ಸೆ.7-8:ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಶ್ರೀಗಣೇಶೋತ್ಸವಕ್ಕೆ 42ರ ಸಂಭ್ರಮ

0

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ | ಸಾರ್ವಜನಿಕ ಅನ್ನಸಂತರ್ಪಣೆ

ಪುತ್ತೂರು: ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ 42ನೇ ವರುಷದ ಸಂಭ್ರಮ. ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸೆ.7 ಹಾಗೂ 8ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುವುದು.

ಸೆ.7ರಂದು ಬೆಳಿಗ್ಗೆ ಪರ್ಲಡ್ಕ ಏಕದಂತ ವಠಾರದಿಂದ ಶ್ರೀ ಗಣೇಶನ ವಿಗ್ರಹವನ್ನು ತಂದು ಮೆರವಣಿಗೆ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಬಳಿಕ ದರ್ಬೆ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪನೆಗೊಳಿಸಲಾಗುವುದು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿರುವುದು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ವಹಿಸಿಕೊಳ್ಳಲಿರುವರು. ಮುಖ್ಯ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಪುತ್ತೂರು ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್ ಮಾಲಕ ಜಿ.ಬಲರಾಮ ಆಚಾರ್ಯರವರು ಭಾಗವಹಿಸಲಿರುವರು.


ಸೆ.8ರಂದು ಶೋಭಾಯಾತ್ರೆ:
ಸೆ.8ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಲಿದ್ದು, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ವರ್ಷಂಪ್ರತಿಯಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಈ ಸಂದರ್ಭದಲ್ಲಿ ಜರಗಲಿದೆ. ಸಂಜೆ ಗಣಪತಿಯ ಅದ್ದೂರಿ ಶೋಭಾಯಾತ್ರೆಯು ಚೆಂಡೆ ವಾದ್ಯ, ಡಿ.ಜೆ ಹಾಗೂ ನಾಸಿಕ್ ಬ್ಯಾಂಡ್‌ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾರಾಡಿಯ ಬಾವಿಯಲ್ಲಿ ವಿಸರ್ಜನೆಗೊಳ್ಳಲಿದೆ.


ಶೃಂಗಾರಮಯ:
42ನೇ ಸಂಭ್ರಮಾಚರಣೆಯ ಪ್ರಯುಕ್ತ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಾಲೇಜಿನ ವಿದ್ಯಾರ್ಥಿ ಘಟಕದಿಂದ ವಿನಾಯಕ ನಗರವು ಕೇಸರಿಮಯದಿಂದ ಕಂಗೊಳಿಸುತ್ತಿದೆ. ವಿನಾಯಕ ನಗರದಿಂದ ದರ್ಬೆ ಜಂಕ್ಷನ್‌ವರೆಗೆ ರಸ್ತೆಯ ಡಿವೈಡರ್‌ನಲ್ಲಿ ಕೇಸರಿ ಬಾವುಟಗಳು, ಕೇಸರಿ ತೋರಣಗಳು, ಫ್ಲೆಕ್ಸ್‌ಗಳಿಂದ ವಿನಾಯಕ ನಗರವು ಶೃಂಗಾರಮಯಗೊಂಡಿದೆ.

ಶೋಭಾಯಾತ್ರೆ ಬರುವ ದಾರಿಯಲ್ಲಿ ಹಣ್ಣುಕಾಯಿ ನೀಡಿ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಶಿವಪ್ರಸಾದ್ ಎ, ಕೋಶಾಧಿಕಾರಿ ದುರ್ಗಾಪ್ರಸಾದ್, ಟ್ರಸ್ಟಿಗಳಾದ ಡಾ.ಅಶೋಕ್ ಕುಮಾರ್ ರೈ, ಮಂಜುನಾಥ್ ಡಿ, ಸಿಎ ಅನಂತಪದ್ಮನಾಭ ಕೆ, ವಿಶ್ವಾಸ್ ಶೆಣೈ, ಶ್ರೀಧರ ಹೆಗ್ಡೆ, ಜನಾರ್ದನ ಎಸ್.ಭಟ್, ವೆಂಕಟಕೃಷ್ಣ ಎಂ.ಎನ್, ದಿನೇಶ್ ಪ್ರಸನ್ನ, ನಾಗೇಶ್ ಪೈ, ಬೆಟ್ಟ ಪಿ.ಎಸ್ ನಾಗಾರಾಜ, ದೇಲಂತಿಮಾರು ನಿತ್ಯಾನಂದ ಶೆಟ್ಟಿ, ಹರಿಣಿ ಪುತ್ತೂರಾಯ, ವೇಣುಗೋಪಾಲ್ ಪಿ.ಎಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸೃಜನ್ ರೈ, ಕಾರ್ಯದರ್ಶಿ ಸುಹಾಸ್ ಪ್ರಭು, ಜೊತೆ ಕಾರ್ಯದರ್ಶಿ ರಿಶಿಕ ರೈ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


40 ಮಂದಿಗೆ ಸನ್ಮಾನ..
ಈಗಾಗಲೇ ಶ್ರೀ ಗಣೇಶೋತ್ಸವದ ವತಿಯಿಂದ 42ರ ಸಂಭ್ರಮಕ್ಕೆ 42 ಮಂದಿ ರಕ್ತದಾನ ಮಾಡಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಫಿಲೋಮಿನಾ ಕಾಲೇಜು, ಪಿಯು ಕಾಲೇಜು, ಸ್ನಾತಕೋತ್ತರ ವಿಭಾಗದಲ್ಲಿ ರ‍್ಯಾಂಕ್‌ಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಮಂಗಳೂರು ವಿ.ವಿ ಮಟ್ಟದಲ್ಲಿ ಗಣನೀಯ ಸಾಧನೆಗೈದ ಕ್ರೀಡಾಪಟುಗಳಿಗೆ ಹೀಗೆ 40 ಮಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ರಂಜಿಸಲಿದೆ ಅಮ್ಮೆರ್ ನಾಟಕ..
ಸೆ.7ರಂದು ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ಕುಸಲ್ದರಸೆ ನವೀನ್ ಡಿ.ಕಾಪಿಕಾಡ್ ಇವರ ಸಲಹೆ ಸಹಕಾರದೊಂದಿಗೆ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿದ, ರಂಗ್‌ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮನರಂಜಿಸಲಿದೆ.

ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಆಚರಣೆ…
ವಿನಾಯಕ ನಗರದಲ್ಲಿ ಫಿಲೋಮಿನಾ ಗಣೇಶೋತ್ಸವವು ವರ್ಷಂಪ್ರತಿ ಯಶಸ್ವಿಯಾಗಿ ನಡೆಯಲು ಸಹೃದಯಿ ನಾಗರಿಕರು ಕಾರಣೀಭೂತರಾಗಿದ್ದಾರೆ. ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವದ ಸಂಭ್ರಮವು ಇಂದು 42ನೇ ವರ್ಷಕ್ಕೆ ಕಾಲಿಟ್ಟಿದೆ. ಕಾಲೇಜಿನ ವಿದ್ಯಾರ್ಥಿ ಮಿತ್ರರು ವಿಘ್ನ ನಿವಾರಕ ಗಣೇಶನ ಹಬ್ಬವನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತಿದ್ದು ಇದಕ್ಕೆ ಎಲ್ಲರೂ ಹೃದಯಾಂತರಾಳದಿಂದ ಆಶೀರ್ವದಿಸುತ್ತಿದ್ದಾರೆ. ಪ್ರಸ್ತುತ ವರ್ಷವೂ ದರ್ಬೆ ವಿನಾಯಕ ನಗರದಲ್ಲಿ ಶ್ರೀ ಗಣೇಶೋತ್ಸವವನ್ನು ಆಚರಿಸುತ್ತಿದ್ದು ಎಂದಿನಂತೆ ಈ ವರ್ಷವೂ ಪ್ರತಿಯೊಬ್ಬರ ಸಹಕಾರವನ್ನು ಆಶಿಸುತ್ತಿದ್ದೇವೆ ಎಂದು ಫಿಲೋಮಿನಾ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here