ಆಧ್ಯಾತ್ಮಿಕ ಚೈತನ್ಯವನ್ನು ಹೆಚ್ಚಿಸಿದ ಸ್ವಲಾತ್ – ಹಾಡು – ಕೀರ್ತನೆಗಳು
ಪುತ್ತೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪುತ್ತೂರು ತಾಲೂಕು ವತಿಯಿಂದ ಇಲ್ಲಿನ ಬದ್ರಿಯಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಪುಣ್ಯ ಪ್ರವಾದಿ ಮುಹಮ್ಮದ್ ಪೈಗಂಬರವರ ಜನ್ಮದಿನದ ಪ್ರಯುಕ್ತ ಗ್ರಾಂಡ್ ಮೀಲಾದ್ ಮಜ್ಲಿಸ್ ಕೂಟ ನಡೆಯಿತು. ಈ ಮಜ್ಲೀಸ್ ಕೂಟದಲ್ಲಿ ಸ್ವಲಾತ್, ಹಾಡು, ಕೀರ್ತನೆಗಳು, ಪ್ರಭಾಷಣಗಳು ನಡೆದವು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಅಧ್ಯಕ್ಷ, ಪುತ್ತೂರು ಮುದರ್ರಿಸ್ ಅಸಯ್ಯದ್ ಅಹಮದ್ ಪೂಕೋಯ ತಂಙಳ್ ಮಾತನಾಡಿ, ‘ಪುತ್ತೂರು ಜಂಇಯ್ಯತ್ತುಲ್ ಉಲಮಾ ಘಟಕವು ಧಾರ್ಮಿಕವಾಗಿ ಜನರಿಗೆ ಸಮರ್ಥ ನೇತೃತ್ವ ವಹಿಸುತ್ತಿದೆ’ ಎಂದು ಹೇಳಿದರು. ‘ಇಂದಿನ ಕೆಲ ಯುವಕರು ಸೋಶಿಯಲ್ ಮೀಡಿಯಾದ ಪ್ರಭಾವಕ್ಕೆ ಒಳಗಾಗಿ ತಾವು ನಡೆದು ಬಂದ ಪಾರಂಪರ್ಯ ಮೌಲ್ಯಗಳನ್ನು ತಿರಸ್ಕರಿಸಿ ಸಲಪಿ ವಹ್ಹಾಬಿ ಮುಂತಾದ ತೀವ್ರ ವಿಚಾರಧಾರೆಗಳತ್ತ ಆಕರ್ಷಿತರಾಗಿ ಬದುಕು ಬರಡಾಗಿಸುತ್ತಿರುವುದು ಕಂಡು ಬರುತ್ತಿದೆ.ಎಳೆಯ ಪ್ರಾಯದಲ್ಲೇ ಮಕ್ಕಳ ಹೃದಯದಲ್ಲಿ ಪ್ರವಾದಿ ಪ್ರೇಮ ರೂಡಮೂಲಗೊಳಿಸಲು ಮೀಲಾದ್ ಆಚರಣೆ ಉಪಯುಕ್ತವಾಗುತ್ತದೆ’ ಎಂದ ಅವರು ‘ಪ್ರವಾದಿ ಪ್ರೇಮ ಹೃದಯಕ್ಕಿಳಿದರೆ ಮತ್ತೆ ಅಂತಹ ಮಕ್ಕಳು ಮಾದಕ ಡ್ರಗ್ಸ್ ವ್ಯಸನಕ್ಕೆ ಬಲಿಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಆಧ್ಯಾತ್ಮಿಕ ಕೀರ್ತನಾ ಕೂಟಗಳನ್ನು ಹೆಚ್ಚೆಚ್ಚಾಗಿ ಆಯೋಜಿಸುವ ಅನಿವಾರ್ಯತೆ ಇದೆ’: ಹನೀಫ್ ಹುದವಿ
ಮಾಡನೂರು ನೂರುಲ್ ಹುಂಜಾ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಡ್ವಕೇಟ್ ಹನೀಪ್ ಹುದವಿ ಮಾತನಾಡಿ, ‘ಮೀಲಾದ್ ವಿರೋಧಿಗಳ ವಿತಂಡ ವಾದಕ್ಕೆ ಉತ್ತರಿಸಲು ಹೋಗಿ ನಮ್ಮ ಅಮೂಲ್ಯ ಸಮಯ ವ್ಯರ್ಥಗೊಳಿಸುವುದಕ್ಕಿಂತ ಇಂತಹ ಆಧ್ಯಾತ್ಮಿಕ ಕೀರ್ತನಾ ಕೂಟಗಳನ್ನು ಹೆಚ್ಚು ಹೆಚ್ವು ಆಯೋಜಿಸುವುದೇ ಅವರಿಗೆ ತಕ್ಕ ಉತ್ತರ’ ಎಂದರು.
‘ಪ್ರತಿಯೊಂದಕ್ಕೂ ಕುರಾನ್ ಹದೀಸ್ ಎನ್ನುವವರು ಪ್ರವಾದಿ ಪ್ರೇಮದ ವ್ಯಾಪ್ತಿಯ ಬಗ್ಗೆ ಅಜ್ಞಾನಿಗಳಾಗಿದ್ದಾರೆ‘: ಎಸ್ ಬಿ ದಾರಿಮಿ
ಅರಸಿನಮಕ್ಕಿ ಸಂಸ್ಥೆಯ ಗೌರವಾಧ್ಯಕ್ಷ ವಾಗ್ಮಿ ಎಸ್ ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ, ‘ಪ್ರತಿಯೊಂದಕ್ಕೂ ಕುರ್ಆನ್ ಹದೀಸ್ ಎನ್ನುವವರು ಪ್ರವಾದಿ ಪ್ರೇಮದ ವ್ಯಾಪ್ತಿಯ ಬಗ್ಗೆ ಅಜ್ಞಾನಿಗಳಾಗಿದ್ದಾರೆ. ಪ್ರವಾದಿಗಳು ಅಸ್ತಂಗತರಾದ ಸುದ್ದಿ ಕೇಳಿದ ಅವರ ಪ್ರಮುಖ ಅನುಚರರಾಗಿದ್ದ ಅಬ್ದುಲ್ಲಾಹಿ ಬಿನ್ ಝೈದ್ ಎಂಬವರು ಪ್ರವಾದಿಗಳನ್ನು ನೋಡಿದ ಕಣ್ಣಿಂದ ಇನ್ನು ಬೇರೆಯವರನ್ನು ನೋಡದ ಹಾಗೆ ಮಾಡುವಂತೆ ಕಣ್ಣು ಕುರುಡಾಗಿಸಲು ಪ್ರಾರ್ಥನೆ ನಡೆಸಿದ್ದರು. ಮತ್ತೊಬ್ಬ ಪ್ರಮುಖ ಸಹಾಬಿ ಅಬುತ್ತುಫೈಲ್ ಎಂಬವರು ಪ್ರವಾದಿ ಸ ಅ ರ ವಫಾತ್ ಸುದ್ದಿ ಕೇಳಿದಾಗ ಹೃದಯ ಸ್ತಂಬಿಸಿ ಮರಣ ಹೊಂದಿದರು. ತಾಯಿಯ ಸೇವೆಗೈಯ್ಯುವುದರಲ್ಲಿ ನಿರತರಾಗಿ ಪ್ರವಾದಿಗಳ ಅನುಚರರಾಗಳು ಸಾಧ್ಯವಾಗದ ಊಯಿಸುಲ್ ಖರ್ನಿ ಎಂಬವರು ಪ್ರವಾದಿಗಳ ಹಲ್ಲು ಕಿತ್ತು ಹೋಯಿತೆಂದಾಗ ಅವರಿಗಿಲ್ಲದ ಹಲ್ಲು ನನಗೆ ಬೇಡ ಎಂದಿಟ್ಟು ಕಿತ್ತೆಸೆದರು.ಇಂತಹ ಪ್ರವಾದಿ ಪ್ರೇಮದ ಜ್ವಲಂತ ಉದಾಹರಣೆಗಳ ಬಗ್ಗೆ ಕುರ್ಅನ್ ಹದೀಸನ್ನು ಮಾತ್ರ ಪುರಾವೆಯಾಗಿ ಸ್ವೀಕರಿಸುವವರಿಗೆ ಏನು ಹೇಳಲಿಕ್ಕಿದೆ’ ಎಂದು ಪ್ರಶ್ನಿಸಿದರು.
ಸಾಲ್ಮರ ಉಮರ್ ದಾರಿಮಿ ಪ್ರಸ್ತಾವನೆಗೈದರು. ಸಯ್ಯಿದ್ ಯಹ್ಯಾ ತಂಙಳ್ ಪೋಲ್ಯ, ಮುಹಮ್ಮದ್ ತಂಙಳ್ ಸಾಲ್ಮರ,ಉಮರ್ ಮುಸ್ಲಿಯಾರ್ ನಂಜೆ,ಇಸ್ಮಾಯಿಲ್ ದಾರಿಮಿ ದೇಲಂಪಾಡಿ,ಇರ್ಷಾದ್ ಪೈಝಿ ಮುಖ್ವೆ, ಪುತ್ತೂರು ಅನ್ಸಾರುದ್ದೀನ್ ಜಮಾ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಮಾನ್, ಎಲ್ ಟಿ ಅಬ್ದುಲ್ ರಝಾಕ್ ಹಾಜಿ,ಅಬ್ಬಾಸ್ ಮದನಿ ಪುತ್ತೂರು, ಕಲ್ಲೇಗ ಮಸೀದಿಯ ಅಧ್ಯಕ್ಷ ಕೆ ಪಿ ಮುಹಮ್ಮದ್ ಹಾಜಿ ಕಲ್ಲೇಗ ಪುತ್ತೂರು ಹಂಸರುದ್ದೀನ್ ಜಮಾತ್ ಕಮಿಟಿಯ ಖಜಾಂಜಿ, ಹಸೈನಾರ್ ಹಾಜಿ ಸಿಟಿಬಜಾರ್, ಅಶ್ರಫ್ ಹಾಜಿ ಕಲ್ಲೇಗ, ಸಿರಾಜುದ್ದೀನ್ ಪೈಝಿ ಬಪ್ಪಳಿಗೆ, ಉಮರ್ ಪೈಝಿ, ಇಬ್ರಾಹಿಂ ದಾರಿಮಿ ಮಾಡನ್ನೂರು, ಶಾಫಿ ಇರ್ಫಾನಿ ಕಲ್ಲಗ, ರಶೀದ್ ರಹ್ಮಾನಿ ಪರ್ಲಡ್ಕ, ಕೂರ್ನಡ್ಕ ರೇಂಜ್ ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬೂಬಕರ್ ಮುಲಾರ್ ಪುತ್ತೂರು ರೇಂಜ್ ಮದ್ರಾಸ ಮ್ಯಾನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ, ಹಾಜಿ ಅಬ್ದುಲ್ ಅಝೀಝ್ ಬಪ್ಪಳಿಗೆ, ಕರೀಂ ದಾರಿಮಿ ಕುಂಬ್ರ, ಯಾಕೂಬ್ ದಾರಿಮಿ, ಬಶೀರ್ ದಾರಿಮಿ ಸೇರಿದಂತೆ ನೂರಾರು ಮಂದಿ ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು.
ಪುತ್ತೂರು ತಾಲೂಕು ಸಮಸ್ತ ಉಲೇಮಾ ಮುಸಾವರ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿ ವಂದಿಸಿ ಮಾತನಾಡಿ, ‘ಸತ್ಯವಿಶ್ವಾಸಿಗಳಿಗೆ ಆಧ್ಯಾತ್ಮಿಕ ನವ ಚೈತನ್ಯವನ್ನು ನೀಡಿ ಪ್ರವಾದಿ ಪ್ರೇಮವನ್ನು ನಮ್ಮ ಹೃದಯದಲ್ಲಿ ಮತ್ತಷ್ಟು ಬೇರೂರಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ’ ಎಂದು ಹೇಳಿದರು.