ಪುತ್ತೂರು:ಸಂಪ್ಯ ಶ್ರೀರಾಮ ನಗರದ ನವಚೇತನಾ ಯುವಕ ಮಂಡಲದ ವತಿಯಿಂದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ನಡೆಯುವ 42ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಬಹಳಷ್ಟು ಸಂಭ್ರಮ ಮನೆ ಮಾಡಿದೆ.
ವೇ.ಮೂ ಸಂದೀಪ್ ಕಾರಂತರವರ ನೇತೃತ್ವದಲ್ಲಿ ನಡೆದ ಗಣೇಶೋತ್ಸವದಲ್ಲಿ ಸೆ.7ರಂದು ಬೆಳಿಗ್ಗೆ ಶ್ರೀ ಗಣೇಶನ ವಿಗ್ರಹ ಆಗಮನದ ಬಳಿಕ ಗಣೇಶ ವಿಗ್ರಹ ಪ್ರತಿಷ್ಠೆ, ಗಣಹೋಮ ನಡೆದ ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆದ ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ:
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ಸಂಭ್ರಮದಿಂದ ನಡೆಯುವ ಗಣೇಶೋತ್ಸವಗಳ ಮೂಲಕ ಧಾರ್ಮಿಕ ಜಾಗೃತಿಯ ಜೊತೆಗೆ ಜನ ಜಾಗೃತಿಯು ನಡೆಯುತ್ತಿದೆ. ಇದರ ಜೊತೆಗೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಪ್ರಾರಂಭಿಸುವ ಮೂಲಕ ಮಕ್ಕಳಲ್ಲಿಯೂ ಧಾರ್ಮಿಕ ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲಾ ಸಹ ಅಧ್ಯಾಪಕ ಉದಯ ಕುಮಾರ್ ರೈ ಎಸ್. ಮಾತನಾಡಿ, ಬಾಲ್ಯದಲ್ಲಿನ ಸಂಸ್ಕಾರದ ಕೊರೆತೆಯಿಂದ ಮಕ್ಕಳು ದಾರಿತಪ್ಪುತ್ತಿದ್ದಾರೆ. ಮಕ್ಕಳಿಗೆ ಸಂಸ್ಕಾರವೇ ಅಡಿಪಾಯ. ಸಂಸ್ಕಾರ ನೀಡುವ ಮೂಲಕ ಧಾರ್ಮಿಕ ಜಾಗೃತಿಯಾಗಬೇಕು. ಇಂದಿನ ಮಕ್ಕಳು ಪೋಷಕರ ನಿಯಂತ್ರಣಕ್ಕೆ ಬಾರದಿರಲು ಬಾಲ್ಯದಲ್ಲಿ ಸಂಸ್ಕಾರ ನೀಡದೇ ಇರುವುದೇ ಪ್ರಮುಖ ಕಾರಣವಾಗಿದೆ. ಪೋಷಕರ ನಡತೆಗಳು ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು ಮಕ್ಕಳಲ್ಲಿ ಧನಾತ್ಮಕ ಭಾವನೆಗಳು ಮೂಡುವಂತ ವರ್ತನೆ ಪೋಷಕರಲ್ಲಿರಬೇಕು. ಮಕ್ಕಳಿಗೆ ಪೋಷಕರೇ ರೋಲ್ ಮಾಡೆಲ್‌ಗಳಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ದ್ವಾರಕ ಕನ್‌ಸ್ಟ್ರಕ್ಷನ್‌ನ ಗೋಪಾಲಕೃಷ್ಣ ಭಟ್ ಮಾತನಾಡಿ, ಧರ್ಮಜಾಗೃತಿಗಾಗಿ ನಡೆಯುವ ಗಣೇಶೋತ್ಸವಗಳು ಒಂದು ರಾಷ್ಟ್ರ ವ್ಯಾಪಿಯಾಗಿ ನಡೆಯುತ್ತಿದೆ. ಇದು ಯುವ ಜನತೆ ಸಂಸ್ಕಾರಯುತವಾಗಿ ಬೆಳೆಯಲು ಸಹಕಾರಿಯಾಗಲಿ ಎಂದರು.
ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಡಾ.ರವಿಪ್ರಕಾಶ್ ಮಾತನಾಡಿ, ಸಾರ್ವಜನಿಕವಾಗಿ ಗಣೇಶೋತ್ಸವವನ್ನು ನೆರವೇರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಜನತೆಗೆ ಸಾಮೂಹಿಕವಾಗಿ ಪ್ರಾರ್ಥಿಸಲು ಉತ್ತಮ ಅವಕಾಶವಾಗಿದೆ ಎಂದರು.
ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಮಾತನಾಡಿ, ಯುವಕ ಮಂಡಲದ ಮುಂದಿನ ಎಲ್ಲಾ ಯೋಜನೆಗಳಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ವಿನಂತಿಸಿದರು. ಯುವಕ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕ ಮಂಡಲದಿಂದ ಈಗಾಗಲೇ ರಕ್ತದಾನ ಶಿಬಿರ ಏರ್ಪಡಿಸಿದ್ದು ಮುಂದಿನ ದಿನಗಳಲ್ಲಿ ಕಣ್ಣಿನ ಉಚಿತ ಪರೀಕ್ಷಾ ಶಿಬಿರ ನಡೆಸಲಾಗುವುದು. ಯುವಕ ಮಂಡಲದ ಕಚೇರಿ ಕಟ್ಟಡಕ್ಕೆ ನಿವೇಶನ ಖರೀದಿಸಿದ್ದು ಅದರಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ನವಚೇತನ ಯುವಕ ಮಂಡಲದ ಗೌರವಾಧ್ಯಕ್ಷರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ದೇಶದಲ್ಲಿ ಬಹು ಸಂಖ್ಯಾತರಾಗಿರುವ ಹಿಂದುಗಳ ಧಾರ್ಮಿಕ ಆಚರಣೆಗಳಿಗೆ ಸರಕಾರ ಒಂದೋಂದೇ ನಿರ್ಬಂಧಗಳನ್ನು ಹೇರುತ್ತಿದೆ. ಬೇರೆ ಧರ್ಮಗಳ ಆಚರಣೆಗಳಿಗೆ ಇಲ್ಲದ ಕಾನೂನು ಹಿಂದು ಧರ್ಮದ ಆಚರಣೆಗಳಿಗಿದೆ. ವೈಜ್ಞಾನಿಕ ಕಾರಣಗಳನ್ನು ನೀಡಿ ಒಂದೊಂದೇ ನಿರ್ಬಂಧಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಬಹಳಷ್ಟು ಅಪಾಯವಾಗಲಿದೆ. ಹೀಗಾಗಿ ಹಿಂದುಗಳು ಸಂಘಟಿತರಾಗಿ ಸರಕಾರದ ವಿರುದ್ಧ ಪ್ರತಿಭಟಿಸಬೇಕಾದ ಅನಿವಾರ್ಯತೆಯಿದೆ. ಬಾಲಗಂಗಾದರನಾಥ ತಿಲಕರು ಬ್ರಿಟೀಷರ ವಿರುದ್ದ ಹೋರಾಡಲು ಜಾಗೃತಿಗಾಗಿ ಮಾಡಿದ ಗಣೇಶೋತ್ಸವ ಮುಂದೆ ನಮ್ಮ ಧರ್ಮದ ರಕ್ಷಣೆಗಾಗಿ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು.
ದೇವಸ್ಥಾನದ ಆಡಳಿತಾಧಿಕಾರಿ ಅಶ್ವಿನಿ ಕೆ., ಪ್ರಗತಿಪರ ಕೃಷಿಕ ಉದಯಶಂಕರ ರೈ ಪುಣಚ, ವಿನ್ನರ್ ಸಾಫ್ಟ್‌ಡ್ರಿಂಕ್ಸ್‌ನ ಮ್ಹಾಲಕ ರಮೇಶ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ, ಪ್ರತಿಭಾ ಪುರಸ್ಕಾರ:
ಮೆಸ್ಕಾಂ ಪವರ್ ಮೆನ್‌ಗಳಾದ ಚಂದ್ರಶೇಖರ ಮೆಸ್ತಾ, ಪೀರು ನಾಯಕ್‌ರವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳಾದ ಹಿತಾ ಶೆಟ್ಟಿ ಕಂಬಳತ್ತಡ್ಡ, ಮೈಥಿಲಿ ಆರ್.ಎಸ್., ಶಾಲ್ಮಲಿ ಆರ್.ಎಸ್., ವೃದ್ಧಿ ರೈ, ಯಶಸ್ವಿನಿ ಬೈಲಾಡಿ, ಡಿಂಪಲ್ ಶೆಟ್ಟಿ, ರೋಹನ್ ಹೊಸಮನೆ, ತನುಷ್, ನಿಕ್ಷೇಪ್ ಕೃಷ್ಣ, ಗಗನ್ ಬೈಲಾಡಿಯವರಿಗೆ ಸೀತಾರಾಮ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅನ್ನದಾನಕ್ಕೆ ವಿಶೇಷ ಸಹಕಾರ ನೀಡಿದ ಐತ್ತಪ್ಪ ರೈ, ನಾಗಪ್ಪ ಗೌಡ ಕೊಲ್ಯ, ವಿಜಯ ಬಿ.ಎಸ್., ಚಂದ್ರಾವತಿ ರಮಾನಾಥ ಗೌಡಯವರನ್ನು ಗೌರವಿಸಲಾಯಿತು.
ಮೈಥಿಲಿ ಆರ್.ಎಸ್ ಹಾಗೂ ಶಾಲ್ಮಲಿ ಆರ್.ಎಸ್ ಪ್ರಾರ್ಥಿಸಿದರು. ಯುವಕ ಮಂಡಲ ಮಾಜಿ ಕಾರ್ಯದರ್ಶಿ ಉಮೇಶ್ ಎಸ್.ಕೆ ಸ್ವಾಗತಿಸಿದರು. ರವಿ ಗೌಡ ಬೈಲಾಡಿ, ಸುರೇಶ್ ಪೂಜಾರಿ ಸಂಪ್ಯ, ಕುಂಞಣ್ಣ ಗೌಡ, ದೀಕ್ಷಿತ್ ಗೌಡ ಸಂಪ್ಯದ ಮೂಲೆ, ಶೀನಪ್ಪ ಗೌಡ ಬೈಲಾಡಿ, ಚೈತ್ರಾ ನಾಗೇಶ್, ಲಕ್ಷ್ಮಣ್ ಬೈಲಾಡಿ, ರವಿನಾಥ ಗೌಡ ಬೈಲಾಡಿ, ತೇಜಸ್ ಗೌಡ ಸಂಪ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿ, ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಗೌಡ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ:
ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಮಂದಾರ ಕಲಾವಿದರು ಉಜಿರೆ ಇವರಿಂದ ಬ್ರಹ್ಮದಂಡ ಎಂಬ ತುಳು ನಾಟಕ ಪ್ರದರ್ಶನ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸೆ.8 ಶೋಭಾಯಾತ್ರೆ:
ಗಣೇಶೋತ್ಸವದಲ್ಲಿ ಸೆ.8ರಂದು ಬೆಳಿಗ್ಗೆ ಗಣಪತಿಹೋಮ, ಸತ್ಯನಾರಾಯಣ ಪೂಜೆ, ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆದ ಬಳಿಕ ಶ್ರೀ ದೇವರ ವೈಭವದ ಶೊಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ದೇವಸ್ಥಾನದ ಬಳಿಯಿಂದ ಹೊರಟು ಮುಖ್ಯರಸ್ತೆಯಾಗಿ ಮುಕ್ರಂಪಾಡಿ, ಮೊಟ್ಟೆತ್ತಡ್ಕ ತನಕ ತೆರಳಿ ನಂತರ ಸಂಪ್ಯ ದೇವಸ್ಥಾನಕ್ಕೆ ಹಿಂತಿರುಗಿ ದೇವಸ್ಥಾನದ ಬಳಿಯ ಕೆರೆಯಲ್ಲಿ ಜಲಸ್ತಂಬನದೊಂದಿಗೆ ಗಣೇಶೋತ್ಸವವು ಸಂಪನ್ನಗೊಳ್ಳಲಿದೆ ಎಂದು ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.