ಒಂದೇ ನೋಂದಣಿ ಸಂಖ್ಯೆಯ ನಂಬರ್ ಪ್ಲೇಟ್ ವಿವಿಧ ವಾಹನಗಳ ಓಡಾಟ!-ಕ್ರಮಕ್ಕೆ ಆಗ್ರಹ

0

*ತಪ್ಪೆಸಗದೇ ಇದ್ದರೂ ದ್ವಿಚಕ್ರ ವಾಹನ ಮಾಲಕನಿಗೆ ಸಾರಿಗೆ ಇಲಾಖೆ ನೋಟೀಸ್
*ಹೆಲ್ಮೆಟ್ ರಹಿತ ಪ್ರಯಾಣವೆಂದು ರಿಕ್ಷಾ ಚಾಲಕನಿಗೆ ನೋಟೀಸ್-ದಂಡ ಪಾವತಿಸಲು ಸೂಚನೆ

ಉಪ್ಪಿನಂಗಡಿ: ವಾಹನಗಳ ಮೂಲಕ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸರಕಾರ ಜಾರಿಗೊಳಿಸಿದ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳ ಅಳವಡಿಕೆಗೆ ಗಡುವು ವಿಧಿಸುತ್ತಿದ್ದಂತೆಯೇ ಒಂದೇ ನಂಬರ್ ಗಳಲ್ಲಿ ಹಲವು ವಾಹನಗಳು ಸಂಚರಿಸುತ್ತಿದ್ದು, ನೈಜ ನಂಬರ್ ಹೊಂದಿದ್ದ ವಾಹನ ಮಾಲಕರು ದಂಡನೆಗೆ ತುತ್ತಾಗುವ ದುಸ್ಥಿತಿ ನಿರ್ಮಾಣವಾಗಿದ್ದು, ವ್ಯವಸ್ಥೆಯ ಲೋಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.


ಕೆ ಎ 21 ಇಸಿ 0760 ಸಂಖ್ಯೆಯ ನಂಬರ್ ಪ್ಲೇಟ್ ಹೊಂದಿದ್ದ ದ್ವಿಚಕ್ರ ವಾಹನವೊಂದರ ಮಾಲಕರಿಗೆ ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ ನೀಡಿ 2500/- ರೂಪಾಯಿ ದಂಡ ಪಾವತಿಸಲು ಸೂಚಿಸಲಾಗಿತ್ತು. ಆದರೆ ಯಾವ ಸ್ಥಳದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಲಾಗಿದೆ ಎಂದು ತಿಳಿಸಲಾಗಿತ್ತೋ ಆ ಸ್ಥಳಕ್ಕೆ ಆ ವಾಹನ ಮಾಲಕರು ಹೋಗಿಯೇ ಇರಲಿಲ್ಲ. ಈ ಕಾರಣಕ್ಕೆ ತಪ್ಪೆಸಗದೆ ದಂಡ ಪಾವತಿಸಲಾರೆನೆಂದು ಅವರು ವಾದಿಸಿದ್ದರೂ, ಸಾರಿಗೆ ಇಲಾಖೆಯ ದಾಖಲೆಯಲ್ಲಿ ದಂಡ ಪಾವತಿಸದೇ ಇರುವ ಪ್ರಕರಣ ಹಾಗೆಯೇ ಉಳಿಯುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಪರಿಶೀಲಿಸಿದಾಗ ಇದೇ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿದ ಬೇರೊಂದು ದ್ವಿ ಚಕ್ರ ವಾಹನ ಸಂಚರಿಸುತ್ತಿರುವುದು ದೃಢಪಟ್ಟಿದೆ. ಇಲ್ಲಿ ನಕಲಿ ನಂಬರ್ ಪ್ಲೇಟ್ ಬಳಕೆಯ ಪ್ರಕರಣಗಳು ನಡೆಯುತ್ತಿರುವ ಶಂಕೆ ಉದ್ಭವಿಸಿದೆ.


ಇನ್ನೊಂದೆಡೆ , ಉಪ್ಪಿನಂಗಡಿಯ ಅಟೋ ರಿಕ್ಷಾ ಚಾಲಕ ರೋಹಿತ್ ಎಂಬವರಿಗೆ, ನೀವು ಸಾರಿಗೆ ಇಲಾಖೆಯಿಂದ ದಂಡ ಪಾವತಿಸುವ ಸಂದೇಶವೊಂದು ಬಂದಿದ್ದು, ಅದರಲ್ಲಿ ನೀವು ಮೈಸೂರು ರಸ್ತೆಯ ತಲಕಾಡು ಜಂಕ್ಷನ್ ನಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನವನ್ನು ಸವಾರಿ ಮಾಡಿದ್ದರಿಂದ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದೀರಿ. ಅದಕ್ಕಾಗಿ 500 ರೂಪಾಯಿ ದಂಡ ಪಾವತಿಸಲು ಸೂಚಿಸಲಾಗಿತ್ತು. ಮೊದಲನೆಯದಾಗಿ ಅವರಲ್ಲಿ ಯಾವುದೇ ದ್ವಿಚಕ್ರ ವಾಹವಿರಲಿಲ್ಲ. ಉಲ್ಲೇಖಿಸಲಾದ ಸಂಖ್ಯೆಯು ಅವರಲ್ಲಿರುವ ಅಟೋ ರಿಕ್ಷಾದ್ದಾಗಿತ್ತು. ಅವರು ತಲಕಾಡು ಜಂಕ್ಷನ್ ಗೆ ಹೋದದ್ದೇ ಇಲ್ಲ. ಹೀಗಿರುವಾಗ ತಾನು ಹೆಲ್ಮೆಟ್ ಧರಿಸದೆ ಸಂಚರಿಸಿದ ಆರೋಪಕ್ಕೆ ತುತ್ತಾದ ಬಗ್ಗೆ ಹೇಗೆ ಎನ್ನುವುದು ಅವರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.


ಇಲ್ಲಿ ಹಣ ಕಬಳಿಸುವ ಜಾಲದಿಂದ ಬಿತ್ತವಾದ ಸುಳ್ಳು ಸಂದೇಶವಾಗಿರಬಹುದೆಂಬ ಶಂಕೆ ಒಂದೆಡೆ ಮೂಡಿದರೆ, ಇನ್ನೊಂದೆಡೆ ಇದೇ ನಂಬರ್ ಹೊಂದಿರುವ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ದ್ವಿಚಕ್ರ ವಾಹನವೊಂದು ಆ ಪರಿಸರದಲ್ಲಿ ಸಂಚರಿಸುತ್ತಿರುವ ಸಾಧ್ಯತೆಯೂ ಇದೆ.


ಒಂದು ಬಾರಿ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣ ದಾಖಲುಗೊಂಡರೆ ಸದ್ರಿ ನೊಂದಣಿಯ ವಾಹನದ ಬಗೆಗಿನ ಸಾರಿಗೆ ಇಲಾಖೆಯ ದಾಖಲೆಯಲ್ಲಿ ದಂಡ ಬಾಕಿ ಎಂಬುವುದು ಹಾಗೆಯೇ ಉಳಿದಿರುತ್ತದೆ. ಇದರಿಂದ ವಾಹನ ಮಾರಾಟದಂತಹ ಪ್ರಕ್ರಿಯೆಗಳ ಸಮಯದಲ್ಲಿ ವಾಹನದ ನೈಜ ಮಾಲಕರಿಗೆ ತೊಂದರೆಗಳಾಗುವ ಸಾಧ್ಯತೆ ಮೂಡುವುದು . ಈ ಕಾರಣಕ್ಕೆ ಈ ರೀತಿಯ ನಕಲಿ ಪ್ಲೇಟ್ ಬಳಸಿ ವಾಹನ ಚಲಾಯಿಸುವ ಕೃತ್ಯಗಳನ್ನು ಹಾಗೂ ನಕಲಿ ನಂಬರ್ ಪ್ಲೇಟ್ ಅಳವಡಿಸುವ ಅಡ್ಡೆಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕಾದ ಅಗತ್ಯತೆ ಇದೆ.


ನಾಗರಿಕ ಸಮಾಜದ ಸಹಕಾರ ಅತ್ಯಗತ್ಯ: ವೃತ್ತ ನಿರೀಕ್ಷಕ ರವಿ ಬಿ ಎಸ್
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ ಎಸ್ ರವರು, ಮೇಲ್ನೋಟಕ್ಕೆ ಯಾವುದೇ ವಾಹನಗಳ ನಂಬರ್ ಪ್ಲೇಟುಗಳನ್ನು ಅಸಲಿಯೋ ನಕಲಿಯೋ ಎಂದು ಗುರುತಿಸುವುದು ಕಷ್ಠ ಸಾಧ್ಯ. ಎಲ್ಲಾ ದಾಖಲೆಗಳ ಪರಿಶೀಲನೆಯ ಸಂಧರ್ಭದಲ್ಲಿ ವಾಹನಗಳ ಅಸಲಿತನ ದೃಢಪಡುವುದಾಗಿದೆ. ಸಂಶಯವಿರುವ ವಾಹನಗಳ ಬಗ್ಗೆ ನಾಗರಿಕ ಸಮಾಜ ಪೊಲೀಸ್ ಇಲಾಖೆಯನ್ನಾಗಲಿ, ಸಾರಿಗೆ ಇಲಾಖೆಯನ್ನಾಗಲಿ ಸಂಪರ್ಕಿಸಿ ಮಾಹಿತಿ ನೀಡಿದರೆ ಅಗತ್ಯ ಕ್ರಮ ಜರುಗಿಸಬಹುದಾಗಿದೆ. ಈಗಾಗಲೇ ಬೇರೆಲ್ಲೋ ನಿಯಮ ಉಲ್ಲಂಘಿಸಿ ಸಂಚರಿಸಿದೆ ಎಂದು ಇನ್ಯಾರಿಗೋ ನೋಟೀಸು ಬಂದರೆ, ಅವರು ಆ ಬಗ್ಗೆ ಸಂಬಂಧಿತ ಇಲಾಖೆಗೆ ಅಗತ್ಯ ದಾಖಲೆಯೊಂದಿಗೆ ಸತ್ಯಾಂಶವನ್ನು ಮನವರಿಕೆ ಮಾಡಿಕೊಟ್ಟು, ದಂಡ ಪ್ರಕ್ರಿಯೆಯಿಂದ ತಮ್ಮ ವಾಹನವನ್ನು ಮುಕ್ತಗೊಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ತಿಳಿಸಿದ್ದಾರೆ.


ವಾಹನ ಸಂಬಂಧಿತ ದಾಖಲೆಗಳ ಪರಿಶೀಲನೆ ಕಟ್ಟುನಿಟ್ಟಾಗಿರಲಿ . . .
ಒಂದು ವಾಹನದ ದಾಖಲೆಯಲ್ಲಿ ಹಲವು ವಾಹನಗಳು ಸಂಚರಿಸುವುದು, ಅಪಘಾತವಾದರೆ ಕೃತ್ಯದಿಂದ ನುಣುಚಿಕೊಳ್ಳುವುದು, ಮೊದಲಾದ ಪ್ರಕರಣಗಳಲ್ಲಿ ಸಂತ್ರಸ್ತರು ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುತಾರೆ. ಈ ಕಾರಣಕ್ಕೆ ಬೀದಿಗಿಳಿಯುವ ಯಾವುದೇ ವಾಹನಗಳು ಪರಿಪೂರ್ಣ ದಾಖಲೆಗಳನ್ನು ಹೊಂದಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಂಬಂಧಿತ ಇಲಾಖೆಯದ್ದಾಗಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವ ಮಂದಿಯನ್ನೂ ಹಾಗೂ ನಕಲಿ ನಂಬರ್ ಪ್ಲೇಟ್ ಅಳವಡಿಸುವ ಜಾಲವನ್ನು ದಂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೀರ್ತನ್ ಕುಮಾರ್ ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here