ಕ್ಯಾಂಪ್ಕೋ 50ನೇ ವಾರ್ಷಿಕ ಮಹಾಸಭೆ

0

3,336.87 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ವಹಿವಾಟು ,  5.99 ಕೋಟಿ ರೂ. ನಿವ್ವಳ ಲಾಭ 

ಮಂಗಳೂರು: ಅಡಕೆ ಬೆಳೆಗಾರರ ಹೆಮ್ಮೆಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋ ಗೇರು ಬೀಜ ಖರೀದಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ ಹೇಳಿದರು.

ಮಂಗಳೂರು ಹೊರವಲಯದ ಅಡ್ಯಾರು ಗಾರ್ಡನ್ ನಲ್ಲಿ ಶನಿವಾರ ನಡೆದ ಕ್ಯಾಂಪ್ಕೋ(ಕೇಂದ್ರ ಅಡಕೆ ಮತ್ತು ಕೋಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ನಿಯಮಿತ) ಇದರ 50ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಡಿಕೆ, ಕಾಳುಮೆಣಸು, ಕೊಕ್ಕೊ ಖರೀದಿಸುತ್ತಿರುವ ಕ್ಯಾಂಪ್ಕೋ ಸಂಸ್ಥೆ ಸದಸ್ಯರಿಗೆ ಉತ್ತಮ ದರವನ್ನು ದೊರಕಿಸಿಕೊಡುವುದಕ್ಕಾಗಿ ಮುಂದೆ ಗೇರು ಬೀಜ ಖರೀದಿಸುವ ಬಗ್ಗೆ ಯೋಚಿಸುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಪೂರ್ಣ ಪ್ರಮಾಣದಲ್ಲಿ ತೆಂಗು ಖರೀದಿಗೆ ಕ್ಯಾಂಪ್ಕೋ ಸಂಸ್ಥೆ ಮುಂದಾಗುವಂತೆ ಸದಸ್ಯರು ಮಹಾಸಭೆಯಲ್ಲಿಒತ್ತಾಯಿಸಿದರು.  ಈಗಾಗಲೇ ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ಪರಿಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆಗೆ ಪರಿಚಯಿಸಿದೆ. ಹೀಗಾಗಿ ಸದಸ್ಯರಿಂದ ತೆಂಗಿನಕಾಯಿ ಖರೀದಿಸುವ ಬಗ್ಗೆಯೂ ಕ್ಯಾಂಪ್ಕೋ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.

5.99 ಕೋಟಿ ರೂ.ಲಾಭ
ಕಳೆದ ಸಾಲಿನಲ್ಲಿ ಕ್ಯಾಂಪ್ಕೋ 3,336.87 ಕೋಟಿ ರು. ಸಾರ್ವಕಾಲಿಕ ದಾಖಲೆಯ ವಹಿವಾಟು ನಡೆಸಿ 5.99 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪ್ರಕಟಿಸಿದರು.

ವಿದೇಶಿ ಅಡಿಕೆಯ ಅಕ್ರಮ ಆಮದಿನಿಂದ ದೇಶಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮೇಲೆ ಪ್ರಭಾವ ಬೀರಿದರೂ ಪರಿಣಾಮಕಾರಿ ಕಾರ್ಯತಂತ್ರಗಳ ಮೂಲಕ ತೆಗೆದುಕೊಂಡ ತೀರ್ಮಾನದಿಂದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಮಾರುಕಟ್ಟೆಯಲ್ಲಿ ಹಿಡಿತ ಸಡಿಲಗೊಂಡಿಲ್ಲ
ಅಡಿಕೆ ಮಾರುಕಟ್ಟೆ ಈಗಲೂ ಕ್ಯಾಂಪ್ಕೋದ ಹಿಡಿತದಲ್ಲೇ ಇದೆ. ಈಗ ಮಾರುಕಟ್ಟೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಧಾರಣೆಯಲ್ಲಿ ಏರಿಳಿತ ಇದೆ. ಕಳೆದ ಬಾರಿ ಕಾಳುಮೆಣಸು ಧಾರಣೆ ಕುಸಿತದಿಂದ ಸಂಸ್ಥೆಗೆ ನಷ್ಟ ಉಂಟಾಗಿತ್ತು. ಈ ಬಾರಿ ಧಾರಣೆ ಏರಿಕೆಯಿಂದ ಲಾಭದ ನಿರೀಕ್ಷೆ ಇದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ 
ಅಡಿಕೆಯನ್ನು ಹಾನಿಕಾರ ಪಟ್ಟಿಯಿಂದ ತೆಗೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆಗೆ ವೈಜ್ಞಾನಿಕ ಸಂಶೋಧನಾ ವರದಿ ಸಲ್ಲಿಸಿ ಮನವರಿಕೆ ಮಾಡುವ ಪ್ರಯತ್ನವನ್ನು ಕ್ಯಾಂಪ್ಕೋ ಮುಂದಿನ ತಿಂಗಳು ಮಾಡಲಿದೆ. ಈ ಮೂಲಕ ಕ್ಯಾನ್ಸರ್ ಪಟ್ಟಿಯಿಂದ ಅಡಿಕೆಯನ್ನು ತೆಗೆದುಹಾಕಲು ಪ್ರಯತ್ನಿಸಲಾಗುವುದು ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಭೆಗೆ ಮಾಹಿತಿ ನೀಡಿದರು.

ಉತ್ತರ ಭಾರತದಲ್ಲಿ ನಮ್ಮ ಅಡಿಕೆ ಜೊತೆಗೆ ಕಲಬೆರಕೆಯ ಕೆಂಪಡಕೆಯನ್ನು ಮಿಶ್ರಣ ಮಾಡಿ ಗುಣಮಟ್ಟರಹಿತ ಅಡಿಕೆ ಮಾರಾಟವಾಗುತ್ತಿದೆ. ಇದನ್ನು ತಡೆಯುವುದಲ್ಲದೆ, ಇಂತಹ ಅಡಕೆ ಕಂಡುಬಂದರೆ ಅದನ್ನು ನಾಶಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಕೇರಳ ಸರಕಾರಕ್ಕೆ ಮನವಿ
ಕಳೆದ ಬಾರಿ ಬಿಡುಗಡೆಗೊಳಿಸಿದ ಕ್ಯಾಂಪ್ಕೋ ಬ್ರಾಂಡ್‌ನ ರಸಗೊಬ್ಬರವನ್ನು ಕೇರಳದಲ್ಲೂ ಮಾರಾಟ ಮಾಡುವ ಬಗ್ಗೆ ಅಲ್ಲಿನ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕ್ಯಾಂಪ್ಕೋ ಸದಸ್ಯ ಗ್ರಾಹಕರ ಅನುಕೂಲಕ್ಕೆ ಕೃಷಿ ಮಾರುಕಟ್ಟೆಯ ಆಗುಹೋಗುಗಳನ್ನು ಸುಲಭವಾಗಿ ತಲುಪಿಸಲು ಪ್ರತ್ಯೇಕ ಆ್ಯಪ್ ರೂಪಿಸಲು ನಿರ್ಧರಿಸಲಾಗಿದೆ. ಇದರಿಂದ ಕ್ಯಾಂಪ್ಕೋ ಅಡಿಕೆ ಹಾಗೂ ಇತರೆ ಉತ್ಪನ್ನಗಳ ಧಾರಣೆ ಸಹಿತ ಎಲ್ಲ ಮಾಹಿತಿಯೂ ಆ್ಯಪ್‌ನಲ್ಲಿ ದೊರೆಯಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್.ಆ‌ರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್ ಪಿ., ಜಯಪ್ರಕಾಶ್ ನಾರಾಯಣ ಟಿ.ಕೆ, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್‌.ಎಂ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here