ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ರೋಟರಿಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ ಯುವ ರೆಡ್ಕ್ರಾಸ್ ಘಟಕ ವಿವೇಕಾನಂದ ಪಾಲಿಟೆಕ್ನಿಕ್ ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ದೀಪ ಬೆಳಗಿಸುವುದರ ಮೂಲಕ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ ಉದ್ಘಾಟನೆ ನೆರವೇರಿಸಿ ರಕ್ತದ ಅಗತ್ಯವಿದ್ದಾಗ ರಕ್ತದಾನ ಮಾಡಿದರೆ ಅದನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡುವಲ್ಲಿ ಸಹಾಯವಾಗುತ್ತದೆ. ಇದೊಂದು ಉತ್ತಮ ಕಾರ್ಯ ಎಂದು ಹೇಳಿ ಶುಭಹಾರೈಸಿದರು. ಮುಖ್ಯಅತಿಥಿ ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಸೀತಾರಾಮ ಭಟ್ ಮಾತನಾಡಿ ಯಾವುದೇ ದಾನ ಮಾಡಿದಾಗ ನಾವು ನಮ್ಮಲ್ಲಿದ್ದದ್ದನ್ನು ಕಳೆದುಕೊಳ್ಳುತ್ತೇವೆ. ಆದರೆ ರಕ್ತದಾನದಿಂದ ನಾವು ಗಳಿಸುವುದೇ ಹೆಚ್ಚು. ರಕ್ತ ಎಂದರೆ ಪೋಷಕ ದ್ರವ್ಯ. ರಕ್ತಕ್ಕೆ ಪರ್ಯಾಯ ವಸ್ತು ಯಾವುದೂ ಇಲ್ಲ. ಇದು ದೇಹದಲ್ಲಿ ಸಂಚರಿಸಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ರಕ್ತದಲ್ಲಿರುವ ವಿವಿಧ ಅಂಶಗಳು ಅವುಗಳ ಕಾರ್ಯಪ್ರವೃತ್ತಿಯ ಬಗ್ಗೆ ಬಹಳ ಉಪಯುಕ್ತ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಾಲಿಟೆಕ್ನಿಕ್ನ ಸಂಚಾಲಕ ಮಹಾದೇವ ಶಾಸ್ತ್ರೀ ಮಣಿಲ ಮಾತನಾಡುತ್ತಾ ರಕ್ತದಾನ ಒಂದು ಪುಣ್ಯದ ಕೆಲಸ. ಈ ಕಾರ್ಯದಲ್ಲಿ ಭಾಗಿಗಳಾಗಿ ಎಂದು ನುಡಿದರು. ಈ ಸಂದರ್ಭದಲ್ಲಿ 75 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮಹಮ್ಮದ್ ಸಾಹೇಬ್, ರೋಟರಿ ಕ್ಲಬ್ ಕಾರ್ಯದರ್ಶಿ ರಾಮಚಂದ್ರ, ಪಾಲಿಟೆಕ್ನಿಕ್ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ, ರೋಟರಿ ಸದಸ್ಯರಾದ ಮಾರ್ಟಿಸ್, ಆಡಳಿತ ಮಂಡಳಿಯ ಸದಸ್ಯ ರವಿ ಮುಂಗ್ಲಿಮನೆ, ಅಚ್ಯುತ ಪ್ರಭು, ಈಶ್ವರಚಂದ್ರ, ವೈದ್ಯಕೀಯ ತಂಡ, ಎಬಿವಿಪಿ ಘಟಕದ ಸದಸ್ಯರು, ಉಪನ್ಯಾಸಕ, ಉಪನ್ಯಾಸಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಪ್ರಾಂಶುಪಾಲ ಮುರಳಿಧರ್ ಎಸ್. ಸ್ವಾಗತಿಸಿದರು. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಪ್ರಜ್ವಲ್ ವಂದಿಸಿದರು. ಸುಜನ್ಯ ತಂಡದವರು ಪ್ರಾರ್ಥಿಸಿದರು. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ನ ವಿಜೇತ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ಕುಮಾರ್ ಉಪನ್ಯಾಸಕರು ಮೆಕ್ಯಾನಿಕಲ್ ವಿಭಾಗ ಹಾಗೂ ಅನಿಲ್ ಕುಮಾರ್ ಮೆಕ್ಯಾನಿಕಲ್ ವಿಭಾಗ ಕಾರ್ಯಕ್ರಮ ಆಯೋಜಿಸಿದ್ದರು.