ಕಾವು:ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾವು ಇದರ ವತಿಯಿಂದ 41 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಸೆ.7 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ
ಬೆಳಿಗ್ಗೆ 6.30 ಕ್ಕೆ ಅರ್ಚಕರಾದ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯದಲ್ಲಿ ವಿಗ್ರಹ ಪ್ರತಿಷ್ಟೆ, ಬೆಳಿಗ್ಗೆ 9 ಗಂಟೆಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ಭಗವಾದ್ವಜಾರೋಹನ
ಗಣೇಶ ಪ್ರತಿಷ್ಟೆ ಬಳಿಕ ಭಗವಾದ್ವಜಾರೋಹಣ ನಡೆಯಿತು, ಕೇಶವ ಮೂರ್ತಿ ಪಿ ಜಿ ಪಟ್ಟಾಜೆ ಭಗವಾದ್ವಜಾರೋಹಣ ನೆರವೇರಿಸಿದರು,ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಅಧ್ಯಕ್ಷರಾದ ನವೀನ ನನ್ಯ ಪಟ್ಟಾಜೆ,ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ಉಪಸ್ಥಿತರಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿದ್ಧ ವಿವೇಕಾನಂದ ಮಹಾ ವಿದ್ಯಾಲಯ ಪುತ್ತೂರು ಇದರ ಪತ್ರಿಕೋದ್ಯಮ ವಿದ್ಯಾರ್ಥಿ ಹರಿಪ್ರಸಾದ್ ಈಶ್ವರಮಂಗಲ ಮಾತನಾಡಿ ಸನಾತನ ಪರಂಪರೆ,ಸನಾತನ ಆಚರಣೆ, ಸನಾತನ ನಾಗರೀಕತೆ ಎಂಬುವುದು ಜಗತ್ತಿನ ಅತೀ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದು. ಇತರ ನಾಗರೀಕತೆಗಳು ಗರ್ಭಾವಸ್ಥೆಯನ್ನು ಪಡೆಯುವ ಮೊದಲೇ ಜಗತ್ತಿಗೆ ಜ್ಯೋತಿಯಾಗಿ ನಿಂತ ರಾಷ್ಟ್ರ ಭಾರತ. “ಗಣೇಶೋತ್ಸವ” ಇದು ಬರೀ ಹಬ್ಬವಲ್ಲ.ಸ್ವಾತಂತ್ರ್ಯ ಯಜ್ಞಕ್ಕೆ ಸಮಿದೆಗಳನ್ನು ಸಿದ್ದ ಪಡಿಸಿದ ಮಹಾನ್ ಶಕ್ತಿ.ಬ್ರಿಟಿಷರ ವಿರುದ್ಧ ಸಿಂಹ ಘರ್ಜನೆ ಮಾಡಲು ದೊರೆತ ಧಾರ್ಮಿಕ ಸ್ಪೂರ್ತಿ.ಗಣಪ ಗುಡಿಗೆ ಮಾತ್ರ ಸೀಮಿತವಲ್ಲ,ಆತ ಜನರ ಮಧ್ಯೆ ಇರಬೇಕು ಎಂಬ ಧ್ಯೇಯದೊಂದಿಗೆ, ಬಾಲಗಂಗಾಧರ ತಿಲಕರಂತಹ ನೇತಾರರು ಸಾರ್ವಜನಿಕ ಗಣೇಶೋತ್ಸವಕ್ಕೆ ಶಕ್ತಿ ತುಂಬಿದರು. ಆ ಕಾಲದಲ್ಲಿ ಗಣೇಶೋತ್ಸವ ಮಾಡಿದ ಕ್ರಾಂತಿ ಅಂತಿಂತದಲ್ಲ.ಧಾರ್ಮಿಕ ಶಕ್ತಿ ಒಂದು ಗೂಡಿದಾಗ ಬ್ರಿಟಿಷರ ಸೂರ್ಯ ಮುಳುಗದ ಸಾಮ್ರಾಜ್ಯ ಹಿಂದೂ ಸಾಗರದೆದುರು ಹೇಗೆ ಕೊಚ್ಚಿಕೊಂಡು ಹೋಯಿತು ಎಂಬುದು ಗಣೇಶೋತ್ಸವ ತೋರಿಸಿದೆ. ಗಣೇಶೋತ್ಸವದಿಂದ ಸ್ವರಾಜ್ಯದ ಸಂಕಲ್ಪ ಸಾಕಾರವಾಗಿದೆ. ಇಂದು ಭ್ರಷ್ಟಾಚಾರ ಮುಕ್ತ, ಭಯ ಮುಕ್ತ, ಕೊಲೆ ಸುಲಿಗೆ ಅತ್ಯಾಚಾರ ಧಾರ್ಮಿಕ ಮತಾಂಧತೆ ಮುಕ್ತ ಸ್ವರಾಜ್ಯದ ನಿರ್ಮಾಣ ಆಗಬೇಕು.ಈ ಸಂಕಲ್ಪವನ್ನು ಈ ಗಣೇಶೋತ್ಸವದಲ್ಲಿ ನಾವೆಲ್ಲರೂ ಮಾಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ,ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿ ಗೋಪಾಲ ಕೆ ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರ ಚಂದ್ರ ಶೇಖರ ರಾವ್ ನಿಧಿಮುಂಡ ಉಪಸ್ಥಿತರಿದ್ದರು .ಸಮಿತಿಯ ಪೂರ್ವ ಅಧ್ಯಕ್ಷ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,ಸಮಿತಿಯ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ ವಂದಿಸಿದರು, ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಾರ್ಷಿಕ ವರದಿ ವಾಚಿಸಿದರು. ವಿಜಯಲಕ್ಸ್ಮಿ ಮತ್ತು ದೀಪಿಕಾ ಪ್ರಾರ್ಥಿಸಿದರು, ಸಮಿತಿಯ ಕೋಶಾಧಿಕಾರಿ ಕೃಷ್ಣಪ್ರಸಾದ್ ಕೊಚ್ಚಿ ಕಾರ್ಯಕ್ರಮ ನಿರ್ವಹಿಸಿದರು.
ವಿಗ್ರಹ ದಾನಿಗಳಿಗೆ ಗೌರವಾರ್ಪಣೆ
ಗಣೇಶ ವಿಗ್ರಹ ದಾನಿಗಳಾಗಿರುವ ಭಾಸ್ಕರ ಬಲ್ಯಾಯ ಅಭಿಜ್ಞಾನ ಕಾವು ಇವರಿಗೆ ಶಾಲು,ಸ್ಮರಣಿಕೆ ,ಪ್ರಸಾದ ನೀಡಿ ಗೌರವಿಸಲಾಯಿತು.
ಭಜನಾ ಸೇವಾ ಕಾರ್ಯಕ್ರಮ
ಬೆಳಿಗ್ಗೆ ಮಹಾಗಣಪತಿ ಭಜನಾ ಮಂಡಳಿ ಗೆಳೆಯರ ಬಳಗ ಕಾವು,ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿ ಮಾಣಿಯಡ್ಕ, ಓಂ ಶ್ರೀ ಭಜನಾ ಸಂಘ ಪಳನೀರು, ಶ್ರೀ ಪಂಚಲಿಂಗೇಶ್ವರ ಭಜನಾ ತಂಡ ಕಾವು, ತುಡರ್ ಭಜನಾ ಸಂಘ ನನ್ಯ, ತುಡರ್ ಮಾತೃ ಭಜನಾ ಮಂಡಳಿ ನನ್ಯ ಕಾವು,ಸುಜ್ಞಾನ ಮಕ್ಕಳ ಕುಣಿತ ಭಜನಾ ತಂಡ ನನ್ಯ ಕಾವು ಇವರುಗಳಿಂದ ಭಜನಾ ಸೇವೆ ನಡೆಯಿತು.
ಭಗವಾದ್ವಜಾವರೋಹನ,ಶ್ರೀ ವಿನಾಯಕನ ಆಕರ್ಷಕ ಶೋಭಾಯಾತ್ರೆ
ಸಂಜೆ 3 ಗಂಟೆಗೆ ಭಗವಾದ್ವಜಾವರೋಹನ ನಡೆಯಿತು. ಸಮಿತಿ ಸದಸ್ಯರಾದ ಚಂದ್ರಶೇಖರ ಪಾಟಾಳಿ ಪಟ್ಟುಮೂಲೆ ನೇರವೇರಿಸಿದರು.ಬಳಿಕ ಶ್ರೀ ವಿನಾಯಕನ ಆಕರ್ಷಕ ಶೋಭಯಾತ್ರೆ ಹೊರಟು ಪಂಚವಟಿ ನಗರ,ಶಿವಪೇಟೆ ಮೂಲಕ ಸಾಗಿ ಆಮ್ಚಿನಡ್ಕ ಸೀರೆ ಹೊಳೆಯಲ್ಲಿ ಜಲಸ್ತ0ಬನ ನಡೆಯಿತು.ಶೋಭಯಾತ್ರೆಗೆ ವಿವಿಧ ಕುಣಿತ ಭಜನಾ ತಂಡಗಳು, ಗೊಂಬೆ ಕುಣಿತ ಮೆರುಗು ನೀಡಿದರು,ಸಂಜೆ 7 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವರಿಗೆ ಸೋಮವಾರ ಪೂಜೆ ನಡೆಯಿತು.