ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಧಾರ್ಮಿಕ ಸಭೆ

0

ದೇವರು ಮತ್ತು ಧರ್ಮದ ಮೇಲೆ ನಂಬಿಕೆ ಇದ್ದಾಗಲೇ ಜೀವನದಲ್ಲಿ ಯಶಸ್ಸು ಸಾಧ್ಯ: ಭಾಸ್ಕರ ಆಚಾರ್ ಹಿಂದಾರು

ಪುತ್ತೂರು: ನಂಬಿಕೆ ಮತ್ತು ವಿಶ್ವಾಸ ಇವೆರಡು ಮನುಷ್ಯ ಜೀವನದ ಬಹುಮುಖ್ಯ ಕೊಂಡಿಗಳಾಗಿವೆ. ದೇವರು ಮತ್ತು ಧರ್ಮದ ಮೇಲೆ ನಂಬಿಕೆ ಇಟ್ಟಾಗ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಸಮಾಜಕ್ಕೆ ಒಳ್ಳೆಯದನ್ನು ಕೊಡುವುದೇ ನಿಜವಾದ ಹಿಂದುತ್ವವಾಗಿದೆ. ಕೇವಲ ಕೇಸರಿ ಶಾಲು ಹಾಕಿಕೊಂಡರೆ ಸಾಲದು ನಮ್ಮ ಮನಸ್ಸು ಕೂಡ ನಿರ್ಮಲವಾಗಿರಬೇಕು, ಹೆತ್ತವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಕೊಡುವ ಕೆಲಸ ಆಗಬೇಕು ಎಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಹೇಳಿದರು.


ಅವರು ಒಳಮೊಗ್ರು ಗ್ರಾಮದ ಕುಂಬ್ರ ರಾಮಗಿರಿ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೊದಲ ದಿನವಾದ ಸೆ.7ರಂದು ರಾಮಗಿರಿ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ‘ಹಿಂದೂ ನಂಬಿಕೆಗಳ ಔಚಿತ್ಯ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಇಂದಿನ ದಿನಗಳಲ್ಲಿ ‘ನಾನು’ ಎಂಬುದು ಜಾಸ್ತಿಯಾಗುತ್ತಿದ್ದು ‘ನಾವು’ ಎಂಬುದು ಕಡಿಮೆಯಾಗುತ್ತಿದೆ ಇದು ಸಲ್ಲದು ಎಂದ ಅವರು ನಾವೆಲ್ಲರೂ ಒಂದೇ ಮನಸ್ಸಿನಿಂದ ಒಗ್ಗಟ್ಟಿನಿಂದ ಇರಬೇಕಾಗಿದೆ ಎಂದರು. ರಾಜಕೀಯ ನಾಯಕರುಗಳ ಬಂಡವಾಳವನ್ನು ಗಮನಿಸಿದರೆ ಅದರಿಂದಲೇ ಒಂದು ಗ್ರಾಮವನ್ನು ಅಭಿವೃದ್ಧಿ ಮಾಡಬಹುದಾಗಿದೆ ಆದರೆ ನಾವು ಇಂತಹ ರಾಜಕೀಯ ನಾಯಕರುಗಳ ಬಾಲ ಹಿಡಿಯುತ್ತಿರುವುದು ದುರಾದೃಷ್ಟಕರ ಎಂದ ಭಾಸ್ಕರ ಆಚಾರ್ ಹಿಂದಾರು, ಗಣೇಶೋತ್ಸವದ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಮನಸ್ಸಿನಿಂದ ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿ ಶುಭ ಹಾರೈಸಿದರು.


ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನರನ್ನು ಒಂದು ಸೇರಿಸುವ ಸಲುವಾಗಿ ಬಾಲಗಂಗಾಧರನಾಥ ತಿಲಕರು ಈ ಹಬ್ಬವನ್ನು ಸಾರ್ವಜನಿಕವಾಗಿ ಜಾರಿಗೆ ತಂದರು. ಅಂದಿನಿಂದ ಇಂದಿನವರೆಗೆ ನಾವೆಲ್ಲರೂ ಗಣೇಶನನ್ನು ಸಾರ್ವಜನಿಕವಾಗಿ ಆರಾಧಿಸಿಕೊಂಡು ಬರುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳಿಗೆ ನಾವು ನಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಅವರಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಉದ್ಯಮಿ ಗುರುಪ್ರಸಾದ್ ರೈ ಮೊರಂಗಲ್ಲುರವರು ಮಾತನಾಡಿ, ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ನಾವು ಹಳ್ಳಿಗಳಲ್ಲಿ ಕಾಣಲು ಸಾಧ್ಯವಿದೆ ಆದ್ದರಿಂದ ನಾವೆಲ್ಲರೂ ನಮ್ಮ ಮಕ್ಕಳಿಗೆ ಧಾರ್ಮಿಕತೆಯ ಪಾಠದೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿ ಶುಭ ಹಾರೈಸಿದರು.


ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸನ್ನಿಧಿ ಕುರಿಕ್ಕಾರರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅದೇ ರೀತಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಂಗೀತ ಕುರ್ಚಿಯಲ್ಲಿ ಪ್ರಥಮ ಯಶಸ್, ದ್ವಿತೀಯ ಮೋಕ್ಷ್, ಗಣೇಶನ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಚಿಂತನ್ ಸಿ.ಕೆ, ದ್ವಿತೀಯ ಅದ್ವಿತ್ ಬೊಳ್ಳಾಡಿ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಅನ್ವೀ, ದ್ವಿತೀಯ ಸಿಂಚನಾ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರುಗಳಾದ ಶೇಖರ್ ರೈ ಕುರಿಕ್ಕಾರ ಮತ್ತು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ಉಷಾ ನಾರಾಯಣ್ ಪ್ರಾರ್ಥಿಸಿದರು. ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಪದ್ಮನಾಭ ರೈ ಅರೆಪ್ಪಾಡಿ, ಆಶಾ ಮಾಧವ ರೈ, ರತನ್ ರೈ ಕುಂಬ್ರ, ಅಂಕಿತ್ ರೈ ಕುಯ್ಯಾರು, ಎಸ್.ಮಾಧವ ರೈ ಕುಂಬ್ರ, ಚಂದ್ರಶೇಖರ ರೈ ಕುರಿಕ್ಕಾರ, ಚಂದ್ರಕಾಂತ ಶಾಂತಿವನ, ಉಮೇಶ್ ಕುಮಾರ್ ಬರಮೇಲು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷ ರತನ್ ರೈ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ನೇಮಿರಾಜ ರೈ ಕುರಿಕ್ಕಾರ ವಂದಿಸಿದರು. ಹರೀಶ್ ರೈ ಮುಗೇರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಯ ಪದಾಧಿಕಾರಿಗಳು ಸಹಕರಿಸಿದ್ದರು.


ನಾಳೆ(ಸೆ.8) ಮಂದಿರದಲ್ಲಿ
ಸೆ.8ರಂದು ಬೆಳಿಗ್ಗೆ, ಮಧ್ಯಾಹ್ನ ವೈಧಿಕ ಕಾರ್ಯಕ್ರಮಗಳು, ಬೆಳಿಗ್ಗೆ ಶಾಸ್ತ್ರೀಯ ಸಂಗೀತ, ಧಾರ್ಮಿಕ ಸಭೆ, ಅಪರಾಹ್ನ ಬೃಂದಾವನ ನಾಟ್ಯಾಲಯದಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ ರಂಗಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 9 ರಿಂದ ಮಂದಾರ ಕಲಾವಿದರು ಉಜಿರೆ ಅಭಿನಯಿಸುವ ತುಳು ಭಕ್ತಿ ಪ್ರಧಾನ ಹಾಸ್ಯಮಯ ನಾಟಕ ‘ ಮಾಯೊದ ತುಡರ್’ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here