*ದೇಶಕ್ಕೆ ಸ್ವಾತಂತ್ರ್ಯ ಬಂದಿದೆ, ಆದರೆ ಇದು ಕಷ್ಟದ ಸಮಯ ವಿಜ್ರಂಭಣೆಯಿಂದ ಕಾಲ ಕಳೆಯದೇ ಅಧಿಕಾರ ಸಿಕ್ಕಿರುವುದು ಜನರ, ಬಡ ಜನರ ಸೇವೆಗಾಗಿ ಎಂದು ತಿಳಿದು ಕೆಲಸ ಮಾಡಿ’ ಎಂದು ನಾಯಕರಿಗೆ ಆ.15ರ ಬೆಳಿಗ್ಗೆ ಸ್ವಾತಂತ್ರ್ಯದ ಸಂದೇಶ ಕಳಿಸಿದ್ದರು.
*ಮಹಾತ್ಮ ಗಾಂಧಿಯವರ ಹೆಸರು ಇಂದಿಗೂ ಜಾಗತಿಕ ಮಾನ್ಯತೆ ಪಡೆದಿರುವುದು, ಗಾಂಧಿಯಂತಹ ವ್ಯಕ್ತಿ ಈ ಭೂಮಿಯಲ್ಲಿ ಓಡಾಡಿದ್ದರು ಎಂದು ಮುಂದಿನ ಜನಾಂಗ ನಂಬಲಿಕ್ಕಿಲ್ಲ ಎಂದು ಪ್ರಖ್ಯಾತ ವಿಜ್ಞಾನಿ ಐನ್‌ಸ್ಟಿನ್ ಹೇಳಿರುವುದು ಗಾಂಧಿಯವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
*ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಸ್ವಾತಂತ್ರ್ಯದ ಪ್ರಥಮ ಹೆಜ್ಜೆ’ ಎಂದು ಮಹಾತ್ಮ ಗಾಂಧಿಜಿ ಹೇಳಿದ್ದರು. ಹಾಗಿದ್ದರೆ ಗಾಂಧಿ ಹೇಳಿದ ಸ್ವಾತಂತ್ರ್ಯದ ಮುಂದಿನ ಹೆಜ್ಜೆ ಏನು?
*’ಭಾರತಕ್ಕೆ ಸ್ವಾತಂತ್ರ್ಯ ನೀಡಬೇಡಿ. ಎಂದು ,ಬ್ರಿಟನ್‌ನ ಮಾಜಿ ಪ್ರಧಾನಿ ಚರ್ಚಿಲ್ ಹೇಳಿದ್ದರು. ಸ್ವಾತಂತ್ರ್ಯ ನೀಡಿದರೆ ಏನಾಗುತ್ತದೆ? ಎಂದಿದ್ದರು.
ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಗುತ್ತದೆ ಎಂದಾದಾಗ ಮುಸ್ಲಿಂರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು, ಮುಸ್ಲಿಂ ಲೀಗ್‌ನ ಅಧ್ಯಕ್ಷ ಮಹಮ್ಮದ್ ಆಲಿ ಜಿನ್ನಾ ಇಟ್ಟಿದ್ದರು. ಮಹಾತ್ಮಾ ಗಾಂಧಿ ಮತ್ತು ದೇಶದ ಇತರೆ ನಾಯಕರು ಅದನ್ನು ಒಪ್ಪಿರಲಿಲ್ಲ. ಆಗ, ಹಿಂದು ಮುಸ್ಲಿಂ ನಡುವೆ ಕೋಮು ಗಲಭೆ ನಡೆಸುವ ಹುನ್ನಾರ ಕೆಲವರಿಂದ ನಡೆಯಿತು. ಅದು ಬೆಳೆಯುತ್ತಾ ಯಶಸ್ವಿಯೂ ಆಯಿತು. ಧರ್ಮದ ಆಧಾರದಲ್ಲಿ ನಿರಂತರವಾಗಿ ಮತ್ತು ವ್ಯಾಪಕವಾಗಿ ಹಿಂಸೆ, ಹತ್ಯೆ ನಡೆಯಿತು. ಸ್ವಾರ್ಥ ಮೆರೆಯಿತು, ಮಾನವೀಯತೆ ಸತ್ತಿತು. ಮೊದಲು ದೇಶ ವಿಭಜನೆಗೆ ಒಪ್ಪದಿದ್ದ ಗಾಂಧಿ, ’ತನ್ನ ಹೆಣದ ಮೇಲೆ ದೇಶ ವಿಭಜನೆಯಾಗಲಿ’ ಎಂದು ಹೇಳಿದ್ದರೂ, ದೇಶಕ್ಕೆ ಸ್ವಾತಂತ್ರ್ಯ ದೊರಕುವ ಸಂದರ್ಭದಲ್ಲಿ ವಿಭಜನೆಯ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸೆ, ಕ್ರೌರ್ಯನ್ನು ನೋಡಿ, ಅದು ನಿಲ್ಲುವುದಾದರೆ ದೇಶ ವಿಭಜನೆಯಾಗಲಿ ಎಂದು ಕೊನೆಗೆ ಒಪ್ಪಿಗೆ ನೀಡಿದರು. ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿಂದು ಮುಸ್ಲಿಂ ಸಾಮರಸ್ಯವನ್ನು ಬೋಽಸುತ್ತಿದ್ದ ಗಾಂಧಿಜಿಯವರಿಗೆ, ಈ ಕೋಮುಗಲಭೆ, ಹಿಂಸೆ, ಹತ್ಯೆ ಅತ್ಯಂತ ದೊಡ್ಡ ನೋವು ಮತ್ತು ನಿರಾಶೆಯನ್ನು ತಂದಿತು. ದೇಶದ ಜನ, ನಾಯಕರು ಸ್ವಾತಂತ್ರ್ಯ ದೊರಕುತ್ತದೆ ಎಂದು ನಿರೀಕ್ಷೆ ಮತ್ತು ಸಂಭ್ರಮದಲ್ಲಿದ್ದಾಗ ಗಾಂಧಿಜಿ ಅದನ್ನು ಸಂಭ್ರಮಿಸದೆ ಕೋಮು ಗಲಭೆ, ಹಿಂಸೆ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು. ಯಾಕೆಂದರೆ ಗಾಂಧಿ ಬಯಸಿದ ಸಾತಂತ್ರ್ಯ ಅದಾಗಿರಲಿಲ್ಲ.
ಈಗಿನ ಬಾಂಗ್ಲಾ ದೇಶದ ನೋಕೋವಿ ಎಂಬಲ್ಲಿ ಕೋಮು ಗಲಭೆ ನಡೆಯುತ್ತಿದೆ, ಅಲ್ಲಿ ಅಲ್ಪಸಂಖ್ಯಾತರಾಗಿದ್ದ ಹಿಂದುಗಳ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿದು ಗಾಂಧಿ ಅಲ್ಲಿಗೆ ಹೊರಟಿದ್ದರು. ಅವರು ಕೊಲ್ಕೊತ್ತಾ ತಲುಪಿದಾಗ ಅಲ್ಲಿ ಹಿಂದು ಬಾಹುಳ್ಯದ ಸ್ಥಳದಲ್ಲಿದ್ದ ಮುಸ್ಲಿಂ ನಾಯಕರು, ಇಲ್ಲಿ ನಿಂತು ಕೋಮು ಗಲಭೆ ನಿಯಂತ್ರಿಸಲು ಕೇಳಿಕೊಂಡರು. ಗಾಂಧಿಯವರು, ’ಬಾಂಗ್ಲಾ ದೇಶದಲ್ಲಿರುವ ಹಿಂದುಗಳಿಗೆ ರಕ್ಷಣೆ ಕೊಡುವಂತೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳುವುದಾದರೆ ತಾನು ಇಲ್ಲಿ ಇರುತ್ತೇನೆ’ ಎಂದು ಹೇಳಿದ್ದರು.
ಗಾಂಧಿಜಿಯವರಿಗೆ ಆ ರಕ್ಷಣೆಯ ಭರವಸೆ ಸಿಕ್ಕಿದ ಮೇಲೆ ಗಾಂಧಿ ಕೊಲ್ಕೊತ್ತಾದಲ್ಲಿ ನಿಂತು ಕೋಮುಗಲಭೆ ನಿಯಂತ್ರಣಕ್ಕೆ ಜೀವದ ಹಂಗು ತೊರೆದು ಪ್ರಯತ್ನಿಸಿದರು. 1947ರ ಆ.14ರ ದಿನವೂ ಗಾಂಧಿಜಿಯವರು ಗಲಭೆ ನಿಯಂತ್ರಿಸುವಲ್ಲಿ ಮತ್ತು ಸಂತ್ರಸ್ತರನ್ನು ರಕ್ಷಿಸುವುದರಲ್ಲಿ ಮಗ್ನರಾಗಿದ್ದರು. ಆದಿನ ರಾತ್ರಿ 12 ಗಂಟೆಗೆ ಕೆಂಪುಕೋಟೆಯಲ್ಲಿ ನೆಹರು ಸ್ವಾತಂತ್ರ್ಯದ ಘೋಷಣೆ ಮತ್ತು ಭಾಷಣ ಮಾಡುತ್ತಿದ್ದಾಗ ಗಾಂಽಜಿ ಕೊಲ್ಕೊತ್ತಾದ ಹಳೆಯ ಮನೆಯಲ್ಲಿ ನೆಲದ ಮೇಲೆ ದುಪ್ಪಟ್ಟಿ ಹಾಸಿ ಮಲಗಿ ನಿದ್ರಿಸುತ್ತಿದ್ದರು. ದೇಶಕ್ಕೆ ದೇಶವೇ ನಾಯಕನೆಂದು ಪರಿಗಣಿಸಿದ್ದ ಗಾಂಧಿ ಸ್ವಾತಂತ್ರ್ಯ ದಿವಸ ಎಲ್ಲಿದ್ದರು ಮತ್ತು ಏನು ಮಾಡುತ್ತಿದ್ದರು ಎಂದು ಯೋಚಿಸಿದರೆ, (ನಮ್ಮ ಈಗಿನ ನಾಯಕರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗಮನಿಸಿದರೆ) ಮೈರೋಮಾಂಚನವಾಗುವುದಿಲ್ಲವೇ?
ಆ.15ರ ಸ್ವಾತಂತ್ರ್ಯ ದಿನದಂದು ಬೆಳಗ್ಗೆ 3 ಗಂಟೆಗೆ ಎದ್ದ ಗಾಂಧಿ ತನ್ನ ಎಂದಿನ ಕೆಲಸ ಮುಗಿಸಿ ದೇಶದ ನಾಯಕರಿಗೆ, ’ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬಂದಿದೆ ಆದರೆ ಇದು ಕೋಮುಗಲಭೆಯಿಂದ ಕಂಗೆಟ್ಟ ಜನರ ಕಷ್ಟದ ಸಮಯ ಅದನ್ನು ನಿಭಾಯಿಸಿರಿ, ವಿಜ್ರಂಭಣೆ ಮಾಡುತ್ತಾ ಜನರ ಹಣ ಹಾಳು ಮಾಡಬೇಡಿ, ನಿಮಗೆ ಅಧಿಕಾರ ದೊರೆತಿರುವುದು ದೇಶದ ಜನರ ಮತ್ತು ಬಡಜನರ ಸೇವೆ ಮಾಡಲಿಕ್ಕೆ ಎಂದು ತಿಳಿದು ಸಂಯಮದಿಂದ ಕೆಲಸ ಮಾಡಿ’ ಎಂಬ ಸಂದೇಶ ಕಳಿಸಿದ್ದರು. ಅದರೊಂದಿಗೆ, ’ನನಗೆ ಆಗಸ್ಟ್ 15ರಂದು ಸ್ವಾತಂತ್ರ್ಯವನ್ನು ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಹಾಗೆಂದು ನೀವು ಸಂಭ್ರಮಿಸಬಾರದೆಂದು ನಾನು ಹೇಳುವುದಿಲ್ಲ. ದುರದೃಷ್ಟವಶಾತ್ ನಮಗೆ ಸ್ವಾತಂತ್ರ್ಯ ದೊರಕುವಾಗ ಕೋಮು ಗಲಭೆಯ ಬೀಜವನ್ನು ಬಿತ್ತಲ್ಪಟ್ಟಿರುವುದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಮುಂದಕ್ಕೆ ಸಂಘರ್ಷಕ್ಕೆ ಕಾರಣವಾಗಬಹುದು, ಹೀಗಿರುವಾಗ ನಾನು ಹೇಗೆ ದೀಪವನ್ನು ಹಚ್ಚಲಿ? ನನಗೆ ಹಿಂದು ಮುಸ್ಲಿಂರ ನಡುವಿನ ಸಾಮರಸ್ಯವೇ ಈ ಕೋಮುಗಲಭೆಯ ಸ್ವಾತಂತ್ರ್ಯದ ಘೋಷಣೆಗಿಂತ ಮುಖ್ಯವಾಗಿದೆ ಎಂದಿದ್ದರು. ಪಶ್ಚಿಮ ಬಂಗಾಲದಲ್ಲಿ ಶಾಂತಿ ನೆಲೆಸಿದ ಮೇಲೆ ಮಹಾತ್ಮಾ ಗಾಂಧಿ ಕೊಲ್ಕೊತ್ತಾದಿಂದ ಹಿಂದಿರುಗಿದರು. ಗಾಂಧಿ ಅಲ್ಲಿ ವಾಸವಿದ್ದ ಮನೆ ಈಗ ಗಾಂಽ ಸ್ಮಾರಕವಾಗಿದೆ. ಮಹಾತ್ಮ ಗಾಂಧಿಯವರ ಹೆಸರು ಇಂದಿಗೂ ಜಾಗತಿಕ ಮಾನ್ಯತೆ ಪಡೆದಿರುವುದು, ಗಾಂಧಿಯಂತಹ ವ್ಯಕ್ತಿ ಈ ಭೂಮಿಯಲ್ಲಿ ಓಡಾಡಿದ್ದರು ಎಂದು ಮುಂದಿನ ಜನಾಂಗ ನಂಬಲಿಕ್ಕಿಲ್ಲ ಎಂದು ಪ್ರಖ್ಯಾತ ವಿಜ್ಞಾನಿ ಐನ್‌ಸ್ಟಿನ್ ಹೇಳಿರುವುದು ಗಾಂಽಯವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಸ್ವಾತಂತ್ರ್ಯದ ಪ್ರಥಮ ಹೆಜ್ಜೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಹಾಗಿದ್ದರೆ ಗಾಂಧಿಜಿಯವರ ಆಶಯದ ಸ್ವಾತಂತ್ರ್ಯವೇನು? , ಭಾರತಕ್ಕೆ ಸ್ವಾತಂತ್ರ್ಯ ನೀಡುವುದನ್ನು ಬ್ರಿಟನ್‌ನ ಮಾಜಿ ಪ್ರಧಾನಿ ಚರ್ಚಿಲರು ವಿರೋಧಿಸಿದ್ದರು. ’ಭಾರತಕ್ಕೆ ಸಾತಂತ್ರ್ಯ ದೊರಕಿದರೆ ಏನಾಗುತ್ತದೆ ಎಂದು ಹೇಳಿದ್ದರು. ಜನತೆ ತಿಳಿಯಬೇಕಾಗಿದೆ. ಈಗ ನಮ್ಮ ದೇಶ ಗಾಂಧಿ ಹೇಳಿದ ಸ್ವಾತಂತ್ರ್ಯದ ಕಡೆ ನಡೆಯುತ್ತಿದೆಯೇ? ಅಥವಾ ಚರ್ಚಿಲ್‌ರ ಭವಿಷ್ಯವಾಣಿಯತ್ತ ಸಾಗುತ್ತಿದೆಯೇ? ಎಂಬ ಬಗ್ಗೆ ಜನರು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಈ ಸರಣಿ ಲೇಖನದಲ್ಲಿ ಮುಂದಿನ ವಾರ ಗಾಂಧಿ ಮತ್ತು ಚರ್ಚಿಲ್ ಹೇಳಿದ ವಿಚಾರವನ್ನು ಜನರ ಮುಂದಿಟ್ಟು ಚರ್ಚಿಸಲಾಗುವುದು.
| ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ