ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ (VidyaRashmi First Grade COLLEGE) ಹೊಸದಾಗಿ ಪದವಿ ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಆ.31ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈ ಮಾತನಾಡಿ, ಹಳೆಯ ಮತ್ತು ಹೊಸ ವಿದ್ಯಾರ್ಥಿಗಳ ನಡುವೆ ಸೌಹಾರ್ದತೆಯನ್ನು ಏರ್ಪಡಿಸುವ ಕಾರ್ಯಕ್ರಮವಿದು. ವಿದ್ಯಾರ್ಥಿಗಳು, ಆಡಳಿತ ಮಂಡಳಿಯು ಒದಗಿಸಿಕೊಟ್ಟ ಸೌಲಭ್ಯಗಳನ್ನೆಲ್ಲ ಬಳಸಿಕೊಂಡು ಮುಂದಿನ ದಿನಗಳಲ್ಲಿ ಪೋಷಕರಿಗೆ ಹಾಗೂ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರುವ ಕೆಲಸವನ್ನು ಮಾಡುವಂತೆ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರು ಮಾತನಾಡಿ, ಕಳೆದು ಹೋದ ಸಮಯ ಮತ್ತೆ ಹಿಂದಿರುಗಲಾರದು. ಹಾಗಾಗಿ ಪದವಿ ಶಿಕ್ಷಣದ ಮೂರು ವರ್ಷಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾರಾಯಣ ಮೂರ್ತಿ ಕೆ ಮತ್ತು ಉಪಪ್ರಾಂಶುಪಾಲರಾದ ಶೇಷಗಿರಿ ಎಂ ಉಪಸ್ಥಿತರಿದ್ದರು. ಅಭಿಜ್ಞಾ ಮತ್ತು ಶ್ರಾವ್ಯವಾಣಿ ಪ್ರಾರ್ಥಿಸಿದರು.
ದ್ವಿತೀಯ ಬಿ.ಎ ಯ ಕಲ್ಪನಾ ಸ್ವಾಗತಿಸಿ ದ್ವಿತೀಯ ಬಿ.ಸಿ.ಎ ಯ ಪ್ರಸ್ತುತಿ ವಂದಿಸಿದರು. ದ್ವಿತೀಯ ಬಿ.ಕಾಂನ ಫಾತಿಮತ್ ಸಝಾನ ಕಾರ್ಯಕ್ರಮ ನಿರೂಪಿಸಿದರು.