ಪುತ್ತೂರು: ಮಣಿಕ್ಕರ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪಾಪೆಮಜಲು ಸರಕಾರಿ ಪ್ರೌಢ ಶಾಲೆ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಮಾತ್ರವಲ್ಲದೇ 2015ರಿಂದ ಸತತ 8ನೇ ಬಾರಿಗೆ ಚಾಂಪಿಯನ್ ಪಟ್ಟ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ಆಟಗಾರ್ತಿಯರಾದ ದೀಕ್ಷಾ ಬಿ ಬೆಸ್ಟ್ ಅಟ್ಯಾಕರ್ ಮತ್ತು ಆಶಿಕಾ ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತಂಡದಲ್ಲಿ ಪಂಚಮಿ, ಜಸ್ಮಿತ, ಲಾವಣ್ಯ, ರಕ್ಷಾ, ಪುಣ್ಯಶ್ರೀ ಆಡಿದ್ದು ತಂಡಕ್ಕೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ತರಬೇತಿ ನೀಡಿದ್ದಾರೆ. ಶಿಕ್ಷಕಿ ಸವಿತಾ ಪಿ ತಂಡದ ವ್ಯವಸ್ಥಾಪಕಿಯಾಗಿ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಬಿ, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಸಹಕಾರ ನೀಡಿದ್ದಾರೆ.
ಸತತ ಎಂಟನೇ ಬಾರಿಗೆ ಪಾಪೆಮಜಲು ಪ್ರೌಢ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಸಂತಸ ವ್ಯಕ್ತಪಡಿಸಿದ್ದು ನಮ್ಮ ಶಾಲೆಯ ವಾಲಿಬಾಲ್ ತಂಡ ನಮಗೆ ಹಾಗೂ ನಮ್ಮ ಊರಿಗೆ ಹೆಮ್ಮೆ ತಂದಿದ್ದು ಮಕ್ಕಳ ಸಾಧನೆ ನಮಗೆಲ್ಲಾ ಅಭಿಮಾನ ತಂದಿದೆ ಎಂದು ತಿಳಿಸಿದ್ದಾರೆ.