ಆಚಾರದೊಳಗಿನ ವಿಚಾರಗಳನ್ನು ತಿಳಿದುಕೊಂಡಾಗಲೇ ಜೀವನ ಪಾವನ: ಭಾಸ್ಕರ ಗೌಡ ಕೋಡಿಂಬಾಳ
ಪುತ್ತೂರು: ಪ್ರತಿಯೊಂದು ಆಚಾರದ ಹಿಂದೆ ಒಂದು ವಿಚಾರ ಇರುತ್ತದೆ. ಈ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ವಿಚಾರಗಳನ್ನು ಅರಿತುಕೊಂಡು ಆಚಾರಗಳನ್ನು ಪಾಲನೆ ಮಾಡಿದಾಗ ನಮ್ಮ ಜೀವನ ಪಾವನವಾಗುತ್ತದೆ ಎಂದು ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ ಅಭಿಪ್ರಾಯಪಟ್ಟರು.
ಅವರು ಒಳಮೊಗ್ರು ಗ್ರಾಮದ ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ 43 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂರನೇ ದಿನವಾದ ಸೆ.9 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಸನಾತನ ಆಚಾರ ವಿಚಾರ ಮತ್ತು ನಂಬಿಕೆ ಎಂಬ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ನಮ್ಮ ಹಿರಿಯರು ಮಾಡಿರುವ ಆಚಾರಗಳ ಹಿಂದೆ ಒಂದು ವಿಚಾರ ಇದ್ದೇ ಇರುತ್ತದೆ. ವಿಚಾರವಿಲ್ಲದ ಆಚಾರ ಯಾವುದೂ ಇಲ್ಲ, ಹುಟ್ಟಿನಿಂದ ಸಾಯುವ ತನಕದ ಆಚಾರಗಳಲ್ಲಿ ಒಂದೊಂದು ವಿಚಾರಗಳಿರುತ್ತದೆ ಎಂದ ಅವರು, ಕೆಲವೊಂದು ಆಚಾರಗಳ ಹಿಂದಿನ ವಿಚಾರಗಳನ್ನು ಸಭೆಯ ಮುಂದಿಟ್ಟು ಆಚಾರದೊಳಗಿನ ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯ ಎಂದ ಭಾಸ್ಕರ ಗೌಡ ಕೋಡಿಂಬಾಳರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ರವರು, ಎಲ್ಲರ ದೇವರಿಗಿಂತ ಮೊದಲು ಆರಾಧನೆ ಪಡೆಯುವ ಗಣಪತಿಯು ವಿಘ್ನ ನಿವಾರಕನಾಗಿ ನಮ್ಮೆಲ್ಲರನ್ನು ಕಾಪಾಡುತ್ತಿದ್ದಾನೆ. ಶ್ರದ್ಧೆ,ಭಕ್ತಿಯಿಂದ ದೇವರ ಆರಾಧನೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ಗಣೇಶನ ಆರಾಧನೆಯಿಂದ ನಮ್ಮೊಳಗಿನ ದುಷ್ಟ ಆಲೋಚನೆಗಳು ನಿರ್ಮೂಲನೆಯಾಗಿ ನಾವು ಮಾಡುವ ಎಲ್ಲಾ ಕೆಲಸಗಳು ನಿರ್ವಿಘ್ನದಿಂದ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರವರು, ಎಲ್ಲಾ ಧರ್ಮಗಳನ್ನು ಗೌರವಿಸುವುದೇ ಹಿಂದು ಧರ್ಮದ ಆಶಯವಾಗಿದೆ ಎಂದರು. ಅಕ್ಷಯ ಗ್ರೂಪ್ ಸಂಪ್ಯ ಇದರ ಮಾಲಕ, ಉದ್ಯಮಿ ಜಯಂತ ನಡುಬೈಲ್‌ರವರು, ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಬರುವ ಪ್ರವೃತ್ತಿ ಹೆತ್ತವರಲ್ಲಿ ಬರಬೇಕು ಎಂದರು. ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಎಂ.ಅಮ್ಮು ಪೂಂಜ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರವೀಣ್ ರೈಯವರಿಗೆ ಸಮಿತಿ ವತಿಯಿಂದ ಗೌರವಾರ್ಪಣೆ ನಡೆಯಿತು.ಪ್ರವೀಣ್ ರೈಯವರ ತಂದೆ ಕುಯ್ಯಾರು ಪುರಂದರ ರೈಯವರು ಗೌರವಾರ್ಪಣೆ ಸ್ವೀಕರಿಸಿದರು.
ವೇದಿಕೆಯಲ್ಲಿ ಪುತ್ತೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಮೋಹನ್ ಕುಮಾರ್ ಬೊಳ್ಳಾಡಿ, ಉದ್ಯಮಿ ನಿಹಾಲ್ ಶೆಟ್ಟಿ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರಾಜೇಶ್ ರೈ ಪರ್ಪುಂಜ ಉಪಸ್ಥಿತರಿದ್ದರು. ಶ್ರೀರಾಮ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ನೇಮಿರಾಜ್ ರೈ ಕುರಿಕ್ಕಾರ ಸ್ವಾಗತಿಸಿದರು. ಗೌರವ ಲೆಕ್ಕಪರಿಶೋಧಕ ಚಂದ್ರಕಾಂತ ಶಾಂತಿವನ, ಹರೀಶ್ ರೈ ಮುಗೇರ್, ಪದ್ಮನಾಭ ರೈ ಅರೆಪ್ಪಾಡಿ, ಶ್ರೀನಿವಾಸ ರೈ ಕುಂಬ್ರ, ವಿದ್ಯಾ, ಶಿವರಾಮ ಗೌಡ ಬೊಳ್ಳಾಡಿ, ವಿಶ್ವನಾಥ ರೈ ಕೋಡಿಬೈಲು, ಕುಂಬ್ರ ದುರ್ಗಾಪ್ರಸಾದ್ ರೈ ಅತಿಥಿಗಳಿಗೆ ಶಾಲು, ವೀಳ್ಯ ನೀಡಿ ಸ್ವಾಗತಿಸಿದರು. ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷ ರತನ್ ರೈ ಕುಂಬ್ರ ವಂದಿಸಿದರು. ಸಲಹಾ ಸಮಿತಿ ಸದಸ್ಯ ಸುಂದರ ರೈ ಮಂದಾರ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿ ಪದಾಧಿಕಾರಿಗಳು ಸಹಕರಿಸಿದ್ದರು.
ಹಣದಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ
ಇಂದಿನ ದಿನಗಳಲ್ಲಿ ದೇವರಿಗೆ ಹಣ, ಒಡವೆ ಇತ್ಯಾದಿಗಳನ್ನು ಕೊಡುವವರನ್ನು ನಾವು ಗಮನಿಸಬಹುದು ಆದರೆ ಹಣ ಅಥವಾ ಇನ್ಯಾವುದೇ ವಸ್ತುಗಳನ್ನು ಕೊಟ್ಟು ದೇವರನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಯಾಕೆಂದರೆ ನಾವು ಕೊಡುವ ಹಣ, ವಸ್ತು, ಒಡವೆಗಳನ್ನು ನಾವು ಹೇಗೆ ಸಂಪಾದಿಸಿದ್ದೇವೆ ಎನ್ನುವುದನ್ನು ದೇವರು ಗಮನಿಸುತ್ತಾರೆ. ಅನ್ಯ ಮಾರ್ಗದಿಂದ ಅಥವಾ ಇನ್ಯಾವುದೋ ರೀತಿಯಲ್ಲಿ ಸಂಪಾದಿಸಿದ ಹಣವನ್ನು ದೇವರಿಗೆ ಕೊಟ್ಟರೆ ಅದನ್ನು ದೇವರು ಸ್ವೀಕರಿಸುವುದಿಲ್ಲ ಬದಲಾಗಿ ನಾವು ಕಷ್ಟಪಟ್ಟು ಬೆವರು ಸುರಿಸಿ ದುಡಿದ ಒಂದು ರೂಪಾಯಿ ಆದರೂ ಸಾಕು ಅದನ್ನು ದೇವರು ಸ್ವೀಕರಿಸುತ್ತಾರೆ ಎಂದ ಭಾಸ್ಕರ ಗೌಡ ಕೋಡಿಂಬಾಳರವರು, ದೇವರಿಗೆ ಅರ್ಪಿಸಿದ ಹಣ, ವಸ್ತು,ಒಡವೆಗಳು ನ್ಯಾಯ ಮಾರ್ಗದಿಂದ ಸಂಪಾದಿಸಿದ್ದು ಆಗಿರಬೇಕು ಎಂದು ಹೇಳಿದರು.
ವೈಧಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಿಗ್ಗೆ ವೈಧಿಕ ಕಾರ್ಯಕ್ರಮ, ಶ್ರೀಸಿದ್ಧಿವಿನಾಯಕ ಮ್ಯೂಸಿಕಲ್ ಟ್ರೂಪ್ ಕುಂಬ್ರ ಇವರಿಂದ ಭಕ್ತಿ ರಸಮಂಜರಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಶ್ರೀಕೃಷ್ಣ ಯಕ್ಷಗಾನ ಕಲಾ ಸಂಘ ಕೌಡಿಚ್ಚಾರು ಇದರ ಬಾಲ ಪ್ರತಿಭೆಗಳಿಂದ ಯಕ್ಷಗಾನ ಬಯಲಾಟ ಪಾಂಚಜನ್ಯ ನಡೆಯಿತು.
ಇಂದು ಸಂಜೆ ಶೋಭಾಯಾತ್ರೆ
ಮೂರು ದಿನಗಳ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹದ ವಿಸರ್ಜನಾ ಮೆರವಣಿಗೆ ಸೆ.9 ರಂದು ಸಂಜೆ ನಡೆಯಲಿದೆ. ಸಂಜೆ ಶ್ರೀರಾಮ ಭಜನಾ ಮಂದಿರದಿಂದ ಹೊರಟು ತಿಂಗಳಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣೇಶ ವಿಗ್ರಹದ ಜೊತೆ ಕುಂಬ್ರ ಕಟ್ಟೆಯಲ್ಲಿ ಪೂಜೆ ಸ್ವೀಕರಿಸಿ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಗಣೇಶ ವಿಗ್ರಹದ ಅದ್ಧೂರಿ ಮೆರವಣಿಗೆ ನಡೆದು ಅರಿಯಡ್ಕ ಗ್ರಾಮದ ಶೇಖಮಲೆ ಪುಣ್ಯ ನದಿಯಲ್ಲಿ ಎರಡು ಗಣೇಶ ವಿಗ್ರಹದ ಜಲಸ್ಥಂಭನ ನಡೆಯಲಿದೆ.