ಪ್ರೌಢ ಶಾಲಾ ಮಟ್ಟದ ಸ್ಪರ್ಧೆಯ ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭ
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾಮಟ್ಟದ ‘ಫಿಲೋ ಪ್ರತಿಭಾ – 2024’ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 13ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ಇಂಪೀರಿಯಲ್ ಫರ್ನಿಚರ್ ನ ಮಾಲಕರಾದ Violet pinto ಮಾತನಾಡಿ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರತಿಭೆ ಅನಾವರಣಗೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಈ ಕಾಲೇಜು ಕೇವಲ ವಿಧ್ಯಾಭ್ಯಾಸದ ಕೇಂದ್ರವಾಗಿರದೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಇಲ್ಲಿನ ಉಪನ್ಯಾಸಕರ ಸಮರ್ಪಣಾ ಭಾವ ಮತ್ತು ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ, ಸಂಸ್ಥೆಯು ನೀಡುವ ಮೌಲ್ಯದಾರಿತವಾದ ಗುಣಮಟ್ಟದ ಶಿಕ್ಷಣವನ್ನು ಗಮನಿಸಿದ ನಾನು ನನ್ನ ಇಬ್ಬರು ಮಕ್ಕಳನ್ನು ಇದೆ ಕಾಲೇಜಿನಲ್ಲಿ ಸೇರಿಸಿದ್ದೇನೆ. ಇಲ್ಲಿನ ವಾತಾವರಣ ವಿದ್ಯಾಭ್ಯಾಸಕ್ಕೆ ಪೂರಕವಾಗಿದೆ. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಎಲ್ಲರಿಗೂ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಪುತ್ತೂರಿನ ಪ್ರಸಿದ್ಧ ದಂತ ವೈದ್ಯರಾದ ಡಾ. ಶ್ರೀ ಪ್ರಕಾಶ್ ಬಿ, ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಫಿಲೋ ಪ್ರತಿಭಾ-2024ರ ಸಂಯೋಜಕರಾದ ಡಾ. ಆಶಾ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಬಾರಿಯ ‘ಫಿಲೋ ಪ್ರತಿಭಾ-2024’ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ದ್ವಿತೀಯ ಸ್ಥಾನವನ್ನು ಹಾಗೂ ಸೈಂಟ್ ವಿಕ್ಟರ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ರಸಪ್ರಶ್ನೆ, ಕನ್ನಡ ಹಾಗೂ ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ಮಣ್ಣಿನ ಮಾದರಿ ತಯಾರಿ, ವಿಜ್ಞಾನ ಮಾದರಿ ತಯಾರಿ, ಜಾನಪದ ಗಾಯನ ಸ್ಪರ್ಧೆ, ಕೊಲಾಜ್ ತಯಾರಿಕೆ, ಸ್ಟ್ಯಾಂಡ್ ಅಪ್ ಕಾಮಿಡಿ, ಜಾಹೀರಾತು ಸ್ಪರ್ಧೆ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ , ಫೇಸ್ ಪೈಂಟಿಂಗ್ ಹಾಗೂ ನೃತ್ಯ ಸ್ಪರ್ಧೆ ಹೀಗೆ 13 ಸ್ಪರ್ಧೆಗಳಲ್ಲಿ 28 ಪ್ರೌಢಶಾಲೆಗಳಿಂದ 600 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾದ ಹರ್ಷಿತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಸಂಜಯ್ ಎಸ್ ವಂದಿಸಿದರು.