ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ.ವಿಟ್ಲ ರಾಜ್ಯ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

0

ವಿಟ್ಲ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ.ವಿಟ್ಲರವರು ರಾಜ್ಯ ಸರಕಾರದಿಂದ ನೀಡಲಾಗುವ ರಾಜ್ಯ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ವಿಟ್ಲ ನಿವಾಸಿಯಾಗಿರುವ ವಿಶ್ವನಾಥ ಕೆ. ವಿಟ್ಲರವರು ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಚಿತ್ರ ಕಲಾ ಶಿಕ್ಷಕರಾಗಿದ್ದಾರೆ. ಅವರು ಪ್ರಾಥಮಿಕ ಶಿಕ್ಷಣವನ್ನು ಚಂದಳಿಕೆ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಉನ್ನತ ಶಿಕ್ಷಣವನ್ನು ವಿಠಲ ಪ.ಪೂ ಕಾಲೇಜು ವಿಟ್ಲದಲ್ಲಿ ಮುಂದುವರಿಸಿದರು.


ಪ್ರಸ್ತುತ ಉಜಿರೆ ನಿವಾಸಿಯಾಗಿರುವ ವಿಶ್ವನಾಥ ಗೌಡ ಕೆ.ರವರು ಕಲಾ ಕ್ಷೇತ್ರದಲ್ಲಿ ‘ವಿ.ಕೆ.ವಿಟ್ಲ’ ಎಂದೇ ಪ್ರಸಿದ್ಧರಾಗಿರುವವರು.ಕೃಷಿ ಕೂಲಿ ಮಾಡುತ್ತಾ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದ ರೈತಾಪಿ ಕುಟುಂಬದಿಂದ ಬಂದಿರುವ ವಿ.ಕೆ.ವಿಟ್ಲರವರ ಸೃಜನಶೀಲ ಕಲ್ಪನೆಗೆ ಸೂಕ್ತ ತರಬೇತಿ ನೀಡಿ ಪರಿಪೂರ್ಣತೆಯ ಹಂತಕ್ಕೆ ತಿದ್ದಿ ತೀಡಿದ್ದು ಮಂಗಳೂರಿನ ಹೆಸರಾಂತ ಮಹಾಲಸ ಕಲಾವಿದ್ಯಾಲಯ.ಇವರ ಕಲಾವಿದ ಮನಸ್ಸಿಗೆ ವೃತ್ತಿ ರೂಪದಲ್ಲಿ ವೇದಿಕೆ ನೀಡಿದ್ದು ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆ ಬಿಳಿನೆಲೆ.ಬಳಿಕ ಉಜಿರೆ ಎಸ್‌ಡಿಎಂನಲ್ಲಿ ಡಾ|ವೀರೇಂದ್ರ ಹೆಗ್ಗಡೆಯವರ ಸಾಮೀಪ್ಯದಲ್ಲಿ ಕಲಾ ಸೇವೆ, ಬೋಧಕ ಸೇವೆ ನಡೆಸಿರುವ ಹಿರಿಮೆ ಇವರದ್ದು.ಶಿಲ್ಪಕಲೆ,ಗೋಡೆ ಬರಹ, ಗೌರಿ,ಗಣೇಶ ವಿಗ್ರಹಗಳು ಇವರನ್ನು ಇನ್ನಷ್ಟು ಪಕ್ವಗೊಳಿಸಿದ ಕಲಾ ಪ್ರಾಕಾರಗಳು. ಉತ್ತಮ ಕಲಾಪೋಷಕರು, ಕಲಾ ಕಾರ್ಯಕ್ರಮಗಳ ಸಂಘಟಕರೂ ಆಗಿರುವ ಇವರು ನೂರಕ್ಕೂ ಹೆಚ್ಚು ಬೇಸಿಗೆ ಶಿಬಿರ, ಕಲಾ ಶಿಬಿರ, ಉಚಿತ ಚಿತ್ರಕಲಾ ತರಬೇತಿಗಳನ್ನು ಅನಾವರಣಗೊಳಿಸಿದ್ದಾರೆ.

ಶಾಲಾ ಪಠ್ಯಪುಸ್ತಕ ಪ್ರಾಧಿಕಾರ ಬೆಂಗಳೂರು ಇಲ್ಲಿ ಎಂಟನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕ ಸಮಿತಿ ಸದಸ್ಯನಾಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ.ಧರ್ಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ ಆರಂಭಗೊಂಡ ಜ್ಞಾನಾಧಾರಿತ, ಮೌಲ್ಯಾಧಾರಿತ ಪುಸ್ತಕಗಳ ಪರಿಕಲ್ಪನೆ, ಚಿತ್ರ ವಿನ್ಯಾಸಗಳಲ್ಲಿ ವಿ.ಕೆ.ವಿಟ್ಲ ಅವರ ಸಲಹೆ,ಸೂಚನೆ,ಕೊಡುಗೆ ಅಪಾರ.ಇವರ ಕಲಾಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘಸಂಸ್ಥೆಗಳು ಸನ್ಮಾನಿಸಿವೆ.ಇದೀಗ ರಾಜ್ಯ ಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here