ವಿಧಾನ ಪರಿಷತ್ ಉಪಚುನಾವಣೆ: R C ನಾರಾಯಣ ಅವರಿಗೆ ಸಿಗುತ್ತಾ ಚಾನ್ಸ್!?

0

ಬೊಮ್ಮಾಯಿ ನೇತೃತ್ವದಲ್ಲಿ ಸಭೆ – ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮಧ್ವರಾಜ್ ಹೆಸರು ರೇಸ್‌ನಲ್ಲಿ

ಪುತ್ತೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಶೀಘ್ರದಲ್ಲಿಯೇ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಸಹಿತ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತದಾರರಾಗಿರುವ ಈ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷರೂ ಆಗಿರುವ ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಸಚಿವರಾಗಿರುವ ಉಡುಪಿಯ ಪ್ರಭಾವಿ ರಾಜಕಾರಣಿ ಪ್ರಮೋದ್ ಮಧ್ವರಾಜ್ ಹೆಸರು ಪ್ರಮುಖವಾಗಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ಶೀಘ್ರವೇ ಚುನಾವಣೆ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಸ್ಥಾನಕ್ಕೆ ಈಗಾಗಲೇ ನೀಡಿರುವ ರಾಜೀನಾಮೆ ಅಂಗೀಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಉಪಚುನಾವಣೆ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ವಿಧಾನ ಪರಿಷತ್‌ನ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದೆ.

ಹಕ್ಕು ಮಂಡಿಸಿದ ಆರ್.ಸಿ.ಎನ್.
ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗೆ ತನ್ನ ಹೆಸರನ್ನೂ ಪರಿಗಣಿಸಬೇಕು ಎಂದು ಬಿಜೆಪಿ ಮುಂದಾಳು ಆರ್.ಸಿ. ನಾರಾಯಣ ಹಕ್ಕು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 36 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ವಿವಿಧ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದೇನೆ. ಪುತ್ತೂರಿನಲ್ಲಿ ಈಗ ಬಿಜೆಪಿ (BJP) ಶಾಸಕರು ಇಲ್ಲ. ಹಾಗಾಗಿ ಎಂಎಲ್‌ಸಿ ಸ್ಥಾನವನ್ನು ಪುತ್ತೂರಿಗೆ ನೀಡಬೇಕು. ಇದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ.

ಅಲ್ಲದೆ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯದವರಿಗೆ ಅವಕಾಶ ನೀಡುವುದಕ್ಕಾಗಿ ತನ್ನ ಹೆಸರನ್ನು ಗಣನೆಗೆ ತೆಗೆದುಕೊಂಡು ನನಗೆ ಅವಕಾಶ ನೀಡಬೇಕು ಎಂದು ಆರ್.ಸಿ. ನಾರಾಯಣ ಅವರು ಪಕ್ಷದ ಪ್ರಮುಖರಲ್ಲಿ ಮನವಿ ಮಾಡಿದ್ದಾರೆ. ಅವಕಾಶ ನೀಡದೇ ಇದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಲ್ಲವ ಸಮುದಾಯದವರೇ ಆಗಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಹೆಸರೂ ಕೇಳಿ ಬರುತ್ತಿದೆ. ಆದರೆ ಅವರಿಗೆ ಈಗಾಗಲೇ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಮತ್ತು ಅವರು ಹಾಲಿ ಜಿಲ್ಲಾಧ್ಯಕ್ಷರಾಗಿರುವುದರಿಂದ ಅವರ ಹೆಸರನ್ನು ತಟಸ್ಥಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಾಜಿ ಮುಖ್ಯಮಂತ್ರಿಯಾಗಿರುವ ಹಾವೇರಿ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ಹೈಕಮಾಂಡ್ ನೇಮಕ ಮಾಡಿದ್ದು ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮಹತ್ವದ ಸಭೆ ನಡೆದಿದೆ. ಸಂಘಟನಾತ್ಮಕವಾಗಿ ಪಕ್ಷ ಕಾರ್ಯ ನಿರ್ವಹಿಸುವ ವಿಧಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಚುನಾವಣಾ ಕಣದ ಬಗ್ಗೆ ವಿಶ್ಲೇಷಣೆ ನಡೆಸಿದ ಪ್ರಮುಖರು ಬಳಿಕ ಮುಖಂಡರ ಅಭಿಪ್ರಾಯ ಆಲಿಸಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ಭಾಗವಹಿಸಿದ್ದರು.

ಹಲವರು ರೇಸ್‌ನಲ್ಲಿ: ವಿಧಾನ ಪರಿಷತ್ ಉಪಚುನಾವಣೆಯ ರೇಸ್‌ನಲ್ಲಿ ಹಲವರ ಹೆಸರು ಕಾಣಿಸಿಕೊಂಡಿದೆ. ಈ ಪೈಕಿ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಸಚಿವರಾಗಿರುವ ಉಡುಪಿಯ ಪ್ರಭಾವಿ ನಾಯಕ ಪ್ರಮೋದ್ ಮಧ್ವರಾಜ್ ಹೆಸರು ಪ್ರಮುಖ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಸದ ಸ್ಥಾನವನ್ನೂ ನಿರಾಕರಿಸಲಾಗಿದೆ.

ಹಾಗಿದ್ದರೂ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ನಳಿನ್ ಕುಮಾರ್ ಅವರನ್ನು ವಿಧಾನ ಪರಿಷತ್ ಚುನಾವಣೆಯ ಕಣಕ್ಕಿಳಿಸಬೇಕು ಎಂದು ಕರಾವಳಿ ಭಾಗದ ಬಿಜೆಪಿಯ ಶಾಸಕರು ಮತ್ತು ಮಾಜಿ ಶಾಸಕರು ಒತ್ತಾಯಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಭಾಗದವರು ಆಗಿರುವುದರಿಂದ ಅವರಿಂದ ತೆರವಾಗುವ ಸ್ಥಾನಕ್ಕೆ ಉಡುಪಿಯವರಿಗೇ ಅವಕಾಶ ನೀಡಬೇಕು. ಆದ್ದರಿಂದ ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ಕೊಡಬೇಕು ಎಂದು ಆ ಭಾಗದವರಿಂದ ಆಗ್ರಹ ವ್ಯಕ್ತವಾಗಿದೆ. ಇನ್ನೊಂದೆಡೆ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಮತ್ತು ಜಿಲ್ಲಾ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರ ಹೆಸರು ಕೂಡಾ ಕೇಳಿ ಬಂದಿದೆ. ಕೆಲವೇ ದಿನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದೆ.

LEAVE A REPLY

Please enter your comment!
Please enter your name here