಕಿ, ಪೇಟಾ ತೊಡಿಸಿ, ಫಲಪುಷ್ಪಗಳನ್ನು ಕೊಟ್ಟು ಸನ್ಮಾನಿಸಿ ಗೌರವಿಸಲಾಯಿತು.
ಕಿವಿಯಲ್ಲಿ ಟ್ಯಾಗ್ ಇರಲಿ
ವಿಮೆ ಮಾಡಿಸಿದ ಜಾನುವಾರುಗಳ ಕಿವಿಯಲ್ಲಿ ಟ್ಯಾಗ್ ಇರಲೇ ಬೇಕು. ಒಂದು ವೇಳೆ ಜಾನುವಾರು ಮೃತಪಟ್ಟರೆ ಅದರ ಕಿವಿಯಲ್ಲಿ ಟ್ಯಾಗ್ ಇಲ್ಲದೆ ಇದ್ದರೆ ವಿಮೆ ಮಂಜೂರು ಆಗುವುದಿಲ್ಲ, ಟ್ಯಾಗ್ ಮನೆಯಲ್ಲಿ ಇಟ್ಟುಕೊಂಡಿದ್ದರೂ ವಿಮೆ ಮಂಜೂರು ಆಗುವುದಿಲ್ಲ ಅದು ಜಾನುವಾರುಗಳ ಕಿವಿಯಲ್ಲಿ ಇದ್ದರೆ ಮಾತ್ರ ವಿಮೆ ಮಂಜೂರು ಆಗುವುದು, ಟ್ಯಾಗ್ ಬಿದ್ದು ಹೋದರೆ ತಕ್ಷಣವೇ ಹೊಸ ಟ್ಯಾಗ್ ಮಾಡಿಸಿ ಜಾನುವಾರುಗಳ ಕಿವಿಗೆ ಹಾಕಿಸಿ ಎಂದು ಡಾ| ಅನುದೀಪ್ ತಿಳಿಸಿದರು.